ಆಲದಕಟ್ಟೆ ಕೆರೆ ರಾಜಕಾಲುವೆ ದುರಸ್ತಿ

0
27

ಚಿಕ್ಕನಾಯಕನಹಳ್ಳಿ

     ತಾಲ್ಲೂಕಿನ ಆಲದಕಟ್ಟೆ ಕೆರೆಯ ಹೂಳನ್ನು ಧರ್ಮಸ್ಥಳ ಸಂಸ್ಥೆ ವತಿಯಿಂದ ಸಂಪೂರ್ಣವಾಗಿ ತೆಗೆಯಲಾಗಿದೆ. ಶ್ಯಾವಿಗೆಹಳ್ಳಿಯಿಂದ ಆಲದಕಟ್ಟೆ ಕೆರೆಗೆ ನೀರು ಹರಿದು ಬರಲು ರಾಜಕಾಲುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಲಾಗಿದ್ದು ಕೆರೆಗೆ ಸುತ್ತಮುತ್ತಲ ಮಳೆಯ ನೀರು ಹರಿದು ಬರುವಂತೆ ಕಾಲುವೆಗಳು ದುರಸ್ತಿ ಮಾಡಲಾಗಿದೆ.

   ಈ ವರ್ಷ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಕಟ್ಟೆ ಕೆರೆ ಆಯ್ಕೆ ಮಾಡಿಕೊಂಡು ಕೆರೆಯು 10 ಎಕರೆ ವಿಸ್ತೀರ್ಣ ಪುನಶ್ಚೇತನಗೊಳಿಸಲಾಗಿದೆ. ಕೆರೆಯ ಅಭಿವೃದ್ಧಿಗೆ 8 ಲಕ್ಷ ರೂಪಾಯಿ ವಿಂಗಡಿಸಲಾಗಿದೆ. ಕೆರೆಯ ಹೂಳನ್ನು ಸಂಪೂರ್ಣವಾಗಿ ತೆಗೆಯುವುದರ ಜೊತೆಗೆ ನಂದಿಹಳ್ಳಿ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ 6ಲಕ್ಷ ರೂಪಾಯಿ ಸೇರಿದಂತೆ 2 ಕೆರೆಗಳ ಅಭಿವೃದ್ಧಿಗೆ ಒಟ್ಟು 14 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರೈತರು ತಮ್ಮ ಜಮೀನುಗಳಿಗೆ ಮಣ್ಣನ್ನು ಒಡೆದುಕೊಂಡಿದ್ದಾರೆ.

   ಈ ಮೂಲಕ ಆಲದಕಟ್ಟೆ ಕೆರೆಯ ಕೆಲಸ ಅತ್ಯುತ್ತಮವಾಗಿ ಪೂರ್ಣಗೊಳಿಸಲಾಗಿದ್ದು, ರಾಜಕಾಲುವೆಯ ನಿರ್ಮಾಣದಿಂದ ರೈತರ ಕೃಷಿ ಭೂಮಿಗಳಿಗೆ ನೀರು ಒದಗಿಸುವ ಜೊತೆಯಲ್ಲಿ ಆಲದಕಟ್ಟೆ ಕೆರೆಯ ಏರಿಯ ಮೇಲೆ ರೈತರು ಹಾಗೂ ಜಾನುವಾರುಗಳು ಓಡಾಡಲು 1.5 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಆಲದಕಟ್ಟೆ ಕೆರೆಯ ಪಕ್ಕದಲ್ಲಿ ಉದ್ಯಾನವನ ನಿರ್ಮಿಸಲು 7ಲಕ್ಷ ರೂಪಾಯಿ ಮೀಸಲಿಟ್ಟಿದ್ದು ಕೆರೆಯ ಸುತ್ತಮುತ್ತಲು ಅರಣ್ಯ ಇಲಾಖೆಯಿಂದ 1.5ಲಕ್ಷ ಮೊತ್ತದಲ್ಲಿ 800ಗಿಡಗಳನ್ನು ಮುಂದಿನ ದಿನಗಳಲ್ಲಿ ನೆಡಲಾಗುವುದು. ಆಲದಕಟ್ಟೆ ಕೆರೆಗೆ ನೀರು ಬಂದ ನಂತರ ಸದರಿ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಗುವುದು.

     2017-18 ನೇ ಸಾಲಿನಲ್ಲಿ ರಾಜ್ಯದ ವಿವಿಧ ತಾಲ್ಲೂಕುಗಳ 83 ಕೆರೆಗಳ ಪುನಶ್ಚೇತನಕ್ಕೆ 10 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಮುಂದುವರೆದ ಭಾಗವಾಗಿ 2018-19ನೇ ಸಾಲಿನಲ್ಲಿ ರಾಜ್ಯದ 151 ಕೆರೆಗಳನ್ನು 20 ಕೋಟಿ ವೆಚ್ಚದಲ್ಲಿ ಪುನಶ್ಚೇತನ ಮಾಡಲು ಹಣ ಮೀಸಲಿಡಲಾಗಿದೆ. ರಾಜ್ಯದಲ್ಲಿ ಮಳೆ ಕೊರತಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಬಿದ್ದ ಮಳೆಯ ನೀರನ್ನು ಸಂಗ್ರಹಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಕೆರೆಯನ್ನು ಆಯ್ಕೆಮಾಡಿಕೊಂಡು ಮಳೆ ನೀರು ಕೆರೆಗೆ ಹರಿದು ಬರುವ ಮೂಲಗಳು, ಕೆರೆ ಪುನಶ್ಚೇತನಗೊಳಿಸಿ ಗ್ರಾಮದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಮಾಡುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುವುದು ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಸ್ಥೆ ಹಮ್ಮಿಕೊಳ್ಳುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here