ಅವಧಿ ಮೀರಿ ಏಳೆಂಟು ವರ್ಷಗಳಾದರೂ ಮಳಿಗೆಗಳ ಮರು ಹರಾಜಾಗಿಲ್ಲ

0
22

 ಕೊರಟಗೆರೆ:

ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10ನೇ ಹಣಕಾಸು ಯೋಜನೆಯ ಅವಧಿ ಮೀರಿದ 21 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಆದರೂ ಹರಾಜು ಪ್ರಕ್ರಿಯೆ ತಡೆಯಲು ರಾಜಕೀಯ ಒತ್ತಡದ ತಂತ್ರಗಾರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

      ಕೊರಟಗೆರೆ ಪಟ್ಟಣ ಪಂಚಾಯಿತಿಯ 10 ನೇ ಹಣಕಾಸು ಯೋಜನೆಯಡಿ 1999 ರಲ್ಲಿ ನಿರ್ಮಾಣಗೊಂಡ 21 ಅಂಗಡಿ ಮಳಿಗೆಗಳು ಹರಾಜಾಗಿದ್ದವು. ಈ ಎಲ್ಲಾ ಅಂಗಡಿಗಳ ಅವಧಿ ಕಾನೂನು ನಿಯಮದಡಿ 12 ವರ್ಷಗಳಾಗಿದ್ದು 2010 ಮಾರ್ಚ್ ತಿಂಗಳಲ್ಲಿ ಅವಧಿ ಪೂರ್ಣಗೊಂಡಿದೆ. ಆದರೂ ಸಹ ಇಲ್ಲಿಯವರೆಗೂ ಕಾನೂನು ಬಾಹಿರವಾಗಿ ಅಂಗಡಿಗಳನ್ನು ಪ.ಪಂ. ಮುಂದುವರೆಸಿಕೊಂಡು ಬಂದಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

      ಸರ್ಕಾರದ ಆದೇಶ ಸಂಖ್ಯೆ ನಆಇ 509 ಜಿಇಎಲ್ 2014 ದಿ.14-8-2015 ಹಾಗೂ ನಆಇ 221/ಜಿಇಎಲ್/2009 ರಾಜ್ಯ ಉಚ್ಚನ್ಯಾಯಾಲಯದ ತೀರ್ಪುಅರ್ಜಿ ಸಂಖ್ಯೆ; 5162/ 623/214 ರ ದಿ.18-3-1992 ರ ಮುನಿಸಿಪಲ್ ಕಾಯ್ದೆ ನಿಯಮ ಕಾಲಂ ನಂಬರ್ 1.2 ರ ನಿಯಮ 1966 ನಿಯಮಗಳ ಪ್ರಕಾರ, ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ಸುತ್ತೋಲೆಗಳ ಪ್ರಕಾರ ಹರಾಜಾದ ಅಂಗಡಿಗಳನ್ನು 12 ವರ್ಷ ಮೀರಿದ ಬಳಿಕ ಖಾಲಿ ಮಾಡಿಸಬೇಕು. ಪುನಃ ಮರು ಹರಾಜು ಪ್ರಕ್ರಿಯೆ ನಡೆಸಲೆ ಬೇಕು. ಯಾವುದೇ ಕಾರಣಕ್ಕೂ ಹರಾಜುದಾರರು ಅಂಗಡಿ ಮಳಿಗೆಯನ್ನು ಬೇರೆಯವರ ಹೆಸರಿಗೆ ಪರಬಾರೆ ಮಾಡ ಬಾರದು. 3 ತಿಂಗಳುಗಳ ಮೇಲೆ ಅಂಗಡಿಯ ಬಾಡಿಗೆ ಬಾಕಿ ಉಳಿಸಿಕೊಂಡರೆ ತಕ್ಷಣ ನೋಟಿಸ್‍ಜಾರಿ ಮಾಡಿ ಅಂಗಡಿ ಖಾಲಿ ಮಾಡಿಸಬೇಕು ಎನ್ನುವ ನಿಯಮಗಳು ಸ್ಪಷ್ಟವಾಗಿದೆ. ಆದರೂ ಕೊರಟಗೆರೆ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳ ಸ್ಥಿತಿ ಪೂರ್ಣ ವಿರುದ್ದವಾಗಿದೆ.

      ಹರಾಜು ಆಗಲಿರುವ 21 ಅಂಗಡಿ ಮಳಿಗೆಗಳಲ್ಲಿ ಶೇ. 95 ರಷ್ಟು ಮಂದಿ ಮೂಲ ಹರಾಜುದಾರರು ಇಲ್ಲ. ಪ್ರತಿ ಅಂಗಡಿಗಳಲ್ಲೂ ಮೂಲ ಮಾಲಿಕರು ಬಿಟ್ಟು ನಾಲ್ಕರಿಂದ ಐದು ಮಂದಿ ಅಂಗಡಿಗಳಿಗೆ ಹೊರಗುತ್ತಿಗೆಯವರು ಹುಟ್ಟಿ ಕೊಂಡಿದ್ದಾರೆ. ಕೆಲವು ಅಂಗಡಿಗಳ ಬಾಡಿಗೆಗಳು ವರ್ಷಗಟ್ಟಲೆ ವಸೂಲಾಗದೆ ಲಕ್ಷಾಂತರ ರೂ.ಗಳ ಬಾಕಿ ಇದೆ. ಈ ಹರಾಜು ಪ್ರಕ್ರಿಯೆಯಲ್ಲಿ ಕೊರಟಗೆರೆ ಪ.ಪಂ. ಸಭೆಯಲ್ಲಿ ಹಲವು ಬಗೆಯ ಪರ ಮತ್ತು ವಿರೋಧದ ಗೊಂದಲದ ನಿರ್ಣಯಗಳನ್ನು ತೆಗೆದುಕೊಂಡಿದ್ದು ವಿವಾದಕ್ಕೆ ಒಳಗಾಗಿತ್ತು. ಪ.ಪಂ.ಯ ಕೆಲ ಸದಸ್ಯರು ಅಂಗಡಿಗಳ ಹರಾಜಿಗೆ ತಹಸೀಲ್ದಾರ್ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು ಎನ್ನಲಾಗಿದೆ.

      2016ರ ಮೇ 22 ರಂದು ಅಂಗಡಿ ಮಳಿಗೆಗಳು ಹರಾಜು ಮಾಡುವಂತೆ ಸಾರ್ವಜನಿಕರು, ಕನ್ನಡ ಪರ ಸಂಘಟನೆಗಳು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಘಗಳು ಸಾರ್ವಜನಿಕವಾಗಿ ಪ.ಪಂ. ಮುಂದೆ ಪ್ರತಿಭಟನೆ ನಡೆಸಿದ್ದವು. ಈ ಬಗ್ಗೆ ತುಮಕೂರು ಜಿಲ್ಲಾ ಸ್ಥಳೀಯ ಸಂಸ್ಥೆಗಳ ಯೋಜನಾ ನಿರ್ದೇಶಕರು ಜಾಣತನದ ಕುರುಡನ್ನು ಹಾಗೂ ಕಂಡೂ ಕಾಣದ ರೀತಿಯಲ್ಲಿ ವರ್ತಿಸಿದ್ದರು. ಇವೆಲ್ಲದರ ನಡುವೆ ಈಗಿನ ಜಿಲ್ಲಾಧಿಕಾರಿಗಳು ಎಷ್ಟೆ ರಾಜಕೀಯ ಒತ್ತಡವಿದ್ದರೂ ಕಾನೂನಿನ ನಿಯಮದಂತೆ ಅಂಗಡಿಗಳನ್ನು ಬಹಿರಂಗ ಹರಾಜಿಗೆ ಜುಲೈ 2 ರಂದು ಆನ್‍ಲೈನ್ ಮುಖಾಂತರ ನಿಗದಿ ಪಡಿಸಿದ್ದಾರೆ ಎನ್ನಲಾಗಿದೆ.

      ಪಟ್ಟಣದ ಕೆಲವು ಅಂಗಡಿ ಮಾಲಿಕರು ಜಿಲ್ಲಾಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರದ ಪ್ರತಿಷ್ಠಿತ ಜನಪ್ರತಿನಿಧಿಯೊಬ್ಬರು ಅಂಗಡಿ ಮಾಲಿಕರ ಪರವಾಗಿ ನಿಂತಿರುವುದು ಸಾರ್ವಜನಿಕರಲ್ಲಿ ಅಸಮಧಾನ ಮೂಡಿಸಿದೆ. ಅಷ್ಟು ಸಾಲದೆ ಅವರು ಅಂಗಡಿ ಮಾಲಿಕರೊಂದಿಗೆ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ರವರಿಗೂ ಬಾಡಿಗೆದಾರರನ್ನು ಮುಂದುವರೆಸುವಂತೆ ಒತ್ತಡ ಹಾಕುತ್ತಿರುವುದು ವಿಪರ್ಯಾಸವಾಗಿದ್ದು, ಜಿಲ್ಲಾಧಿಕಾರಿಗಳ ನಿಲುವು ಏನು ಎಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.

 

LEAVE A REPLY

Please enter your comment!
Please enter your name here