ಅಕಾಲಿಕ ಮಳೆಯಿಂದ ಕೃಷಿ ಅತಂತ್ರ

0
15

ಚಿಕ್ಕನಾಯಕನಹಳ್ಳಿ:


      ಅರಣ್ಯ ನಾಶದಿಂದ ಪರಿಸರ ಸಮತೋಲನ ವ್ಯತಿರಿಕ್ತವಾಗಿದೆ. ಅಕಾಲಿಕ ಮಳೆಯಿಂದ ಕೃಷಿ ಬದುಕು ಅತಂತ್ರಗೊಂಡಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ತಾಲ್ಲೂಕಿನ ಮೇಲನಹಳ್ಳಿ ಬಳಿ ಇರುವ ಮೊರಾರ್ಜಿ ವಸತಿ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯ್ತಿ ಒಗ್ಗೂಡಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

       ಭಾರತದಲ್ಲಿ ಉಪಗ್ರಹದ ಸರ್ವೇ ಪ್ರಕಾರ ಶೇ 33.%ರಷ್ಟು ಅರಣ್ಯ ಪ್ರದೇಶವಿದೆ. ಆದರೆ ವಾಸ್ತವದಲ್ಲಿ ಶೇ.8ರಿಂದ 9ರಷ್ಟು ಮಾತ್ರ ಅರಣ್ಯವಿದೆ. ಜನಸಂಖ್ಯೆ ಹೆಚ್ಚಾದಂತೆ ಭೂಮಿ ಬೇಕು ಎಂಬ ದಾಹದಿಂದ ಮರಗಳನ್ನು ಕಡಿದು ಅರಣ್ಯ ಪ್ರದೇಶವನ್ನು ಪಡಿಸಿಕೊಳ್ಳಲಾಗುತ್ತಿದೆ. ಭೂಮಿ ತಂಪು ಇರಬೇಕಾದರೆ ಅಗತ್ಯವಾಗಿ ಮರಗಿಡಗಳನ್ನು ಬೆಳೆಯಬೇಕು, ಇದರಿಂದ ಪರಿಸರ ಉತ್ತಮವಾಗಿರುತ್ತದೆ ಎಂದರು.

      ಮರಗಿಡಗಳನ್ನು ಬೆಳೆಸದೆ ಹೋದರೆ ಮುಂದೊಂದು ದಿನ ಆಮ್ಲಜನಕದ ಕಿಟ್ ಬಳಸಿ ಉಸಿರಾಟ ಮಾಡಬೇಕಾಗುತ್ತದೆ. ಈಗಾಗಲೇ ನೀರಿನ ತೊಂದರೆಯಿಂದ ನಾವು ಬಾಟಲಿಯಲ್ಲಿ ನೀರು ತೆಗೆದುಕೊಂಡು ಅದನ್ನು ಸ್ವಚ್ಛ ಮಾಡಿ ಕುಡಿಯುವ ಪರಿಸ್ಥಿತಿ ಬಂದಿದೆ ಎಂದರು.

      ಮಕ್ಕಳು ನೀವಿರುವ ಶಾಲೆಯಲ್ಲಿ, ಮನೆಯ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸಿ. ಮುಂದೊಂದು ದಿನ ನೀವು ಗಿಡ ಬೆಳೆಸಿದ ಜಾಗಕ್ಕೆ ಭೇಟಿ ನೀಡಿದಾಗ ಗಿಡ ಮರವಾಗಿ ಪರಿಸರ ರಕ್ಷಣೆಯಾಗಿದ್ದರೆ ನಿಮಗೆ ಆತ್ಮತೃಪ್ತಿ ದೊರಕುತ್ತದೆ. ಮನುಷ್ಯನಿಗೆ ಇರುವ ರೀತಿ ಮರಗಳಿಗೂ ಜೀವವಿದೆ, ಮನುಷ್ಯ ಸ್ವಾರ್ಥಿ. ಆದರೆ ವೃಕ್ಷಗಳು ನಾವು ಬಿಡುವ ಇಂಗಾಲದ ಡೈ ಆಕ್ಸೈಡ್ ಪಡೆದು ನಮಗೆ ಆಮ್ಲಜನಕ ನೀಡಿ ನಮ್ಮನ್ನು ಕಾಪಾಡುತ್ತಿದೆ ಎಂದರು.

      ಜಿ.ಪಂ.ಸದಸ್ಯ ಕಲ್ಲೇಶ್ ಮಾತನಾಡಿ, ಮರಗಳ ನಾಶದಿಂದ ಬೋರುಗಳಲ್ಲಿ ನೀರು ಕಡಿಮೆಯಾಗುತ್ತಾ ಬರುತ್ತಿದೆ. ಮಕ್ಕಳು ತಮ್ಮ ಮನೆಯ ಪರಿಸರ, ಶಾಲೆ ಸುತ್ತಮುತ್ತಲಿನ ಬಳಿ ಮರಗಳನ್ನು ಬಳೆಸಬೇಕು. ಪರಿಸರ ಚೆನ್ನಾಗಿ ಇರುವಂತಹ ಕಡೆ ಪ್ರಾಣಿ-ಪಕ್ಷಿಗಳಿರುತ್ತವೆ. ಮಲೆನಾಡಿನಲ್ಲಿ ಇವುಗಳನ್ನು ನಾವು ಕಾಣಬಹುದು ಎಂದರು.

      ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಮಂಜುಳಮ್ಮ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ್, ತಾ.ಪಂ.ಸದಸ್ಯರಾದ ಗಂಗಮ್ಮ, ಕಲ್ಯಾಣಿಬಾಯಿ, ಡಿಎಫ್‍ಓ ಸತೀಶ್‍ಬಾಬಾರೈ, ಎಸಿಎಫ್ ಸಂತೋಷ್‍ನಾಯ್ಕ್, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಸುಜಾತ, ರಾಧ, ಲಕ್ಷ್ಮೀನಾರಾಯಣ್, ಬಿಇಓ ಕಾತ್ಯಾಯಿನಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಲೋಕೇಶ್, ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here