ಆಕರ್ಷಣೆಯ ಗಣಪಗಳನ್ನು ನೋಡುವುದೇ ಅಂದ

0
177

ತುಮಕೂರು:

               ನಗರದಲ್ಲಿ ಬಣ್ಣ ಬಣ್ಣದ ತರಹೇವಾರಿ ಗಣೇಶನ ಮೂರ್ತಿಗಳು ಆಕರ್ಷಣೇಯ ಕೇಂದ್ರಗಳಾಗಿವೆ. ತುಮಕೂರು ಬಸ್ ನಿಲ್ದಾಣದಿಂದ ಟೌನ್‍ಹಾಲ್ ವೃತ್ತದವರೆಗೂ ಗಣಪನದ್ದೇ ಸಾಲು ಸಾಲು. ವೈವಿಧ್ಯಮಯ ಗಣಪಗಳು ಇಲ್ಲಿ ಕಂಡುಬರುತ್ತವೆ.
              ಕಳೆದ ಒಂದು ವಾರದಿಂದಲೇ ರಸ್ತೆಯ ಬದಿಗಳಲ್ಲಿ ವಿವಿಧ ಬಗೆಯ ಗಣೇಶನ ವಿಗ್ರಹಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಕಳೆದ ಎರಡು ದಿನಗಳಿಂದ ತುಮಕೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದ ಜನತೆ ಗಣೇಶ ಮತ್ತು ಗೌರಿಯನ್ನು ಕೊಂಡೊಯ್ಯಲು ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂದಿತು. ಕೆಲವರು ವ್ಯವಹಾರ ಕುದುರಿಸಿ ಹೋಗಿದ್ದರೆ, ಮತ್ತೆ ಕೆಲವರು ಈಗ ತಾನೇ ಆಗಮಿಸಿ ವ್ಯವಹಾರದಲ್ಲಿ ತೊಡಗಿದ್ದರು.
                ಈ ಬಾರಿಯೂ ಜಿಲ್ಲೆಯಲ್ಲಿ ಮಳೆ ಇಲ್ಲ. ಬರದ ಛಾಯೆಯ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ಹಬ್ಬ ಮುಗಿದು ಹೋಯಿತು. ಹಣ್ಣು, ಹೂವಿನ ಧಾರಣೆ ಗಗನಕ್ಕೇರಿತ್ತು. ಅಂದು ಏರಿಕೆಯಾದ ಹೂವು ಮತ್ತು ಹಣ್ಣಿನ ಬೆಲೆ ಇಂದಿಗೂ ಇಳಿಕೆ ಕಂಡಿಲ್ಲ. ಬಾಳೆ ಹಣ್ಣಿನ ದರವಂತೂ 100 ರೂ.ಗಳಿಗೂ ಅಧಿಕವಾಗಿದೆ. ಹಣ್ಣು ಮತ್ತು ಹೂವಿನ ದರ ವಿಪರೀತ ಏರಿಕೆಯಾಗಿದ್ದು, ಗ್ರಾಹಕರಿಗೆ ಈ ಹಬ್ಬ ದುಬಾರಿ ಎನಿಸಿದೆ.
                 ಮಂಗಳವಾರ ಬೆಳಗಿನಿಂದಲೂ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬಂದಿತು. ಅಂತರಸನಹಳ್ಳಿ ಮಾರುಕಟ್ಟೆ, ಬಿ.ಎಚ್.ರಸ್ತೆ, ಜೆ.ಸಿ.ರಸ್ತೆ, ಎಸ್.ಎಸ್.ಪುರಂ, ಶೆಟ್ಟಿಹಳ್ಳಿ ರಸ್ತೆ, ಬಟವಾಡಿ, ಶಿರಾಗೇಟ್ ಮೊದಲಾದ ಕಡೆಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು. ಗೌರಿ ಬಾಗಿನಕ್ಕೆ ಈ ಹಬ್ಬ ವಿಶೇಷವಾಗಿದ್ದು, ಬಾಗಿನದ ಪರಿಕರಗಳನ್ನು ಖರೀದಿಸುವಲ್ಲಿ ಸ್ತ್ರೀಯರು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಂಡುಬಂದರು.
                 ಇಂದು ಗಣೇಶ ಚತುರ್ಥಿ. ಊರುಗಳಲ್ಲಿ, ಗ್ರಾಮಗಳಲ್ಲಿ ಗಣೇಶನ ಪ್ರತಿಷ್ಠಾಪನೆಗಾಗಿ ಯುವಕ ಸಂಘಗಳು ಮತ್ತು ಇತರೆ ಸಂಘ ಸಂಸ್ಥೆಗಳವರು ವಾಹನಗಳನ್ನು ಮಾಡಿಕೊಂಡು ಬಂದು ಗಣೇಶನ ವಿಗ್ರಹಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯ ಬುಧವಾರ ಕಂಡುಬಂದಿತು. ತುಮಕೂರಿನ ಮಾರುಕಟ್ಟೆಯಲ್ಲಿ ಗಣೇಶನ ಮೂರ್ತಿಗಳು ನೂರು ರೂ.ಗಳಿಂದ ಆರಂಭವಾಗಿ 50 ಸಾವಿರ ರೂ.ಗಳವರೆಗೂ ಮಾರಾಟವಾಯಿತು. ಕೆಲವರು ವಿಶೇಷ ಗಣಪನಿಗಾಗಿ ಹುಡುಕಾಡುತ್ತಿದ್ದ ದೃಶ್ಯಗಳು ಕಂಡುಬಂದವು. ನಗರದ ವಿವಿಧ ಬಡಾವಣೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಲು ಯುವಕರ ಪಡೆಗಳು ಗಣಪನ ಕೊಂಡೊಯ್ಯುತ್ತಿದ್ದ ದೃಶ್ಯ ಕಂಡುಬಂದಿತು.

LEAVE A REPLY

Please enter your comment!
Please enter your name here