ಅಹಂಕಾರ ತೊರೆದು ಗೌರವ ಭಾವನೆ ಬೆಳೆಸಿಕೊಳ್ಳಲು ಕರೆ

0
23

 ತುರುವೇಕೆರೆ:

      ಯಾರಿಗೆ ಆಗಲಿ ತಾವು ಮಾಡುವ ಕಾಯಕದಲ್ಲಿ ಶ್ರದ್ಧೆ, ಏಕಾಗ್ರತೆ, ಪ್ರಾಮಾಣಿಕತೆ ರೂಢಿಸಿಕೊಂಡರೆ ಯಶಸ್ಸು, ಗೌರವ ದೊರಕುತ್ತದೆ. ಅಹಂಕಾರ ಮನೋಭಾವ ತೊರೆದು ಎಲ್ಲರನ್ನೂ ಗೌರವದಿಂದ ಕಂಡಾಗ ಮಾತ್ರ ಯಶಸ್ಸು ಖಂಡಿತ ಸಾಧ್ಯ ಎಂದು ಚಲನಚಿತ್ರ ನಟ ಶಿವರಾಮ್ ತಿಳಿಸಿದರು.

      ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ಆಶ್ರಯದಲ್ಲಿ ಜಿ.ಎಸ್.ನಾಗೇಶ್ ರಾವ್ ಮತ್ತು ಜಯಮ್ಮ, ಜಿ.ಕೆ.ನಾಗೇಶ್‍ರಾವ್ ಮತ್ತು ಲಕ್ಷ್ಮೀನರಸಮ್ಮನವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಚಲನಚಿತ್ರ ನೋಡುಗರ ಮನಸ್ಸೂ ಸಹ ಬದಲಾಗಿದೆ. ಚಲನಚಿತ್ರಗಳಲ್ಲಿ ಬರುವ ಅಶ್ಲೀಲ ಸಂಭಾಷಣೆ, ಅರೆಬರೆ ಬಟ್ಟೆಗಳ ಪ್ರದರ್ಶನಕ್ಕೆ ನೋಡುಗರ ಪ್ರೋತ್ಸಾಹ ಹೆಚ್ಚುತ್ತಿದೆ. ಇದರಿಂದಾಗಿ ಉತ್ತಮ ಚಲನಚಿತ್ರ ಮಾಡಬೇಕೆಂದು ಮುಂದೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇತ್ತೀಚೆಗೆ ಚಲನಚಿತ್ರಗಳಲ್ಲಿ ಕಥೆಗಳೇ ಮಾಯವಾಗುತ್ತಿವೆ. ಈಗ ಕಥೆಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ. ಕೇವಲ ಪ್ರಮುಖ ನಟ ಮತ್ತು ನಟಿಯರ ಪಾತ್ರಗಳಿಗೆ ಮೀಸಲಾಗುತ್ತಿದ್ದು ಇದರಿಂದ ಚಲನಚಿತ್ರಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ಉತ್ತಮ ಚಿತ್ರ ಮಾಡಿದರೆ ಹಾಕಿದ ಬಂಡವಾಳ ಬರುತ್ತದೆ ಎಂಬ ನಂಬಿಕೆಯೇ ಚಿತ್ರ ನಿರ್ಮಾಪಕರಿಗೆ ಇಲ್ಲದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

      ಚಿತ್ರ ನಟರು, ಸಹ ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರ ನಿರ್ಮಾಣದ ತಂಡ ತನಗೆ ಅನ್ನ ಇಡುವ ನಿರ್ಮಾಪಕನ ಯಶಸ್ಸನ್ನು ನಿರೀಕ್ಷಿಸಬೇಕು. ಇಂದು ಕೆಲವು ಪ್ರಸಿದ್ಧ ನಟ ನಟಿಯರ ಎದುರು ನಿರ್ಮಾಪಕ, ನಿರ್ದೇಶಕರೇ ಕೈಕಟ್ಟಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಚಿತ್ರದ ಯಶಸ್ಸು ಒಳ್ಳೆಯ ಕಥೆ, ಬಂಡವಾಳ ಮತ್ತು ಉತ್ತಮ ನಿರ್ದೇಶಕನ ಶ್ರಮದ ಮೇಲೆ ನಿಂತಿರುತ್ತದೆ. ಇಂದು ಕನ್ನಡ ಚಲನಚಿತ್ರದ ಸ್ಥಿತಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣ ಕಥೆಯಿಲ್ಲದೆ, ಸಂದೇಶವಿಲ್ಲದೆ ತಯಾರಾಗುತ್ತಿರುವ ಚಿತ್ರಗಳು. ಸರದಿ ಸಾಲಿನಂತೆ ಚಿತ್ರಗಳು ನಷ್ಟವನ್ನು ಅನುಭವಿಸಿದರೆ ಯಾರು ತಾನೆ ಚಲನಚಿತ್ರ ಮಾಡಲು ಮುಂದೆ ಬಂದಾರು. ಚಿತ್ರಕ್ಕೆ ಬಂಡವಾಳ ಹಾಕಿದ ನಿರ್ಮಾಪಕ ಉಳಿದರೆ ಮಾತ್ರ ಉಳಿದವರ ಹೊಟ್ಟೆ ತುಂಬಲು ಸಾಧ್ಯ ಎಂದರಲ್ಲದೆ, ಹಲವಾರು ಮಂದಿ ಚಲನಚಿತ್ರದಲ್ಲಿ ಸೇರಿದರೆ ಕೆಟ್ಟು ಹೋಗುತ್ತಾರೆ ಎಂದು ಬಿಂಬಿಸುತ್ತಾರೆ. ಚಿತ್ರರಂಗದಲ್ಲಿ ಉತ್ತಮರೂ ಇದ್ದಾರೆ, ಗೌರವಸ್ಥರೂ ಇದ್ದಾರೆ. ಅವರ್ಯಾರೂ ಇವರ ಕಣ್ಣಿಗೆ ಬೀಳುವುದೇ ಇಲ್ಲ. ಕೆಡಲು ತಮ್ಮ ಪರಿಸರವೇ ಸಾಕು. ಅಂತಹ ಎಷ್ಟು ಉದಾಹರಣೆಗಳು ಇಲ್ಲ. ವಿನಾಕಾರಣ ಚಿತ್ರರಂಗವನ್ನು ದೂರುವುದು ಸರಿಯಲ್ಲ ಎಂದು ಶಿವರಾಮ್ ಹೇಳಿದರು.

      ಸಮಾರಂಭದಲ್ಲಿ ಟೆಲಿಕಾಂನ ನಿವೃತ್ತ ಡಿವಿಜನಲ್ ಇಂಜಿನಿಯರ್ ಜಿ.ಎನ್.ಲಕ್ಷ್ಮೀನಾರಾಯಣ್ ರಾವ್, ಕನ್ನಡ ಗಣಕ ಪರಿಷತ್‍ನ ಗೌರವ ಕಾರ್ಯದರ್ಶಿ ಜಿ.ಎನ್.ನರಸಿಂಹಮೂರ್ತಿ, ತಾಲ್ಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಟಿ.ವಿ.ರಂಗನಾಥ್, ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷ ಪ್ರೊ.ಕೆ.ಪುಟ್ಟರಂಗಪ್ಪ ವಹಿಸಿದ್ದರು.
ಚಿದಂಬರೇಶ್ವರ ಉಚಿತ ಗ್ರಂಥಾಲಯದ ವತಿಯಿಂದ ಶಿವರಾಮ್‍ರವರನ್ನು ಗೌರವಿಸಲಾಯಿತು. ರೈಲ್ವೆ ರಾಮಚಂದ್ರು ಸ್ವಾಗತಿಸಿ, ಕೃಷ್ಣ ಚೈತನ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here