ಅಪರಾಧೀಕರಣದಿಂದ ಪತ್ರಿಕಾಲೋಕ ದೂರವಾಗಬೇಕು -ಡಾ.ಶಿವಮೂರ್ತಿ ಶರಣರ ಸಲಹೆ

0
54

ಚಿತ್ರದುರ್ಗ: ಅಪರಾಧೀಕರಣ ಎನ್ನುವುದು ಇಂದು ಎಲ್ಲಾ ಕ್ಷೇತ್ರವನ್ನೂ ಆವರಿಸಿಕೊಂಡಿದ್ದು, ಅದು ಪತ್ರಿಕಾಲೋಕಕ್ಕೂ ಆವರಿಸಿಕೊಳ್ಳದಂತೆ ಎಚ್ಚರವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಅಭಿಪ್ರಾಯ ಪಟ್ಟರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಲೋಪವೆಸಗಿದಾಗ ಬಯಲಿಗೆಳೆದು ಸರಿಪಡಿಸಿ ತಿದ್ದು ತೀಡುವ ಪರಮಾಧಿಕಾರ ಪತ್ರಿಕಾರಂಗಕ್ಕಿರುವುದರಿಂದ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಅಪರಾಧಿಕರಣ ತಲ್ಲಣ ಉಂಟು ಮಾಡುತ್ತಿದೆ. ಲೇಖನಿ ಮೂಲಕ ವೈಚಾರಿಕ ಸಂಘರ್ಷ ಮಾಡುವವರಿಗೆ ಲೇಖನಿಯಿಂದ ಉತ್ತರಿಸಬೇಕು. ಅದಕ್ಕೆ ಬದಲಾಗಿ ಲೇಖನಿಗೆ ಬಂದೂಕು ಉತ್ತರ ಹೇಳುವಂತ ಭಯದ ವಾತಾವರಣ ಸೃಷ್ಟಿಯಾಗಿದೆ. ಅಪರಾಧಿಕರಣ ಪತ್ರಕರ್ತರನ್ನು ಆವರಿಸಿಕೊಳ್ಳುವಂತಾಗಬಾರದು. ಸಮಾಜವನ್ನು ಶುದ್ದೀಕರಣ ಮಾಡುವ ಪತ್ರಕರ್ತರು ಹತ್ಯೆಯಾಗುವಂತ ಪರಿಸ್ಥಿತಿಯನ್ನು ತಂದುಕೊಳ್ಳಬಾರದು. ಜಮ್ಮು-ಕಾಶ್ಮೀರದಲ್ಲಿ ಪತ್ರಕರ್ತನ ಹತ್ಯೆಯಾಗಿರುವುದು ಅತ್ಯಂತ ಶೋಚನೀಯವಾದುದು. ಇದನ್ನು ಪ್ರಜ್ಞಾವಂತರು ಖಂಡಿಸಬೇಕು ಎಂದರು.

ಸ್ವಚ್ಚ, ಶುದ್ದ, ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತನ ಪಾತ್ರ ಅತ್ಯಂತ ಪ್ರಮುಖವಾದುದು. ಕೆಲವೊಮ್ಮೆ ಪತ್ರಕರ್ತನ ಮೇಲೆ ಆನೇಕ ಆಪಾದನೆಗಳು ಬರುತ್ತವೆ. ಆದರೆ ಹೊಣೆಗಾರಿಕೆಯಿಂದ ಮಾತ್ರ ಪತ್ರ್ರಕರ್ತ ಎಂದಿಗೂ ಜಾರಿಕೊಳ್ಳಬಾರದು ಎಂದು ತಿಳಿಸಿದರು.

ಪ್ರಜಾಪ್ರಭುತ್ವವನ್ನು ಕಾಯುವ ಪತ್ರಕರ್ತರು ಅನೇಕ ಸವಾಲುಗಳನ್ನು ಹೆದುರಿಸಬೇಕಾಗುತ್ತದೆ. ತೆರೆದ ಹೃದಯ, ಎಚ್ಚರಿಕೆ, ಜಾಗೃತಿಯಿಂದ ಪತ್ರಕರ್ತರು ಕೆಲಸ ಮಾಡಬೇಕು. ಲೇಖನಿಯಿಂದ ಶಾಂತಿ-ಅಶಾಂತಿ ಕ್ರಾಂತಿಯನ್ನುಂಟು ಮಾಡಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ಉಳಿಯಬೇಕಾದರೆ ಹಣದ ಅವಶ್ಯಕತೆಯಿದೆ. ಹಾಗಂತ ಹಣವನ್ನೆ ಸರ್ವಸ್ವವನ್ನಾಗಿ ಮಾಡಿಕೊಳ್ಳಲು ಹೋದಾಗ ಅನೇಕ ಅನಾಹುತಗಳು ಸಂಭವಿಸುತ್ತವೆ. ಎಂಹತ ಕಠಿಣ ಸಂದರ್ಭ ಎದುರಾದರೂ ವೃತ್ತಿಧರ್ಮವನ್ನು ಮಾತ್ರ ಪತ್ರಕರ್ತರು ಬಿಡಬಾರದು. ದೃಶ್ಯ ಮಾಧ್ಯಮಗಳು ಮೌಢ್ಯವನ್ನು ಬಿತ್ತರಿಸುತ್ತ ಅಮಾಯಕರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಪತ್ರಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇರಬಾರದು ಎಲ್ಲರೂ ಒಂದಾಗಿ ಸಮಾಜವನ್ನು ಒಂದು ಮಾಡಬೇಕು ಎಂದು ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತ ಪತ್ರಿಕಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದೆ. ಮೊಳೆ ಜೋಡಣೆಯಿಂದ ಹಿಡಿದು ಸಾಮಾಜಿಕ ಜಾಲತಾಣದವರೆಗೆ ಮಾಧ್ಯಮ ಬೆಳೆದಿದೆ. ಧರ್ಮ ಪ್ರಚಾರಕ್ಕಾಗಿ ಫಾದ್ರಿಗಳು ಪತ್ರಿಕೆಗಳನ್ನು ಮೊದಲು ಆರಂಭಿಸಿದರು. ಈಗ ಮಾಧ್ಯಮಗಳು ಕಮರ್ಷಿಯಲ್ ಆಗಿವೆ. ಸುದ್ದಿಯ ಮೇಲೆ ಮಾಧ್ಯಮಗಳು ನಿಂತಿಲ್ಲ. ಜಾಹಿರಾತನ್ನು ಅವಲಂಭಿಸಿವೆ ಎಂದು ಹೇಳಿದರು.

ಅನ್ಯಾಯವನ್ನು ಬಯಲಿಗೆ ಎಳೆಯುವಾಗ ಕೆಲವೊಮ್ಮೆ ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತಿವೆ. ಜಮ್ಮು ಕಾಶ್ಮೀರದಲ್ಲಿ ಪತ್ರಕರ್ತನ ಹತ್ಯೆಯಾಗಿದೆ. ಸ್ವಾಮಿ ಅಗ್ನಿವೇಶ್ ಮೇಲೆಯೂ ಮೂಲಭೂತವಾದಿಗಳು ಹಲ್ಲೆ ನಡೆಸಿದರು ಪ್ರತಿಯೊಬ್ಬರು ಇದನ್ನು ಖಂಡಿಸಬೇಕಾಗಿತ್ತು ಎಂದರು.

ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪತ್ರಕರ್ತರು ಸಂಘಟಿತರಾಗಿ ಕೆಲಸ ಮಾಡಬೇಕು. ಹಲ್ಲೆ ಮಾಡುವ ಕೀಳುಮಟ್ಟಕ್ಕೆ ದೇಶ ಹೋಗಿದೆ. ಆದ್ದರಿಂದ ಪತ್ರಕರ್ತರ ಚಿಂತನೆ ಸಮಾಜಮುಖಿಯಾಗಿರಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಡಾ.ನಟರಾಜ್ ಉಪನ್ಯಾಸ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಕುಮಾರಸ್ವಾಮಿ, ನಾಗರಾಜ್‍ಕಟ್ಟೆ, ಕೇಂದ್ರ ಕಾರ್ಯದರ್ಶಿ ಓ.ರಾಮಸ್ವಾಮಿ, ಡಿ.ಈಶ್ವರಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಹೆಂಜಾರಪ್ಪ ವೇದಿಕೆಯಲ್ಲಿದ್ದರು.

ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್‍ರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು
ಪತ್ರಕರ್ತ ಚಿತ್ತಯ್ಯ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್‍ಗೌಡಗೆರೆ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here