ಅವಳಿ ನಗರಗಳು ಉಪ ರಾಜಧಾನಿಯಾಗಲಿ

0
57

 ದಾವಣಗೆರೆ:

      ದಾವಣಗೆರೆ-ಹರಿಹರ ಅವಳಿ ನಗರಗಳು ಉಪರಾಜಧಾನಿ ಕೇಂದ್ರ ಆಗಬೇಕು ಎಂದು ಒತ್ತಾಯಿಸಿ ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

      ಭೌಗೋಳಿಕ ದೃಷ್ಟಿಯಿಂದ ಕರ್ನಾಟಕ ಭೂಪಟದಲ್ಲಿ ದಾವಣಗೆರೆ ನಗರ ಮಧ್ಯ ಕೇಂದ್ರ ಬಿಂದು ಆಗಿದೆ. ದಾವಣಗೆರೆ ರಾಜಧಾನಿಯ ಕೇಂದ್ರ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಸಮಯದಲ್ಲಿ ಅನೇಕ ವರದಿಗಳಲ್ಲಿ ಉಲ್ಲೇಖವಿದೆ. ಆದರೆ, ಕೆಲವರ ದಬ್ಬಾಳಿಕೆಯಿಂದ ಬೆಂಗಳೂರು ರಾಜಧಾನಿ ಆಯಿತು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಕಳುಹಿಸಿರುವ ಮನವಿಯಲ್ಲಿ ಹೇಳಲಾಗಿದೆ.

      ದಾವಣಗೆರೆ ನಗರ ಶೈಕ್ಷಣಿಕ ಮಟ್ಟದಲ್ಲಿ ನಿಜಕ್ಕೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಚಿತ್ರದುರ್ಗ, ಬಳ್ಳಾರಿ, ಗದಗ, ಕೊಪ್ಪಳ, ಹಾವೇರಿ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಿಗೆ ಸುಮಾರು 100ರಿಂದ 200 ಕಿ.ಮೀ. ದೂರದಲ್ಲಿದೆ. ಈ ಜಿಲ್ಲೆಗಳಿಂದ ಬೆಂಗಳೂರಿಗೆ ಹೋಗಲು ಸುಮಾರು 300ರಿಂದ 800 ಕಿ.ಮೀ. ದೂರ ಆಗಲಿದೆ. ರಾಜಧಾನಿಯಲ್ಲಿ ಹೈಕೋರ್ಟ್, ಆಡಳಿತ ಯಂತ್ರ ಇದ್ದು, ಅಲ್ಲಿಗೆ ಹೋಗಿ ಬರಲು ಶ್ರೀಸಾಮಾನ್ಯರಿಗೆ ತೊಂದರೆ ಆಗುತ್ತಿದೆ.

      ಇಷ್ಟೇಲ್ಲ ಅನುಕೂಲ ಹೊಂದಿರುವ ದಾವಣಗೆರೆ-ಹರಿಹರ ಅವಳಿ ನಗರಗಳಲ್ಲಿ ಉಪರಾಜಧಾನಿ ಕೇಂದ್ರ ಎಂದು ಘೋಷಣೆ ಮಾಡಬೇಕು. ಆದರೆ, ಬೆಳಗಾವಿ ನಗರ ಉಪರಾಜಧಾನಿ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿರುವುದು ಸಮಂಜಸ ಅಲ್ಲ. ಈ ಪ್ರದೇಶದಲ್ಲಿ ಎರಡನೇ ರಾಜಧಾನಿ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

      ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ, ಎ. ಗುಡ್ಡಪ್ಪ, ಗೌಡ್ರಚನ್ನಬಸಪ್ಪ, ಜಗನ್ನಾಥ್, ತಿಮ್ಮಣ್ಣ ಹೊನ್ನೂರು, ಮಹಾದೇವಪ್ಪ ಬಿ. ತಳವಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here