ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಎರಡೇ ದಿನ ಬಾಕಿ : ತುಮಕೂರು ಜಿಲ್ಲೆಯತ್ತಲೇ ಎಲ್ಲರ ಕಣ್ಣು ಕೇಂದ್ರೀಕೃತ

0
20

ತುಮಕೂರು:

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. ವಿಧಾನಸಭಾ ಚುನಾವಣೆಗಳ ಭರಾಟೆಯಲ್ಲಿ ಮಂಕಾಗಿಯೇ ಉಳಿದಿದ್ದ ಈ ಚುನಾವಣೆ ಏಪ್ರಿಲ್ ಕಳೆದು ಮೇ ತಿಂಗಳಿನಲ್ಲಷ್ಟೇ ಪ್ರಚಾರದ ಕಾವು ಪಡೆದುಕೊಂಡಿತು. ರಾಜಕೀಯ ವಿದ್ಯಮಾನಗಳ ತೊಳಲಾಟದಿಂದ ಹೊರಬಂದ ಪಕ್ಷಗಳ ಮುಖಂಡರು ಇತ್ತೀಚೆಗಷ್ಟೇ ಈ ಚುನಾವಣೆಯ ಬಗ್ಗೆ ಗಮನ ಹರಿಸಿದಂತಿದೆ.

  

 

 

 

     ಜೂ.2 ರಂದು ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್‍ಬಾಬು ಪರ ಹೆಚ್.ಡಿ.ದೇವೇಗೌಡರು ಪ್ರಚಾರಕ್ಕೆ ಚಾಲನೆ ನೀಡಿದರು. ಇದಾದ ಮಾರನೆಯ ದಿನ ಜೂ.3 ರಂದು ನಗರದ ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಇದರಿಂದಾಗಿ ಈ ಕ್ಷೇತ್ರದ ಚುನಾವಣಾ ಪ್ರಚಾರ ಮೇ ತಿಂಗಳ ಆರಂಭದಲ್ಲಿ ರಂಗು ಪಡೆದುಕೊಂಡಿತು. ಉಳಿದಿರುವ ಕೆಲವೇ ದಿನಗಳ ಅವಧಿಯಲ್ಲಿ ಮತದಾರರನ್ನು ತಲುಪುವ ಕೆಲಸವನ್ನು ಅಭ್ಯರ್ಥಿಗಳು ಹೇಗೆ ನಿಭಾಯಿಸುತ್ತಾರೆ ಎಂಬುದೇ ಈಗ ಕುತೂಹಲ.

     ಕೆಲವರು ವರ್ಷದಿಂದಲೇ ಚುನಾವಣೆಗೆ ಅಣಿಯಾಗಿದ್ದರು. ಮತ್ತೆ ಕೆಲವರು ಇತ್ತೀಚೆಗಷ್ಟೇ ಟಿಕೆಟ್ ಪಡೆದು ಶಿಕ್ಷಕ ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳ ಜೊತೆ ಪಕ್ಷೇತರರಾಗಿ 11 ಜನ ಕಣದಲ್ಲಿರುವುದರಿಂದ ಒಟ್ಟು 14 ಅಭ್ಯರ್ಥಿಗಳು ತಮ್ಮ ಭವಿಷ್ಯವನ್ನು ಅಖಾಡದಲ್ಲಿ ಇಟ್ಟಿದ್ದಾರೆ.

     ಜೆಡಿಎಸ್ ಪಕ್ಷದಿಂದ ರಮೇಶ್‍ಬಾಬು ಪಕ್ಷದ ವರಿಷ್ಠರನ್ನು ಕ್ಷೇತ್ರದ ಕೆಲವು ಕಡೆ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಳೆದ ಬಾರಿಯೂ ದೇವೇಗೌಡರೇ ರಮೇಶ್‍ಬಾಬು ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಆಗ (ಒಂದೂವರೆ ವರ್ಷಗಳ ಹಿಂದೆ) ಜೆಡಿಎಸ್‍ನಲ್ಲಿ ಎರಡು ಬಣಗಳ ರೀತಿಯಲ್ಲಿ ಗುರುತಿಸಿಕೊಂಡಿದ್ದವು. ಹೆಚ್.ಡಿ.ಕುಮಾರಸ್ವಾಮಿ ಅವರು ಹೆಚ್.ಎಸ್.ಶಿವಶಂಕರ್ ಅವರ ಸಹೋದರನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿದ್ದಾರೆಂದು ಹೇಳಲಾಗಿತ್ತು. ಕುಮಾರಸ್ವಾಮಿ ಹೆಸರಿನಲ್ಲಿ ಅವರು ಮತ ಯಾಚನೆ ನಡೆಸಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಮೇಶ್‍ಬಾಬು ಸ್ಪರ್ಧಿಸಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

     ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಳೆದ ಬಾರಿ ಪೆಪ್ಸಿ ಬಸವರಾಜು ಕಣದಲ್ಲಿದ್ದರು. ಆಗ ಬಿ.ಎಸ್.ಯಡಿಯೂರಪ್ಪ ಅವರೇ ಚುನಾವಣಾ ಪ್ರಚಾರಕ್ಕೆ ಆಗಮಿಸಿ ಬಿಜೆಪಿ ಕ್ಷೇತ್ರವನ್ನಿಸಿರುವ ಈ ಸ್ಥಾನವನ್ನು ಮತ್ತೆ ಬಿಜೆಪಿ ಅಭ್ಯರ್ಥಿಗೆ ಒಲಿಸಿಕೊಡುವಂತೆ ಮನವಿ ಮಾಡಿ ಹೋಗಿದ್ದರು. ಕೇವಲ ಒಂದೂವರೆ ವರ್ಷಗಳ ಅವಧಿಯ ಅಧಿಕಾರಕ್ಕಾಗಿ ಅಷ್ಟು ತಲೆಕೆಡಿಸಿಕೊಳ್ಳದೇ ಹೋದರೂ ವಿವಿಧ ಅಭ್ಯರ್ಥಿಗಳು ಸಕ್ರಿಯವಾಗಿ ಚುನಾವಣೆಯನ್ನು ಎದುರಿಸಿದ್ದರು. ಪಕ್ಷಗಳ ಮುಖಂಡರು ಸಹ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿತ್ತು.

     ಕಾಂಗ್ರೆಸ್‍ನಿಂದ ಟಿ.ಎಸ್.ನಿರಂಜನ್ ಸ್ಪರ್ಧಿಸಿದ್ದರೂ ಸಹ ಇವರ ಪ್ರಚಾರ ಏಕಾಂಗಿ ಹೋರಾಟದಂತೆ ಕಾಣುತ್ತಿತ್ತು. ಬಹಳ ದಿನಗಳಿಂದಲೇ ಈ ಕ್ಷೇತ್ರದ ಮೇಲೆ ಕಣ್ಣಿಟ್ಟು ಪ್ರಚಾರದಲ್ಲಿ ತೊಡಗಿಸಿಕೊಂಡರಾದರೂ ಬಹಿರಂಗ ಚುನಾವಣಾ ಪ್ರಚಾರ ಸಭೆಗಳಿಗೆ ಕಾಂಗ್ರೆಸ್ ಮುಖಂಡರು ಗೈರು ಹಾಜರಾಗಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಗಮನ ಹರಿಸಿದ ರೀತಿ ಕಾಂಗ್ರೆಸ್ ಮುಖಂಡರು ಈ ಚುನಾವಣೆಯಲ್ಲಿ ಗಮನ ಹರಿಸಲಿಲ್ಲ. ಈ ಬಾರಿಯೂ ಇಂತಹ ಸ್ಥಿತಿಯೇ ಇದೆ. ಕಾಂಗ್ರೆಸ್ ಅಭ್ಯರ್ಥಿ ಎಂ.ರಾಮಪ್ಪ ಮೂಲತಃ ಚಿತ್ರದುರ್ಗ ಜಿಲ್ಲೆಯವರಾದರೂ ತುಮಕೂರಿಗೆ ಎರಡು ಬಾರಿ ಬಂದು ಹೋಗಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆದರೆ ಪಕ್ಷದ ವತಿಯಿಂದ ಇವರ ಪರವಾಗಿ ಮುಖಂಡರು ಈ ಬಾರಿಯೂ ಚುನಾವಣಾ ಪ್ರಚಾರ ಕೈಗೊಂಡಂತೆ ಕಾಣುತ್ತಿಲ್ಲ. ಸ್ಥಳೀಯ ಮುಖಂಡರ ಜೊತೆ ಎಂ.ರಾಮಪ್ಪ ಸಂಪರ್ಕ ಸಾಧಿಸಿ ತಮ್ಮ ಪ್ರಚಾರವನ್ನು ಮುಂದುವರೆಸಿದ್ದಾರೆ.

     ಎಲ್ಲರೂ ತುಮಕೂರಿನತ್ತಲೇ ಗಮನ ಹರಿಸುತ್ತಿರುವುದರ ಬಗ್ಗೆ ಕಾರಣವೂ ಇದೆ. 5 ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 19402. ಇವರಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಮತದಾರರು ತುಮಕೂರು ಜಿಲ್ಲೆಯಲ್ಲೇ ಇದ್ದಾರೆ. 6400ಕ್ಕೂ ಹೆಚ್ಚು ಮತದಾರರು ಈ ಜಿಲ್ಲೆಯಲ್ಲಿ ಇರುವುದರಿಂದ ಎಲ್ಲ ಅಭ್ಯರ್ಥಿಗಳ ಕಣ್ಣು ತುಮಕೂರಿನತ್ತ ನೆಟ್ಟಿದೆ. ಇದೇ ಕಾರಣಕ್ಕಾಗಿ ಪ್ರಚಾರ ಸಭೆಗಳು ಹಾಗೂ ಶಿಕ್ಷಕ ಮತದಾರರನ್ನು ಭೇಟಿ ಮಾಡುವ ತವಕ ಇಲ್ಲೇ ಹೆಚ್ಚು.

     ಕಣದಲ್ಲಿರುವ ರಮೇಶ್ ಬಾಬು ಹಾಗೂ ವೈ.ಎ.ನಾರಾಯಣಸ್ವಾಮಿ ಇಬ್ಬರೂ ಈಗಾಗಲೇ ಈ ಕ್ಷೇತ್ರವನ್ನು ಪ್ರತಿನಿಧಿಸಿ ಅನುಭವ ಹೊಂದಿದವರು. ರಮೇಶ್‍ಬಾಬು ಒಂದೂವರೆ ವರ್ಷದ ಅವಧಿಗೆ ವಿಧಾನಸಭಾ ಸದಸ್ಯರಾಗಿ ಅಧಿಕಾರ ಅನುಭವಿಸಿದರೆ, ವೈ.ಎ.ನಾರಾಯಣಸ್ವಾಮಿ ಎರಡು ಬಾರಿ ಇದೇ ಕ್ಷೇತ್ರದಿಂದ ಆರಿಸಿ ಹೋಗಿದ್ದಾರೆ. ಹೆಬ್ಬಾಳದಲ್ಲಿ ಅವಕಾಶ ವಂಚಿತರಾಗಿ ಮತ್ತೆ ಇದೇ ಕ್ಷೇತ್ರಕ್ಕೆ ಆಗಮಿಸಿರುವ ವೈ.ಎ.ಎನ್. ಇನ್ನು ಮುಂದೆ ಈ ಕ್ಷೇತ್ರ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ, ನನ್ನ ಎರಡು ವರ್ಷಗಳ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನೋಡದ ಶಾಲೆಗಳಿಲ್ಲ, ಭೇಟಿ ನೀಡದ ಊರುಗಳಿಲ್ಲ ಎಂದು ಹೇಳಿಕೊಂಡು ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.

     ಹಾಲನೂರು ಲೇಪಾಕ್ಷ್ ಅವರ ಪಾಲಾಗಿದ್ದ ಬಿಜೆಪಿ ಟಿಕೆಟ್ ತನ್ನ ಪರ ಆಗುವಲ್ಲಿ ಯಶಸ್ವಿಯಾಗಿರುವ ವೈ.ಎ.ಎನ್. ಲೇಪಾಕ್ಷ್ ಅವರನ್ನು ಯಾವ ರೀತಿ ಸಮಧಾನಪಡಿಸಿದ್ದಾರೋ ಗೊತ್ತಿಲ್ಲ. ಆದರೆ ಈ ವಿಷಯವನ್ನು ಬಿ.ಎಸ್.ಯಡಿಯೂರಪ್ಪ ಮಾತ್ರ ಸ್ಪಷ್ಟಪಡಿಸಿದ್ದಾರೆ. ಕೆಲವೊಂದು ಕಾರಣಗಳಿಗಾಗಿ ಹಾಲನೂರು ಲೇಪಾಕ್ಷ್ ಅವರ ಕೈತಪ್ಪಿಸಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಬೇಕಾಗಿ ಬಂದಿತು. ನಾನೇ ಖುದ್ದು ಎರಡು ಬಾರಿ ಕರೆಸಿಕೊಂಡು ಲೇಪಾಕ್ಷ್ ಅವರನ್ನೇ ಸಮಾಧಾನಪಡಿಸಿದ್ದೇನೆ. ಹೀಗಾಗಿ ಯಾವುದೇ ಗೊಂದಲಗಳಿಲ್ಲ. ಬಿ.ಎಸ್.ಯಡಿಯೂರಪ್ಪ ಅವರ ಮುಖಾ ನೋಡಿಕೊಂಡು ಮತ ಹಾಕಿ. ನೀವು ವೈ.ಎ.ಎನ್.ಗೆ ಮತ ಹಾಕಿದರೆ ಲೇಪಾಕ್ಷ್ ಅವರಿಗೆ ಮತ ಹಾಕಿದಂತೆ ಎಂದು ಹೇಳಿ ಹೋಗಿದ್ದಾರೆ.

     ಕುಮಾರಸ್ವಾಮಿ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಮೆಲುಕು ಹಾಕಿರುವ ಹೆಚ್.ಡಿ.ದೇವೇಗೌಡರು ಈಗ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತಾರೆ. ಜೆಡಿಎಸ್ ಅಭ್ಯರ್ಥಿ ಎಲ್ಲ ವಿಧದಲ್ಲೂ ಸಮರ್ಥರಿದ್ದು, ಅವರನ್ನೇ ಮರು ಆಯ್ಕೆ ಮಾಡಿ ಎಂದು ಹೆಚ್.ಡಿ.ದೇವೇಗೌಡರು ಕರೆ ಕೊಟ್ಟು ಹೋಗಿದ್ದಾರೆ.

     ಕಾಂಗ್ರೆಸ್ ಅಭ್ಯರ್ಥಿಯ ಪರ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಮತ್ತಿತರರ ಮುಖಂಡರು ಪತ್ರಿಕಾ ಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೂಲತಃ ಶಿಕ್ಷಕರಾಗಿದ್ದು, ಇವರನ್ನು ಆಯ್ಕೆ ಮಾಡಿದರೆ ಮಾತ್ರವೇ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಉಳಿದ ಎರಡು ಪಕ್ಷಗಳ ಅಭ್ಯರ್ಥಿಗಳು ಮೂಲತಃ ಶಿಕ್ಷಕರಲ್ಲ. ಆದಕಾರಣ ಎಂ.ರಾಮಪ್ಪ ಅವರನ್ನೇ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

    ಇರುವ ಕಡಿಮೆ ಅವಧಿಯಲ್ಲಿ ಎಲ್ಲ ಶಿಕ್ಷಕರನ್ನು ಅಭ್ಯರ್ಥಿಗಳು ಭೇಟಿ ಮಾಡಲು ಸಾಧ್ಯವಾಗದು. ಅಭ್ಯರ್ಥಿಗಳ ಪರ ನಿಂತಿರುವ ಮುಖಂಡರುಗಳು ಗುಂಪು ಗುಂಪಾಗಿ ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರ ವಲಯದಲ್ಲಿಯೂ ಆಸೆ ಆಮಿಷಗಳು ಗರಿಗೆದರಿದ್ದು, ಅಭ್ಯರ್ಥಿಗಳು ನೀಡುವ ಕಾಣಿಕೆಗಳತ್ತ ಮುಖ ಮಾಡುತ್ತಾರೆ ಎಂಬುದನ್ನು ಈಗಾಗಲೇ ಕಳೆದ ಚುನಾವಣೆಗಳು ತೋರಿಸಿಕೊಟ್ಟಿವೆ. ಹೀಗಾಗಿ ಈ ಕ್ಷೇತ್ರ ತನ್ನ ಪಾವಿತ್ರ್ಯತೆ ಉಳಿಸಿಕೊಂಡಿದೆ ಎಂಬುದನ್ನು ಯಾರೂ ಒಪ್ಪಲಾರರು.

     ಚುನಾವಣಾ ಆಯೋಗವು 2018ರ ವಿಧಾನಸಭಾ ಚುನಾವಣೆಗೆ ಪ್ರತಿ ಅಭ್ಯರ್ಥಿಯ ವೆಚ್ಚವನ್ನು 28 ಲಕ್ಷ ರೂ.ಗಳಿಗೆ ಮಿತಿಗೊಳಿಸಿತ್ತು. ಆದರೆ ವಿಧಾನ ಪರಿಷತ್‍ಗೆ ನಡೆಯುವ ಈ ಚುನಾವಣೆಗೆ ಯಾವುದೇ ವೆಚ್ಚ ಮಿತಿ ಇಲ್ಲ. ಹೀಗಾಗಿ ಚುನಾವಣಾ ಆಯೋಗದ ಭಯ-ಭೀತಿಗಳು ಕಾಡುತ್ತಿಲ್ಲ. ವಿಧಾನಸಭಾ ಚುನಾವಣೆಗಾದರೆ ವೆಚ್ಚ ಮಿತಿಯನ್ನು ಹಾಕಲಾಗಿದೆ.

     ವಿಧಾನ ಪರಿಷತ್ತಿಗೆ ನಡೆಯುವ ಈ ಚುನಾವಣೆ ಸುಶಿಕ್ಷಿತ ಮತದಾರರಿಂದ ಕೂಡಿದೆ. ಇಲ್ಲಿಯೂ ಚುನಾವಣಾ ವೆಚ್ಚ ಮಿತಿ ನಿಗದಿಗೊಳಿಸಬೇಕಿತ್ತು. ಎಷ್ಟು ಬೇಕಾದರೂ ವೆಚ್ಚ ಮಾಡುವ ಅವಕಾಶ ಇರುವುದರಿಂದ ಭ್ರಷ್ಟಾಚಾರಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ ಎನ್ನುತ್ತಾರೆ ಕಳೆದ ಬಾರಿ ಸ್ಪರ್ಧಿಸಿದ್ದ ಕಾಂಗ್ರೆಸ್ ವಕ್ತಾರರು ಆಗಿರುವ ಟಿ.ಎಸ್.ನಿರಂಜನ್.

     ಜೆಡಿಎಸ್ ಮತ್ತು ಬಿಜೆಪಿ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಈ ಹಿಂದೆ ಬಿಜೆಪಿಯಿಂದ ತೆರವಾಗಿದ್ದ ಸ್ಥಾನವನ್ನು ಜೆಡಿಎಸ್ ಅಲಂಕರಿಸಿದೆ. ಮರಳಿ ಕ್ಷೇತ್ರ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ಹಾಲಿ ಇರುವ ಸ್ಥಾನವನ್ನು ಉಳಿಸಿಕೊಳ್ಳಲು ಜೆಡಿಎಸ್ ಹೋರಾಟ ನಡೆಸಿದೆ. ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ತನ್ನದೇ ಆದ ನೆಲೆಗಟ್ಟಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಶಿಕ್ಷಕ ಮತದಾರರು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ.

-ಸಾ.ಚಿ.ರಾಜಕುಮಾರ

LEAVE A REPLY

Please enter your comment!
Please enter your name here