ಆತ್ಮಹತ್ಯೆಗೆ ಯತ್ನಿಸಿದ್ದ ನಾಗಣ್ಣನಿಗೆ ಕಾಮಗಾರಿ ಹಣ : ಸಿಇಓ ; ಹಣ ಕೊಟ್ಟರೆ ಲೋಕಾಯುಕ್ತರಿಗೆ ದೂರು: ಮಚ್ಚು ಬಸವರಾಜು

0
20

ಹುಳಿಯಾರು:

      ಉದ್ಯೋಗಖಾತ್ರಿ ಯೋಜನೆಯಡಿ ಮಾಡಿರುವ ಕಾಮಗಾರಿಗೆ ಹಣ ನೀಡುವಂತೆ ಒತ್ತಾಯಿಸಿ ಚಿ.ನಾ.ಹಳ್ಳಿ ತಾಪಂ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ನಾಗರಾಜು ಅವರಿಗೆ ಹಣ ಕೊಡ್ತೇವೆ ಎಂದು ಜಿಪಂ ಸಿಇಓ ಅನೀಸ್ ಜಾಯ್ ಕಣ್ಮಣಿ ತಿಳಿಸಿದರೆ, ನಾಗಣ್ಣನಿಗೆ ಹಣ ಕೊಟ್ಟರೆ ಅಕ್ರಮ ಬಿಲ್ ಪಾವತಿ ಪ್ರಕರಣದಡಿ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಗ್ರಾಮಸ್ಥ ಮಚ್ಚು ಬಸವರಾಜು ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

      ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ರೈತ ಮುಖಂಡ ಕಾಡಿನರಾಜ ನಾಗರಾಜು ಅವರು ಕೆಂಕೆರೆ ಗ್ರಾಪಂ ವ್ಯಾಪ್ತಿಯ ಬರದಲೇಪಾಳ್ಯದಲ್ಲಿ ಉದ್ಯೋಗಖಾತ್ರಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ಮಾಡಿದ್ದು, ಹಣ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸ್ಮತ್ತಿದ್ದಾರೆಂದು ಆರೋಪಿಸಿ ತಾಲ್ಲೂಕು ಪಂಚಾಯ್ತಿ ಎದುರಲ್ಲೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಿನ್ನೆಲೆಯಲ್ಲಿ ಜಿಪಂ ಸಿಇಓ ಅನೀಸ್ ಜಾಯ್ ಕಣ್ಮಣಿ ಅವರು ಕೆಂಕೆರೆ ಗ್ರಾಮ ಪಂಚಾಯ್ತಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

      ಗ್ರಾಮ ಪಂಚಾಯ್ತಿ ಕಚೇರಿಗೆ ಆಗಮಿಸಿದ ಸಿಇಓ ಅವರು ನಾಗಣ್ಣ ಮಾಡಿದ್ದಾರೆ ಎನ್ನಲಾದ ಕಾಮಗಾರಿಯ ಬಗ್ಗೆ ಅಧ್ಯಕ್ಷೆ ಹಾಗೂ ಪಿಡಿಓ ಅವರ ಬಳಿ ದಾಖಲೆ ಸಹಿತ ಮಾಹಿತಿ ಪಡೆದರು. ನಾಗಣ್ಣ ಅವರು ಬರದಲೇಪಾಳ್ಯದಲ್ಲಿ ಕಾಮಗಾರಿ ಮಾಡಿದ್ದರೂ ಸಹ ಉದ್ಯೋಗಖಾತ್ರಿ ಯೋಜನೆಯ ನಿಯಮದಂತೆ ಕಾಮಗಾರಿ ಮಾಡಿಲ್ಲ. ಅಂದರೆ ವರ್ಕ್ ಆರ್ಡರ್ ಇಲ್ಲ, ಆಕ್ಷನ್ ಪ್ಲ್ಯಾನ್ ಇಲ್ಲ. ಎನ್‍ಎಂಆರ್ ತೆಗೆಯದೆ ಕಾಮಗಾರಿ ಮಾಡಿರುವುದರಿಂದ ಉದ್ಯೋಗಖಾತ್ರಿಯಲ್ಲಿ ಹಣ ಕೊಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

      ನಂತರ ಮಾತನಾಡಿದ ಸಿಇಓ ಅವರು ಉದ್ಯೋಗಖಾತ್ರಿ ನಿಯಮ ಪಾಲಿಸಿಲ್ಲ ಎನ್ನುವ ತಪ್ಪು ಬಿಟ್ಟರೆ ನಾಗಣ್ಣ ಅವರು ಬರದಲೇಪಾಳ್ಯದಲ್ಲಿ ಕಾಮಗಾರಿ ಮಾಡಿರುವುದು ಸತ್ಯ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬೇರೆ ಯಾವುದಾದರೂ ಯೋಜನೆಯಲ್ಲಿ ಹಣ ನೀಡುವುದಾಗಿ ಸಿಇಓ ಹೇಳಿದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಚ್ಚು ಬಸವರಾಜು ಅವರು ನಾಗಣ್ಣ ಮಾಡಿರುವ ಕಾಮಗಾರಿ ಕಳಪೆಯಿಂದ ಕೂಡಿದೆಯಲ್ಲದೆ ಯಂತ್ರಗಳ ಸಹಾಯದಿಂದ ಮಾಡಿದ್ದಾರೆ. ಹಾಗಾಗಿ ನಾಗಣ್ಣನಿಗೆ ಹಣ ನೀಡಿದರೆ ಅಕ್ರಮ ಬಿಲ್ ಪಾವತಿ ಪ್ರಕರಣದಡಿ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.

      ಗ್ರಾಮ ಪಂಚಾಯ್ತಿ ಸದಸ್ಯರು ಕಾಮಗಾರಿ ಮಾಡಬಾರದೆಂಬ ನಿಯಯ ಇದ್ದರೂ ನಾಗಣ್ಣ ಮಾಡಿರುವ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದು ಮಾಡಬೇಕು. ಅದನ್ನು ಬಿಟ್ಟು ಹಣ ಕೊಡ್ತೇವೆ ಎನ್ನುವುದು ಸರಿಯಲ್ಲ. ನಾಗಣ್ಣ ಅವರು ಈ ಹಿಂದೆಯೂ ಅನೇಕ ಕಾಮಗಾರಿ ಮಾಡಿ ಹಣ ಪಡೆದಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೆ ಹಣ ಕೊಡಿಸಿದ್ದಾರೆ. ಹಾಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರಲ್ಲದೆ ನಾಗಣ್ಣ ಅವರು ಕಾಮಗಾರಿ ಮಾಡಲು ತಾಪಂ ಇಓ ಸೂಚಿಸಿರುವುದರಿಂದ ಇಓ ಅವರೆ ತಮ್ಮ ಸ್ವಂತ ಹಣ ಕೊಡಲಿ ಎಂದರು.

      ಇದರಿಂದ ಸ್ವಲ್ಪ ಮಟ್ಟಿಗೆ ಗೊಂದಲಕ್ಕೆ ಸಿಲುಕಿದ ಸಿಇಓ ಅವರು ನಾಗಣ್ಣನಿಗೆ ಹಣ ಕೊಡುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಾರದೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ನಿರ್ಗಮಿಸಿದರು. ಒಟ್ಟಾರೆ ನಾಗಣ್ಣನಿಗೆ ಉದ್ಯೋಗಖಾತ್ರಿ ಯೋಜನೆಯಡಿ ಹಣ ಸಿಗೋದಿಲ್ಲ ಎನ್ನುವುದು ಸ್ಪಷ್ಟವಾಗಿದ್ದು ಬೇರೆ ಯೋಜನೆಯಡಿ ನಾಗಣ್ಣನ ಕಾಮಗಾರಿಗೆ ಹಣ ಸಿಗುವುದೋ ಇಲ್ಲವೋ ಎನ್ನುವುದನ್ನು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here