ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ: ಮತ್ತೆ ವಿವಾದ, ಪಾಲಿಕೆ ಅಧಿಕಾರಿಗಳಿಗೆ ಬೆದರಿಕೆ

0
55

ತುಮಕೂರು
             ತುಮಕೂರು ನಗರದ ಹೊರವಲಯದ ಅಜ್ಜಗೊಂಡನಹಳ್ಳಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ವಾಸನೆ ಉಂಟಾಗುತ್ತಿದೆ ಎಂಬ ವಿವಾದ ಮತ್ತೆ ತಲೆಯೆತ್ತುತ್ತಿದ್ದು, ಘಟಕಕ್ಕೆ ಭೇಟಿ ನೀಡಿದ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸ್ಥಳೀಯರು ಬೆದರಿಕೆ ಹಾಕಿರುವ ಪ್ರಸಂಗ ನಡೆದಿದೆಯೆಂದು ವರದಿಯಾಗಿದೆ.
           ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ, ಹೆಲ್ತ್ ಇನ್ಸ್‌ಪೆಕ್ಟರ್ ಮನೋಹರ್ ಅವರು ಸೋಮವಾರ ಮಧ್ಯಾಹ್ನ 12-30 ರಲ್ಲಿ ಘಟಕಕ್ಕೆ ಭೇಟಿ ನೀಡಿದ್ದಾಗ ಈ ಪ್ರಸಂಗ ಜರುಗಿದೆ.
            ಸಾರ್ವಜನಿಕರಿಂದ ಪದೇ ಪದೇ ಬರುತ್ತಿದ್ದ ದೂರವಾಣಿ ಕರೆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕೃತ ಕಾರಿನಲ್ಲಿ ಈ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಕಾರಿನ ಚಾಲಕ ಜೊತೆಯಲ್ಲಿದ್ದರು. ಇವರು ಘಟಕಕ್ಕೆ ಹೋದಾಗ ಸುಮಾರು 20 ಕ್ಕೂ ಅಧಿಕ ಜನರ ಗುಂಪು ಇವರನ್ನು ತಡೆದಿದೆ. ಕೆಲವರು ಗೇಟ್ ಹಾರಿಕೊಂಡು ಒಳಕ್ಕೆ ಪ್ರವೇಶಿಸಿದ್ದಾರೆ. ತಮಗಾಗುತ್ತಿರುವ ಸಂಕಷ್ಟಗಳನ್ನು ವಿವರಿಸಿದ್ದಾರೆ. ‘‘ಘಟಕದ ಅಕ್ಕಪಕ್ಕದಲ್ಲೆ ನಾವು ವಾಸವಿದ್ದೇವೆ. ಕಸ ವಿಲೆವಾರಿ ಆಗದೆ ದುರ್ನಾತ ಹೆಚ್ಚುತ್ತಿದೆ. ನಾವಿಲ್ಲಿ ದಿನವೂ ದುರ್ನಾತದಿಂದ ಬಳಲುತ್ತಿದ್ದೇವೆ. ಸೊಳ್ಳೆ ಮತ್ತು ನೊಣಗಳ ಹಾವಳಿ ಎದುರಾಗಿದೆ’’ ಎಂದು ಸದರಿ ಗುಂಪು ತನ್ನ ಅಳಲನ್ನು ತೋಡಿಕೊಂಡಿದೆ.
            ಪಾಲಿಕೆಯ ಅಧಿಕಾರಿಗಳು ಪ್ರತಿಕ್ರಿಯಿಸುತ್ತ ‘‘ಘಟಕದಲ್ಲಿ ಉದ್ಭವಿಸಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಗಂಭೀರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಇದು ಪರಿಹಾರವಾದರೆ ಸಮಸ್ಯೆ ಬಗೆಹರಿಯುತ್ತದೆ’’ ಎಂಬಿತ್ಯಾದಿಯಾಗಿ ‘ರವಸೆ ನೀಡಿ, ಗುಂಪನ್ನು ಸಮಾ‘ಾನಪಡಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೆ ಸದರಿ ಸ್ಥಳೀಯ ಜನರು ‘‘ಪಾಲಿಕೆಯಲ್ಲಿ ಯಾರಿಗೆ ಏನ್ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. ನಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲ’’ ಎಂದು ಬಲವಾಗಿ ಆಕ್ಷೇಪಿಸಿದರು. ಇದನ್ನೆಲ್ಲ ಕೇಳಿಸಿಕೊಳ್ಳದ ಸ್ಥಳೀಯ ಜನರು ‘‘ನಮಗೆ ನಿಮ್ಮ ಮೇಲೆ ವೈಯಕ್ತಿಕವಾಗಿ ಕೋಪವೇನೂ ಇಲ್ಲ. ಆದರೆ ಪಾಲಿಕೆಯು ನಮಗೆ ಸ್ಪಂದಿಸುತ್ತಿಲ್ಲವೆಂಬುದು ನಮ್ಮ ಆಕ್ರೋಶ. ನಾವು ಇಲ್ಲಿಗೆ ನಿಮ್ಮ ವಾಹನಗಳನ್ನು ಬಿಡುವುದಿಲ್ಲ. ವಾಹನಗಳು ಬಂದರೆ ಸುಟ್ಟು ಬಿಡುತ್ತೇವೆ. ಕಾಂಪೌಂಡ್‌ನ್ನು ಒಡೆದು ಹಾಕುತ್ತೇವೆ. ನಿಮ್ಮನ್ನೂ ಕಟ್ಟಿಹಾಕಿಬಿಡುತ್ತೇವೆ’’ ಎಂದು ಬೆದರಿಕೆ ಹಾಕಿದರು. ಕೆಲವರಂತೂ ಜೀವಬೆದರಿಕೆಯನ್ನೂ ಹಾಕಿದರೆಂದು ಹೇಳಲಾಗುತ್ತಿದೆ.
ಇದೇ ಜನರು ಪಾಲಿಕೆಯ ಆಯುಕ್ತರ ವಿರುದ್ಧವೂ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದರು. ‘‘ಆಯುಕ್ತರು ಎಲ್ಲಿದ್ದಾರೆ? ಅವರು ಇಲ್ಲಿಗೆ ಬಂದ ಹೊಸತರಲ್ಲೊಮ್ಮೆ ಬಂದು ಹೋಗಿದ್ದಾರಷ್ಟೇ. ಆಮೇಲೆ ಇತ್ತ ತಲೆಯನ್ನೇ ಹಾಕಿಲ್ಲ. ಅವರಿಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ. ಇಲ್ಲೇನು ನಡೆಯುತ್ತಿದೆಯೆಂಬುದನ್ನೂ ಅವರು ತಿಳಿದಂತಿಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
           ಕಳೆದ ಕೆಲವು ದಿನಗಳಿಂದಲೂ ಸ್ಥಳೀಯ ನಿವಾಸಿಗಳು ಪಾಲಿಕೆಯ ಆರೋಗ್ಯ ಶಾಖೆಯ ಪರಿಸರ ಇಂಜಿನಿಯರ್‌ಗಳಿಗೆ ಹಾಗೂ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡುತ್ತಿದ್ದು, ಏಕವಚನದಲ್ಲೂ ನಿಂದಿಸಿರುವ ಪ್ರಸಂಗಗಳೂ ಜರುಗಿವೆ ಎಂದು ತಿಳಿದಿದೆ.
ಘಟಕದೊಳಗೆ ಅವ್ಯವಸ್ಥೆ
             ಪ್ರಸ್ತುತ ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕ ಹಲವು ಅವ್ಯವಸ್ಥೆಗಳನ್ನು ಎದುರಿಸುತ್ತಿದೆಯೆಂದು ಹೇಳಲಾಗುತ್ತಿದೆ. ಪಾಲಿಕೆಯ ಹಿಂದಿನ ಚುನಾಯಿತ ಮಂಡಲಿಯ ತಪ್ಪು ತೀರ್ಮಾನ ಮತ್ತು ಆ ನಂತರದಲ್ಲಿ ಪಾಲಿಕೆಯ ಆಡಳಿತದ ನಿರ್ಲಕ್ಷೃವೇ ಇದಕ್ಕೆ ಕಾರಣವೆನ್ನಲಾಗಿದೆ.
              ಘಟಕವನ್ನು ನಿರ್ವಹಿಸುವ ಗುತ್ತಿಗೆದಾರರಿಗೆ ಸರಿಯಾಗಿ ಬಿಲ್ ಮೊತ್ತ ಪಾವತಿ ಆಗದಿರುವ ಕಾರಣ ಅವರು ಈ ಕೆಲಸಕ್ಕೆ ವಿದಾಯ ಹೇಳಿದ್ದು ಹಾಗೂ ಕಳೆದ ಆರು ತಿಂಗಳುಗಳಿಂದ ಇಲ್ಲಿ ಸರಿಯಾದ ನಿರ್ವಹಣೆ ಸಾಧ್ಯವಾಗಿಲ್ಲವೆಂಬುದು ಚರ್ಚೆಗೆಡೆಮಾಡಿಕೊಟ್ಟಿದೆ. ಇಲ್ಲಿರುವ ಬೆರಳೆಣಿಕೆಯ ಕಾರ್ಮಿಕರಿಗೂ ವೇತನ ಪಾವತಿ ಆಗಿಲ್ಲದಿರುವುದು, ಸಿಸಿ ಟಿವಿ ಕ್ಯಾಮರಾ ಕೆಟ್ಟು ಹೋಗಿರುವುದು, ಕಸ ವಿಲೇವಾರಿ ಮಾಡುವ ಯಂತ್ರಗಳು ಕೆಟ್ಟಿರುವುದು, ದುರ್ವಾಸನೆ ಬಾರದಂತೆ ಸ್ಪ್ರೇ ಮಾಡುವ ಯಂತ್ರೋಪಕರಣಗಳು ಕೆಟ್ಟಿರುವುದು, ಘಟಕಕ್ಕೆ ಸಂಬಂಧಿಸಿದ ಬಿಲ್‌ಗಳ ಪಾವತಿ ಆಗದಿರುವುದು -ಹೀಗೆ ಅನೇಕ ಲೋಪದೋಷಗಳಿಂದ ಸುಮಾರು 40 ಎಕರೆ ವಿಸ್ತೀರ್ಣದ ಈ ಘಟಕ ಅಸ್ವಸ್ಥವಾಗಿದೆಯೆಂದು ಹೇಳಲಾಗಿದೆ.

    

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here