ಆಡಳಿತ ಯಂತ್ರ ಚುರುಕುಗೊಳಿಸಲು ಮುಖ್ಯಮಂತ್ರಿ ಪ್ರಯತ್ನ

0
23

ಅಧಿಕಾರಿಗಳೊಂದಿಗೆ ಇಂದು ಸಿಎಂ ಸಭೆ

ಬೆಂಗಳೂರು:

Image result for vidhana soudha

      ಉತ್ತರ ಕರ್ನಾಟಕಕ್ಕಾಗಿ ಪ್ರತ್ಯೇಕ ಕೂಗು, ಮಳೆ ಅನಾಹುತ, ಕೃಷಿ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಉದ್ದೇಶದಿಂದ ಸೋಮವಾರ ಮತ್ತು ಮಂಗಳವಾರದಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಇಲಾಖೆ ಮುಖ್ಯಸ್ಥರ ಸಭೆ ಕರೆದಿದ್ದಾರೆ.

      ನಡೆಯುವ ಎರಡು ದಿನಗಳ ಈ ಸಭೆಯಲ್ಲಿ ಜಿಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮೂಡಿಸಲಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಡಳಿತಳಿಗೆ ನೀಡಲಿದ್ದಾರೆ. ವಿಫಲವಾದರೆ ಸಂಬಂಧಪಟ್ಟ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳನ್ನು ಹೊಣೆ ಮಾಡುವ ಉದ್ದೇಶವನ್ನು ಮುಖ್ಯಮಂತ್ರಿ ಅವರು ಹೊಂದಿದ್ದಾರೆ.

      ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಮೈತ್ರಿ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಜನರಿಗೆ ತಲುಪಿಸುವಂತೆ ನಿರ್ದೇಶನ ನೀಡಲು ಜಿಲ್ಲಾಡಳಿತ, ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಇಲಾಖಾವಾರು ಮುಖ್ಯಸ್ಥರಿಗೆ ಸೂಚನೆ ನೀಡಲಿದ್ದಾರೆ.

      ಮೈತ್ರಿ ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಹಾಗೂ ಹಿಂದಿನ ಸರ್ಕಾರದ (ಕಾಂಗ್ರೆಸ್) ಕಾರ್ಯಕ್ರಮಗಳ ಜಾರಿ ಮಾಡುವ ಕುರಿತು ಅಗತ್ಯ ನಿರ್ದೇಶನ ನೀಡಲಿದ್ದಾರೆ. ರಾಜ್ಯದಲ್ಲಿ ಈ ವರ್ಷ ಉತ್ತಮ ಮುಂಗಾರು ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಅಗತ್ಯ ವ್ಯವಸ್ಥೆ ಮತ್ತು ಸಹಕಾರ ನೀಡುವಂತೆ ನಿರ್ದೇಶನ ನೀಡಲಿದ್ದಾರೆ.

      ಮೈತ್ರಿ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲವೆಂದು ಪ್ರತಿಪಕ್ಷ ಬಿಜೆಪಿ ಮಾಡುತ್ತಿರುವ ಗಂಭೀರ ಆರೋಪ ಹಾಗೂ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಆದ್ಯತೆ ನೀಡಬೇಕು. ಜತೆಗೆ ಹೈ.ಕ. ಅಭಿಮಂಡಳಿಗೆ ನಿಗದಿಗೊಳಿಸಿರುವ ಯೋಜನೆಗಳನ್ನು ಸರಿಯಾಗಿ ಜಾರಿಗೆ ತರುವಂತೆಯೂ ಮುಖ್ಯಮಂತ್ರಿ ಅವರು ಸೂಚನೆ ನೀಡುವ ನಿರೀಕ್ಷೆಯಿದೆ.

      ಎರಡು ದಿನಗಳ ಸಮ್ಮೇಳನದಲ್ಲಿ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತ ಸಮುದಾಯಕ್ಕೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ್ದು, ಅದರ ಅನುಷ್ಠಾನದ ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ.

      ರಾಜ್ಯ ಸರ್ಕಾರ ಅಯವ್ಯಯದಲ್ಲಿ ಪ್ರತಿ ಜಿಲ್ಲೆಗೂ ಇಟ್ಟಿರುವ ನೆರವು, ವಿಶೇಷ ಅನುದಾನ ಹಾಗೂ ರಾಜ್ಯ ಸರ್ಕಾರದ ಪ್ರಾಯೋಜತ್ವದ ಕಾರ್ಯಕ್ರಮಗಳು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡುವ ನಿರೀಕ್ಷೆ ಇದೆ. ಮುಂಗಾರು ಮಳೆಯಿಂದ ಜನರು ತತ್ತರಿಸಿದ್ದು, ತಾತ್ಕಾಲಿಕ, ಶಾಶ್ವತ ಪರಿಹಾರ, ಜಿಲ್ಲಾ ಹಾಗೂ ತಾಲೂಕು ಹೆದ್ದಾರಿಗಳ ಕಾಮಗಾರಿ, ವಿದ್ಯುತ್ ಸಂಪರ್ಕ, ವಾಹನ ಸಂಚಾರಕ್ಕೆ ಅಡೆತಡೆ ಇಲ್ಲದೆ ಸೂಕ್ತ ಮಾರ್ಪಾಡು ಹಾಗೂ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸಂಬಂಧಪಟ್ಟ ಸಚಿವರಿಂದ ಮುಖ್ಯಮಂತ್ರಿಗಳ ಮೂಲಕ ಆದೇಶ ಮಾಡಿಸುವ ಸಾಧ್ಯತೆ ಇದೆ.

      ಜಿಲ್ಲೆಗಳಲ್ಲಿ ಮಳೆಯಿಂದಾಗಿರುವ ಅನಾಹುತಗಳಿಗೆ ಪರಿಹಾರ ವಿತರಣೆಯಲ್ಲಿ ಲೋಪವಾಗಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆಯೂ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here