ಅಪ್ರಾಪ್ತೆಯರನ್ನು ವೇಶ್ಯಾವಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

0
37

ದಾವಣಗೆರೆ:

      ಅಪ್ರಾಪ್ತೆಯರನ್ನು ಅಪಹರಿಸಿ ಮಾನವ ಕಳ್ಳ ಸಾಗಾಣೆ ಮಾಡಿ, ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಮೂವರು ಮಹಿಳೆಯರನ್ನು ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸರು ಬಂಧಿಸಿ, ಓರ್ವ ಅಪ್ರಾಪ್ತ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದ್ದಾರೆ.

      ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತ(33) ಅನಿತಾ ಅಲಿಯಾಸ್ ಕಾವ್ಯಾ (34) ರೂಪಾ (28) ಬಂಧಿತರಾಗಿದ್ದು, ಈ ಮೂವರು ದಾವಣಗೆರೆ, ಗದಗ ಸೇರಿದಂತೆ ವಿವಿದೆಢೆ ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ ಅಪಹರಿಸಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿ ಹಣ ಮಾಡುತ್ತಿದ್ದರು ಎಂದು ಹೇಳಿದರು.

      ಬಸ್ ಹಾಗೂ ರೇಲ್ವೆ ನಿಲ್ದಾಣಗಳಲ್ಲಿ ಇರುವ ಅಮಾಯಕ ಬಾಲಕಿಯರನ್ನು ಪುಸಲಾಯಿಸಿ ಇಲ್ಲವೇ ಅಪಹರಿಸಿ ಕರೆದುಕೊಂಡು ಹೋಗುತ್ತಿದ್ದ ಯುವತಿಯರನ್ನು ಹಾಗೂ ಅಪ್ರಾಪ್ತೆಯರನ್ನು ಈ ಮೂವರು ಮಹಿಳೆಯರ ತಂಡ ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕುತ್ತಿದ್ದರು. ಇವರಿಂದ ಹೀಗೆ ವೇಶ್ಯಾವಾಟಿಕೆಗೆ ದಂಧೆಗೆ ತಳ್ಳಲ್ಪಟ್ಟ ಅಮಾಯಕ ಅಪ್ರಾಪ್ತ ಬಾಲಕಿಯೊಬ್ಬಳು ಎಚ್‍ಐವಿ ಸೋಂಕಿಗೆ ತುತ್ತಾಗಿದ್ದಾಳೆ. ಈ ವಿಷಯ ಬಾಲಕಿಯ ಪೋಷಕರಿಗೆ ತಿಳಿದ ಹಿನ್ನೆಲೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

      ಬಂಧಿತ ಮೂವರು ಮಹಿಳೆಯರು ದಾವಣಗೆರೆ ಜಿಲ್ಲೆಯವರಾಗಿದ್ದು, ಜಾಲದಲ್ಲಿ ಇನ್ನೂ ಹಲವು ಆರೋಪಿಗಳಿರುವ ಶಂಕೆ ಇದೆ. ಈ ಪ್ರಕರಣದ ಪ್ರಮುಖ ಆರೋಪಿ ಶಿವು ಸೇರಿದಂತೆ ಇನ್ನೂ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ತಂಡ ಈ ಹಿಂದೆಯೂ ಅನೇಕ ಬಾಲಕಿಯರನ್ನ ಅಪಹರಿಸಿ ಪೊಲೀಸರಿಗೆ ಸಿಕ್ಕು ಬಿದ್ದು ಜೈಲು ಸೇರಿ ಜಾಮೀನು ಮೇಲೆ ಹೊರ ಬಂದು ಮತ್ತೆ ಬಂದು ಅದೇ ದಂಧೆ ಶುರು ಮಾಡಿದ್ದಾರೆ ಎಂದು ಅವರು ವಿವರಿಸಿದರು.

      ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ತನಿಖಾ ದಳದ ಪಿಐ ದೇವರಾಜ್ ಟಿ.ವಿ, ಮಹಿಳಾ ಠಾಣೆ ಪಿಎಸ್ಸೈ ಲತಾ ತಾಳೇಕರ್, ಎಎಸ್‍ಐ ಮಾಳಮ್ಮ, ಸಿಬ್ಬಂದಿಗಳಾದ ರಾಸೂಲ್ ಸಾಬ್, ಗಾಯಿತ್ರಿ, ಸಂಗೀತ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here