ಆವರಗೆರೆಯಲ್ಲಿ ಪಿಹೆಚ್‍ಸಿ ಆರಂಭಿಸಲು ಒತ್ತಾಯ

0
12

ದಾವಣಗೆರೆ:

      ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆವರೆಗೆರೆಯ ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿ ಆವರಗೆರೆಯ ನಾಗರೀಕರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

      ನಗರದ ಹೊರವಲಯದಲ್ಲಿರುವ ಡಿಹೆಚ್‍ಓ ಕಚೇರಿ ಎದುರು ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನಾಗರೀಕರು, ಆವರಗೆರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲೇಬೇಕೆಂದು ಆಗ್ರಹಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ ಅವರಿಗೆ ಮನವಿ ಸಲ್ಲಿಸಿದರು.

      ಆವರಗೆರೆ ಸುಮಾರು 12 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿಯ ಹಾಗೂ ಸುತ್ತಮುತ್ತಲಿನ ಬಡಾವಣೆಗಳಾದ ಶೇಖರಪ್ಪ ಬಡಾವಣೆ, ಗೋಶಾಲೆ, ಬಸವನಗೌಡ ಬಡಾವಣೆ, ಮೋತಿನಗರ, ಹರಳಯ್ಯ ನಗರ ಮತ್ತು ನೆರೆಹೊರೆಯ ಹಳ್ಳಿಗಳ ವಯೋವೃದ್ಧರು, ಬಾಣಂತಿಯರು, ಗರ್ಭಿಣಿಯರು, ಅಂಗವಿಕಲರು ಹಾಗೂ ಸಾರ್ವಜನಿಕರು ಸಣ್ಣಪುಟ್ಟ ಕಾಯಿಲೆಗಳಿಗೂ ದಾವಣಗೆರೆಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಬರಬೇಕಾದ ಅನಿವಾರ್ಯತೆ ಇದೆ ಎಂದು ಆರೋಪಿಸಿದರು.

      ಆವರಗೆರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದರೆ, ಆವರಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಆದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆವರೆಗೆರೆಯ ಉಪ ಆರೋಗ್ಯ ಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿ, ಈ ಕೇಂದ್ರದ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಪಿಹೆಚ್‍ಸಿ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಇನ್ನೂ 15 ದಿನಗಳಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಹೋರಾಟವನ್ನು ತ್ರೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ದಲಿತ ಮುಖಂಡ ಎಸ್.ಚಂದ್ರಪ್ಪ, ಎಐವೈಎಫ್ ಆವರೆಗೆರೆ ವಾಸು, ರೈತ ಮುಖಂಡ ರೇವಣಸಿದ್ದಪ್ಪ ಚಿಕ್ಕನಹಳ್ಳಿ, ತಿಪ್ಪೇಶಿ, ರಮೇಶ್.ಸಿ, ಗೌಡ್ರ ಚಂದ್ರಪ್ಪ, ರಾಜು ಕೆರೆನಹಳ್ಳಿ, ಓಂಕಾರಪ್ಪ, ಐಗೂರು ಜಯಪ್ಪ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here