ಅರ್ಧ ಶತಮಾನ ಪೂರೈಸಿರುವ ಶಾಲಾ ಹೆಂಚುಗಳು ಕಳಚಿ ಬೀಳುತ್ತಿವೆ

0
61

 

ಐ.ಡಿ.ಹಳ್ಳಿ

ಸಂವಿಧಾನದ ಆಶಯಗಳಲ್ಲಿ ಒಂದಾದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು, ಸುಸಜ್ಜಿತವಾದ, ಗಾಳಿ, ಬೆಳಕಿನ ವ್ಯವಸ್ಥೆಯಿರುವ, ಉತ್ತಮ ಪರಿಸರದ ಶಾಲಾ ಕೊಠಡಿಗಳು ಕೂಡ ಮುಖ್ಯವಾದುದಾಗಿವೆ. ಇದನ್ನು ಪರಿಣಾಮಕಾರಿಯಾಗಿ ರೂಪಿಸಬೇಕಾದ್ದು ಸರ್ಕಾರದ ಕರ್ತವ್ಯ. ಆದರೆ ಐ.ಡಿ.ಹಳ್ಳಿ ಹೋಬಳಿಯ ಬ್ರಹ್ಮಸಮುದ್ರದ ಪ್ರಾಥಮಿಕ ಶಾಲಾಕೊಠಡಿ ತನ್ನ ಆಯುಷ್ಯದ ಅರ್ಧಶತಮಾನ ಕಳೆದಿದ್ದು, ಮುಂದಿನ ವರ್ಷ 60 ವರ್ಷಗಳನ್ನು ಪೂರೈಸಿ ವಜ್ರಮಹೋತ್ಸವಕ್ಕೆ ಅಣಿಗೊಳ್ಳಲಿದೆ. ಆದರೆ ಈ ಹಳೆಯ ಶಾಲಾ ಕೊಠಡಿಗಳ ಮೇಲ್ಛಾವಣಿಯ ಹೆಂಚುಗಳು ಒಂದೊಂದಾಗಿ ಕಳಚಿ ಕೆಳಗೆ ಬೀಳುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ಮಕ್ಕಳ ಹಾಗೂ ಶಿಕ್ಷಕರ ತಲೆಯ ಮೇಲೆ ಹೆಂಚುಗಳು ಕಳಚಿ ಬೀಳಬಹುದು. ಈ ಆತಂಕದಲ್ಲೆ ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಿದ್ದಾರೆ, ಮಕ್ಕಳು ಬೋಧನೆ ಕೇಳುತ್ತಿದ್ದಾರೆ..! ಇಷ್ಟಾದರೂ ಕೂಡ ಈ ಶಾಲೆಯ ಕಡೆ ಈ ತನಕ ಯಾವೊಬ್ಬ ಅಧಿಕಾರಿಯೂ ತಿರುಗಿ ನೋಡಿಲ್ಲದಿರುವುದು ವಿಪರ್ಯಾಸವೆ ಸರಿ..!

 

ಈ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಪ್ರ್ರಾರಂಭೋತ್ಸ್ಸವವನ್ನು ಹಿಂದಿನ ವಿಶಾಲ ಮೈಸೂರು ರಾಜ್ಯದ ಸಹಕಾರ  ಸಚಿವರಾಗಿದ್ದ ಮಾಲಿಮರಿಯಪ್ಪನವರು 19 ನೆ ಏಪ್ರಿಲ್ 1959 ರ ಭಾನುವಾರದಂದು ಮಾಡಿರುತ್ತಾರೆ. ಹೀಗೆ ಪ್ರಾರಂಭವಾದ ಶಾಲಾ ಕೊಠಡಿ 59 ವರ್ಷಗಳಾದರೂ ಇನ್ನೂ ನಮ್ಮ ಮುಂದೆ ಪಳೆಯುಳಿಕೆ ರೀತಿಯಲ್ಲಿ ನಿಂತಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಜೀವಭಯದಿಂದ ಪಾಠ ಪ್ರವಚನ ಕೇಳುತ್ತಿದ್ದಾರೆ. ಅಲ್ಲದೆ ಈ ಶಾಲೆಯಲ್ಲಿ ದಿನೆ ದಿನೆ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಹೆಚ್ಚಾಗುತ್ತಿದೆ. ಈ ಶಾಲೆಯಲ್ಲಿರುವ ಮೂರು ಕೊಠಡಿಗಳೂ ಶಿಥಿಲ ಸ್ಥಿತಿಯಲ್ಲಿವೆ. ಈ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡುವ ಸಂದರ್ಭದಲ್ಲಿ ಏನಾದರೂ ಮೇಲ್ಛಾವಣಿ ಕಳಚಿದರೆ ಮಕ್ಕಳ ಪಾಡು ಏನಾಗಬೇಕು?\

ಹಾಗಾಗಿ ಶಾಲೆಯ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಅಧ್ಯಕ್ಷರು, ಎಸ್ ಡಿಎಂಸಿ ಅಧ್ಯಕ್ಷರು ಅಲ್ಲದೆ ಹಿಂದಿನ ಶಾಸಕ ಕೆ ಎನ್ ರಾಜಣ್ಣನವರು ಹೀಗೆ ಎಲ್ಲರಿಗೂ ಈ ಸಮಸ್ಯೆಯನ್ನು ಕುರಿತು ಈಗ್ಗೆ ಮೂರು ವರ್ಷಗಳ ಹಿಂದೆಯೆ ಗಮನ ಸೆಳೆದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಅಲ್ಲದೆ ಶಾಲೆಯ ಪಕ್ಕದಲ್ಲಿರುವ ಗ್ರಂಥಾಲಯ ನಡೆಸುವ ಹೊಸ ಅರ್.ಸಿ.ಸಿ. ಕೊಠಡಿಯು ಶಾಲೆಗೆ ಸೇರಿದ್ದಾಗಿದ್ದು, ಗ್ರಾಮಪಂಚಾಯಿತಿಯು ಅದನ್ನು ಗ್ರಂಥಾಲಯಕ್ಕೆ ಬಳಸಿಕೊಂಡಿದೆ. ಮುಖ್ಯೋಪಾಧ್ಯಾಯರು ಕನಿಷ್ಠ ಆ ಕೊಠಡಿಯನ್ನಾದರೂ ಶಾಲೆಗೆ ಬಿಟ್ಟುಕೊಡಿ ಎಂದು ಕೇಳಿದ್ದರೂ ಸಹ ಅದೂ ಸಾಧ್ಯವಾಗಿಲ್ಲ..!

ಆದ್ದರಿಂದ ಈಗಲಾದರೂ ಇದಕ್ಕೆ ಸಂಬಂಧಿಸಿದ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಕೊಠಡಿಗಳನ್ನು ನಿರ್ಮಿಸಬೇಕಾಗಿದೆ. ಇಲ್ಲ್ಲದಿದ್ದರೆ ಹೆಂಚುಗಳು ಯಾವಾಗ ಬೇಕಾದರೂ ಬೀಳಬಹುದು. ಈ ಕುರಿತು ವಿದ್ಯಾರ್ಥಿಗಳಪೋಷಕರಿಗೂ ಸಹ ತಮ್ಮ ಮಕ್ಕಳನ್ನು ಆತಂಕದಿಂದಲೆ ಶಾಲೆಗೆ ಕಳುಹಿಸಿತ್ತಿದ್ದಾರೆ. ಇತ್ತ ಮಕ್ಕಳಿಗೂ ನೆಮ್ಮದಿಯಿಲ್ಲ, ಶಿಕ್ಷಕರಿಗೂ ನೆಮ್ಮದಿಯಿಲ್ಲ ಕೊನೆಗೆ ಪೋಷಕರಿಗೂ ನೆಮ್ಮದಿ ಇಲ್ಲವಾಗಿ, ಈ ತ್ರಿವೇಣಿ ಸಂಗಮದಲ್ಲಿ ಮಕ್ಕಳ ಭವಿಷ್ಯ ತ್ರಿಶಂಕು ಸ್ವರ್ಗವಾಗಿದೆ ಎನ್ನದೆ ವಿಧಿಯಿಲ್ಲ..!
ಈ ಶಾಲೆಯ ಮೂರು ಹಳೆಯ ಹೆಂಚಿನ ಕೊಠಡಿಗಳೂ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆ, ಗಾಳಿ, ಬಿಸಿಲು ಹೀಗೆ ಎಲ್ಲಾ ವಿಧದ ತೊಂದರೆಗಳೂ ಮಕ್ಕಳನ್ನು ಬೆಂಬಿಡದೆ ಕಾಡುತ್ತಿವೆ. ಏಕೆಂದರೆ ಆಗಾಗ ಜೋರಾಗಿ ಗಾಳಿ ಬೀಸಿದಾಗ ಮೇಲೆ ಹಾಕಿರುವ ಹೆಂಚುಗಳು ಅಲ್ಲಾಡುವ ಸಮಯದಲ್ಲಿ ಮಕ್ಕಳ ಎದೆಯಲ್ಲಿ ನಗಾರಿ ಬಾರಿಸಿದಂತಾಗುತ್ತಿದೆ. ಮಕ್ಕಳ ಈ ಆತಂಕಕ್ಕೆ ಯಾರು ಹೋಣೆ? ಆದ್ದರಿಂದ ಮಕ್ಕಳು ಈ ಶಾಲೆಗೆ ಬರಲು ಹೆದರುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಸಹ ಆತಂಕದಿಂದಲೆ ಪಾಠ ಬೋಧಿಸುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 75ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂಬುದೂ ಕೂಡ ಗಮನಿಸ ಬೇಕಾದ ವಿಷಯ. ಆದ್ದರಿಂದ ಕೂಡಲೆ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯನವರೂ ಸೇರಿದಂತೆ ಸಂಬಂಧಿಸಿದ ಎಲ್ಲರೂ ಈ ಸಮಸ್ಯೆಯನ್ನು ಕೂಡಲೆ ಪರಿಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here