ಆಗಸ್ಟ್ 8 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ

0
26

ಅಟ್ರಾಸಿಟಿ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ದೆಹಲಿ ಚಲೋ : ಟಿ.ನರಸಪ್ಪ
  

ಶಿರಾ:

      ಅಟ್ರಾಸಿಟಿ ಕಾಯ್ದೆಯನ್ನು ಮೊದಲು ಇದ್ದಂತೆ ಯಥಾವತ್ತಾಗಿ ಜಾರಿಗೊಳಿಸಬೇಕು. ಮಾರ್ಚ್ 20 ರ ಸುಪ್ರೀಂ ಕೋರ್ಟ್‍ನ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 8 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ದೆಹಲಿ ಚಲೋ ಬೃಹತ್ ಸಮಾವೇಶದ ಮೂಲಕ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಟಿ.ನರಸಪ್ಪ ಮಾದಿಗ ತಿಳಿಸಿದರು.

      ಈ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಮಾದಿಗ ಜನಾಂಗದ ಮುಖಂಡರ ಸಭೆ ಸೇರಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್‍ರವರು ತುಳಿತಕ್ಕೊಳಗಾದ, ಶೋಷಿಸಲ್ಪಟ್ಟ ಜನರ ಪರವಾಗಿ ಭದ್ರವಾದ ಕಾನೂನನ್ನು ರೂಪಿಸಿ ರಾಜ್ಯಾಂಗದಲ್ಲಿ ಅಡಕಗೊಳಿಸಿದರು.

      ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರಮೋದಿ ಸರಕಾರ ಅಟ್ರಾಸಿಟಿ ಕಾಯ್ದೆಯಲ್ಲಿರುವ ಮುಖ್ಯವಾದ ಅಂಶಗಳನ್ನು ತೆಗೆದು ಹಾಕಿ ಕಾಯ್ದೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಇದರಿಂದ ದೇಶದಲ್ಲಿರುವ ಸುಮಾರು 60 ಕೋಟಿ ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಅನನುಕೂಲವಾಗುತ್ತದೆ. ಆದ್ದರಿಂದ ಅಟ್ರಾಸಿಟಿ ಕಾಯ್ದೆಯಲ್ಲಿರುವ ಮುಖ್ಯವಾದ ಅಂಶಗಳನ್ನು ದುರ್ಬಲಗೊಳಿಸದೆ ಹಿಂದೆ ಇದ್ದ ಕಾನೂನಿನನ್ವಯ ಯಥಾವತ್ತಾಗಿ ಉಳಿಸಿಕೊಳ್ಳಬೇಕೆಂಬುದು ನಮ್ಮ ಹೋರಾಟದ ಗುರಿಯಾಗಿದೆ ಎಂದರು.

      ಆಗಸ್ಟ್ 8 ರಂದು ದೆಹಲಿಯಲ್ಲಿ ನಡೆಯುವ ದಲಿತ ಗಿರಿಜನ ಸಿಂಹಘರ್ಜನೆ ಚಲೋ ದೆಹಲಿ ಕಾರ್ಯಕ್ರಮದಲ್ಲಿ ಸುಮಾರು 30 ಲಕ್ಷ ಜನ ಸೇರಲಿದ್ದು, ರಾಜ್ಯದಿಂದಲೂ ಸುಮಾರು 30 ಸಾವಿರ ಜನ ಭಾಗವಹಿಸಲಿದ್ದಾರೆ. ಶಿರಾ ತಾಲ್ಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಎಸ್.ಸಿ., ಎಸ್.ಟಿ. ಜನಾಂಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

      ಮಾದಿಗ ಮಹಾಸಭಾದ ತಾತ್ಕಾಲಿಕ ಅಧ್ಯಕ್ಷ ಡಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಭಾರತ ಸ್ವತಂತ್ರ್ಯ ಗಳಿಸಿ 71 ವರ್ಷ ಗತಿಸಿದರೂ ದೀನ ದಲಿತರ, ಗಿರಿಜನರ, ಮಹಿಳೆಯರ ಸ್ಥಿತಿ ಶೋಚನೀಯವಾಗಿರುವುದು ತಿಳಿದಿದ್ದರೂ ಈಗ ಮತ್ತೊಮ್ಮೆ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ, ದೆಹಲಿ ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

      ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಗೋಡು ಯೋಗಾನಂದ್ ಮಾತನಾಡಿ, ದಲಿತರು, ಗಿರಿಜನರು ತಮ್ಮ ಮೇಲೆ ಆಗುತ್ತಿದ್ದ ದೌರ್ಜನ್ಯಗಳ ವಿರುದ್ದ ಕಾನೂನಿನಿಂದ ರಕ್ಷಣೆ ಪಡೆಯುವ ಅವಕಾಶವನ್ನು ಸರ್ವೋಚ್ಛ ನ್ಯಾಯಾಲಯದ ತೀರ್ಪಿನಿಂದ ಕಳೆದುಕೊಂಡಂತಾಗುತ್ತದೆ. ಅದಕ್ಕಾಗಿ ದೆಹಲಿ ಚಲೋ ಕಾರ್ಯಕ್ರಮವನ್ನು ರಾಷ್ಟ್ರಾಧ್ಯಕ್ಷ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ರಾಜ್ಯಗಳಿಂದಲೂ ಅಸಂಖ್ಯಾತ ಬಂಧುಗಳು ಆಗಮಿಸಲಿದ್ದಾರೆ. ಈ ಸಮಾವೇಶದ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರ ನೀಡುವುದು ನಮ್ಮ ಗುರಿಯಾಗಿದೆ. ತೀರ್ಪನ್ನು ಮರುಪರಿಶೀಲಿಸಿ ಯಥಾವತ್ತು ಜಾರಿಗೆ ಬರುವವರೆಗೂ ನಮ್ಮ ಹೋರಾಟ ನಿಲ್ಲದು ಎಂದರು.

      ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತೊಂಡೋಜಿ ರಾಮಾಂಜಿನಪ್ಪ, ರಾಜ್ಯ ಸಹಕಾರ್ಯದರ್ಶಿ ಸುರೇಶ್ ದುಗನೂರು, ಜಿಲ್ಲಾ ಮಾದಿಗ ದಂಡೋರ ಉಪಾಧ್ಯಕ್ಷ ಡಿ.ಸಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷ ಸತೀಶ್, ಬೀರನಹಳ್ಳಿ ಹನುಮಂತಪ್ಪ, ಅಪ್ಪಿ ರಂಗನಾಥ್, ಕಳುವರಹಳ್ಳಿ ಶಿವಣ್ಣ, ರಾಯಚೂರು ರಾಜಪ್ಪ, ರಮೇಶ್, ಮಹಲಿಂಗಪ್ಪ ಸೇರಿದಂತೆ ಹಲವರು ಹಾಜರಿದ್ದರು.

LEAVE A REPLY

Please enter your comment!
Please enter your name here