ಅನಗತ್ಯ ಹೇಳಿಕೆ ನೀಡದಂತೆ ತಾಕೀತು

0
22

ಬೆಂಗಳೂರು:

 ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳಿಂದ ಉಂಟಾಗಿರುವ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ: ಜಿ. ಪರಮೇಶ್ವರ್ ಇಂದು ಕಸರತ್ತು ನಡೆಸಿದರು. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಸಚಿವರ ಜತೆ ಚರ್ಚೆ ನಡೆಸಿದ ಅವರು, ಮೈತ್ರಿ ಸರ್ಕಾರದ ಹಿತ ದೃಷ್ಟಿಯಿಂದ ಅನಗತ್ಯ ಹೇಳಿಕೆಗಳನ್ನು ನೀಡದಿರುವಂತೆ ತಾಕೀತು ಮಾಡಿದ್ದಾರೆ.

      ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕಾರ್ಯಶೈಲಿಯ ವಿರುದ್ಧ ಸಿದ್ದರಾಮಯ್ಯ ನೀಡಿದ್ದಾರೆನ್ನಲಾದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸುವುದರ ವಿರುದ್ಧ ಪಕ್ಷದ ನಾಯಕರು ಹಾಗೂ ಸಚಿವರುಗಳಿಗೂ ಸಹ ಅವರು ಎಚ್ಚರಿಕೆ ನೀಡಿದ್ದು, ಉಭಯ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದು, ಇದನ್ನು 5 ವರ್ಷಗಳ ಕಾಲ ನಿರ್ವಹಿಸಿಕೊಂಡು ಹೋಗಲಾಗುವುದು ಎಂದರು.

      ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಎಐಸಿಸಿ ನಿಕಟ ನಿಗಾ ಇರಿಸಿದ್ದು, ಅಗತ್ಯಬಿದ್ದರೆ ಮಧ್ಯಪ್ರವೇಶಿಸಿ    ಸಿದ್ದರಾಮಯ್ಯ ಸೇರಿದಂತೆ ಗೊಂದಲ ಸೃಷ್ಟಿಸುವ ಯಾವುದೇ ನಾಯಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಿದೆ. ಸಿದ್ದರಾಮಯ್ಯ ಅವರು, ಸಿಎಲ್‍ಪಿ ನಾಯಕರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವುದರಿಂದ ಅವರ ಹೇಳಿಕೆಗಳಿಗೆ ಹೆಚ್ಚಿನ ಮಹತ್ವವಿರುತ್ತದೆ, ಜವಾಬ್ದಾರಿಯುತ ನಾಯಕರಾಗಿರುವ ಅವರು, ಸಮ್ಮಿಶ್ರ ಸರ್ಕಾರದ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಸಂಯಮ ತೋರಬೇಕು ಎಂದು ಪರಮೇಶ್ವರ್ ಹೇಳಿದರು.

      ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ಸಮನ್ವಯ ಸಮಿತಿ ಸಂಚಾಲಕ ಡ್ಯಾನಿಷ್ ಅಲಿ ಅವರು ಅನುಮೋದನೆ ನೀಡಿದಲ್ಲಿ ದೆಹಲಿಯಲ್ಲಿ ಜುಲೈ 1ರಂದು ಸಮನ್ವಯ ಸಮಿತಿ ಸಭೆ ಸೇರಲಿದೆ ಎಂದು ಅವರು ಹೇಳಿದರು. ಇಂದಿನ ಸಭೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಸಭೆಯ ಕಾರ್ಯಕ್ರಮದ ಮುಖ್ಯ ಅಂಶವಾಗಿತ್ತು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಳಂಬವಿಲ್ಲದೆ ನೇಮಕ ಮಾಡಬೇಕು. ಇದರಿಂದ ಲೋಕಸಭಾ ಚುನಾವಣೆಗೆ ತಳಮಟ್ಟದಿಂದಲೇ ಪಕ್ಷವನ್ನು ಬಲಗೊಳಿಸಲು ನೆರವಾಗುವುದು ಎಂದು ಕೆಲ ಸಚಿವರು ಸಲಹೆ ನೀಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿರುವುದಾಗಿ ಪರಮೇಶ್ವರ್ ತಿಳಿಸಿದರು.

      ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಉತ್ತರಿಸಿ, ಸಕ್ಕರೆ ಖಾತೆ ಸಚಿವರು ಈ ಬಗ್ಗೆ ಗಮನ ಹರಿಸುವರು, ರಾಜ್ಯ ಸರ್ಕಾರ ರೈತರ ಹಿತರಕ್ಷಣೆಗಾಗಿ ಸಾಲ ಮನ್ನಾ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.

      ಖಾಲಿ ಸ್ಥಾನಗಳ ಭರ್ತಿಗೆ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಮಾತನಾಡಿದ ಡಾ. ಪರಮೇಶ್ವರ್, ಮುಖ್ಯಮಂತ್ರಿ ಅವರ ಪರಮಾಧಿಕಾರವಾಗಿದ್ದು, ಮಂತ್ರಿ ಮಂಡಲ ವಿಸ್ತರಣೆ ವೇಳೆ ತನ್ನ ಪಾಲಿನ ಮಂತ್ರಿ ಸ್ಥಾನಗಳ ನೇಮಕಕ್ಕೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here