ಆ.9 ರಿಂದ ಬಿಜೆಪಿ ನಾಯಕರ ರಾಜ್ಯ ಪ್ರವಾಸ

0
41

ಬೆಂಗಳೂರು:

Image result for yeddyurappa

      ಆಗಸ್ಟ್ 9 ರಿಂದ ಮೂರು ತಂಡಗಳಲ್ಲಿ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಮಾಡಲಿದ್ದು, ಸರ್ಕಾರದ ಒಡೆದಾಳುವ ನೀತಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

      ನಗರದ ಹೊರವಲಯದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ರಾಜಕೀಯ ಪರಿಸ್ಥಿತಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಒಡೆದಾಳುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀತಿ ಬಗ್ಗೆಯೂ ಚರ್ಚೆ ನಡೆಸಿದ್ದು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ. ಆಗಸ್ಟ್ 9 ಕ್ರಾಂತಿ ದಿನದಂದು ಪ್ರವಾಸ ಆರಂಭಿಸುತ್ತೇವೆ ಎಂದರು.

     ಒಂದು ತಂಡ ತಮ್ಮ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಇದರಲ್ಲಿ ಪಕ್ಷದ ಮುಖಂಡರಾದ ಗೋವಿಂದ ಕಾರಜೋಳ, ಶೊಭಾ ಕರಂದ್ಲಜಾಜೆ ಇರಲಿದ್ದಾರೆ. ಎರಡನೇ ತಂಡದಲ್ಲಿ ಆರ್.ಅಶೋಕ್, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್ ಈಶ್ವರಪ್ಪ, ಸಿ.ಟಿ ರವಿ, ಲಕ್ಷ್ಮಣ ಸವದಿ ಅವರ ಮೂರನೇ ತಂಡ ಪ್ರವಾಸ ಕೈಗೊಳ್ಳುತ್ತಿದೆ ಎಂದು ಹೇಳಿದರು. ಉತ್ತರ ಕರ್ನಾಟಕ ಹೊತ್ತಿ ಉರಿಯುವ ಸನಿಹದಲ್ಲಿದೆ. ಮೊದಲ ಬಾರಿಗೆ ಆ ಭಾಗದ 16 ಜಿಲ್ಲೆಗಳಲ್ಲಿ ಬಂದ್ ಕರೆ ನೀಡಲಾಗಿದ್ದು, ಇದಕ್ಕೆ ಕಾರಣ ಹಾಗು ಸಂಪೂರ್ಣ ಜವಾಬ್ದಾರಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೊರಬೇಕು. ಅಧಿಕಾರ ದಾಹದಿಂದ ಮೈತ್ರಿ ಸರ್ಕಾರ ಒಡೆದಾಳುವ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದರು.

      ಅಖಂಡ ಕರ್ನಾಟಕದ ದೃಷ್ಠಿಯಿಂದ ಎಲ್ಲ ಭಾಗದ ಸಾಹಿತಿಗಳು, ಕವಿಗಳು, ದುರೀಣರು, ಕನ್ನಡದ ಕಟ್ಟಾಳುಗಳು, ದಶಕಗಳ ಕಾಲ ಹೋರಾಟ ಮಾಡಿ ಗಳಿಸಿರುವ ಗೌರವ, ಆಲೂರಿ ವೆಂಕಟರಾಯರು, ದ.ರಾ ಬೇಂದ್ರೆ, ಗೋಕಾಕ್, ಫಗು ಹಳಕಟ್ಟಿ, ಬಿ ಎಂ ಶ್ರೀ, ಮಾಸ್ತಿ, ಕುವೆಂಪು, ಅನಕೃ, ರಾಜ್ ಕುಮಾರ್, ಮ.ರಾಮಮೂರ್ತಿ, ಪಂಜೆ ಮಂಗೇಶರಾಯ, ಮುಂತದ ದಿಗ್ಗಜರು ಹೋರಾಟ ಮಾಡಿ ಹಲವರು ಹುತಾತ್ಮರಾಗಿ ಏಕೀಕರಣ ಮಾಡಿದ್ದಾರೆ. ಆದರೆ ಇದಕ್ಕೆ ಕುಮಾರ ಸ್ವಾಮಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

      ಕುಮಾರಸ್ವಾಮಿ ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿ, ಆದರೆ ಅವರು ಕೇವಲ 37 ಕ್ಷೇತ್ರದ ಸಿಎಂ ಎಂದು ಭಾವಿಸಿರುವುದು ರಾಜ್ಯದ ದುರ್ದೈವ, ರಾಜ್ಯ ಒಡೆಯುವ ಘೋರ ಪಾಪ ಮಾಡಬೇಡಿ, ಮುಂದೆ ಬರಲಿರುವ ಪೀಳಿಗೆ ಶತ ಶತಮಾನಗಳ ಕನ್ನಡಿಗರು ನಿಮ್ಮನ್ನ ಕ್ಷಮಿಸುವುದಿಲ್ಲ ಎಂದರು.

      ಉತ್ತರ ಕರ್ನಾಟಕ ಜನತೆಯ ಆಕ್ರೋಶ ಬುಗಿಲೇಳಲು ಕಾರಣ ನಿಮ್ಮ ಒಡೆದಾಳುವ ನೀತಿ. ನಿಮ್ಮ ಕುಟುಂಬದ ಕೆಟ್ಟ ಸ್ವಾರ್ಥ ರಾಜಕಾರಣ, ಅಧಿಕಾರದ ದಾಹಕ್ಕಾಗಿ ಜನತಾ ಪರಿವಾರ ಒಡೆದಿರಿ, ಕೈ ಹಿಡಿದವರಿಗೆ ಮೋಸ ಮಾಡಿದಿರಿ ಈಗ ರಾಜ್ಯವನ್ನು ಒಡೆಯುತ್ತಿದ್ದೀರಿ, ರಾಜ್ಯದ ಜನ ಎಂದಿಗೂ ನಿಮ್ಮನ್ನು ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.

      ರಾಜ್ಯದ ಅಖಂಡತೆಗೆ ನಿಮ್ಮ ಕೆಟ್ಟ ರಾಜಕಾರಣಕ್ಕಾಗಿ ಕಿಚ್ಚುಹಚ್ಚುವ ಕೆಲಸ ಮಾಡಬೇಡಿ. ನಮ್ಮ ಅವಧಿಯಲ್ಲಿ ಇಡೀ ಕರ್ನಾಟಕ ಒಂದು ಅಂತ ಆಡಳಿತ, ಕೆಲಸ ಮಾಡಿದೆವು. ಇವತ್ತು ಉತ್ತರ ಕರ್ನಾಟಕ ಹೊತ್ತಿ ಉರಿಯಲು ಕಾರಣ ಯಾರು, ಮತ ನೀಡದೆ ಅಭಿವೃದ್ಧಿ ಆಗಬೇಕು ಅಂದರೆ ಎಲ್ಲಿಂದ ತರಬೇಕು ಎಂದರೆ ಹೇಗೆ, ಪ್ರತಿನಿತ್ಯ ಅದೇ ರೀತೀ ಮಾತನಾಡಿ ಸಿಎಂ ಈ ಸ್ಥಿತಿ ತಂದಿದ್ದಾರೆ, ಅವರಿಗೆ ಕಾಳಜಿ ಇದ್ದರೆ ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸಚಿವ ಡಿ.ಕೆ ಶಿವಕುಮಾರ್ ತಮ್ಮ ಬಗ್ಗೆ ಮಾಡಿರುವ ಟೀಕೆಗೆ ಪ್ರತಿಕ್ರಯಿಸಿದ ಅವರು, ಅವರಿಂದ ನಾನು ಪಾಠ ಕಲಿಯಬೇಕಿಲ್ಲ, ಹಸಿರು ಶಾಲು ಹಾಕಿದವರೆಲ್ಲ ರೈತರಲ್ಲ ಎನ್ನುವ ಹೇಳಿಕೆ ಸರಿಯಲ್ಲ ಎಂದರು.

      ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕಗೆ ಪಕ್ಷದ ಮಾನದಂಡ ಅನುಸರಿಸಲಾಗುತ್ತದೆ. ಅಭ್ಯರ್ಥಿಗಳ ಕ್ಷೇತ್ರ ಬದಲಾವಣೆ ಚರ್ಚೆ ಆಗಿಲ್ಲ, ಅಧಿವೇಶನದ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಬಿಜೆಪಿ ಸ್ಪರ್ಧೆ ಮಾಡಲಿದ್ದು ಮೋದಿ ಸರ್ಕಾರದ ಸಾಧನೆಯ ಆಧಾರದಲ್ಲಿ 28 ಕ್ಷೇತ್ರಗಳ ಪೈಕಿ 22-23 ಸ್ಥಾನಗಳಲ್ಲಿ ಗೆಲುವು ಖಚಿತ ಎಂದರು.

      ಸಂಪೂರ್ಣ ಸಾಲಮನ್ನಾಗೆ ಹೋರಾಟ ಮಾಡಲ್ಲ, ಆದರೆ ಈಗ ಘೋಷಿಸಿದ ಸಾಲಮನ್ನಾ ತಕ್ಷಣ ಆಗಬೇಕು ಎನ್ನುವುದು ಸೇರಿದಂತೆ ನಿಮ್ಮ ಪ್ರಣಾಳಿಕೆ ಭರವಸೆ ಈಡೇರಿಸಿ ಎಂದು ನಾವು ಹೋರಾಟ ಮಾಡುತ್ತೇವೆ, ನಾವು ಹೊಸದಾಗಿ ಏನೂ ಕೇಳಲ್ಲ, ಒಂದೊಂದಾಗಿ ಕೈಗೆತ್ತಿಕೊಂಡು ಹೋರಾಡುತ್ತೇವೆ.ನಾವು ವಿರೋಧ ಪಕ್ಷವಾಗಿ ಕೆಲಸ ಮಾಡಲಿದ್ದು, ಅವರೇ ಕಚ್ಚಾಡಿ ಸರ್ಕಾರ ಬಿದ್ದರೆ ನಾವೇನು ಮಾಡಲು ಸಾಧ್ಯ ಎಂದರು.

      ಪುತ್ರ ಬಿ.ವೈ ವಿಜಯೇಂದ್ರ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಪಕ್ಷದ ಪರ ಪ್ರಚಾರ ಮಾತ್ರ ಮಾಡಲಿದ್ದಾರೆ. ಯಾವ ಕಾರಣಕ್ಕೂ ಅವರು ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

      ಶ್ರೀರಾಮುಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬೆಂಬಲ ನೀಡುವ ಹೇಳಿಕೆ ನೀಡಿಲ್ಲ, ಆ ಭಾಗದ ಅಭಿವೃದ್ಧಿ ಕಡೆಗಣಿಸಿ ಹೀಗೆಯೇ ಮುಂದುವರೆದರೆ ಪ್ರತ್ಯೇಕತೆಯ ಕೂಗು ಹೆಚ್ಚಾಗಲಿದೆ ಎಂದಿದ್ದಾರೆ ಅಷ್ಟೇ. ಯಾವುದೇ ಕಾರಣಕ್ಕೂ ರಾಜ್ಯ ವಿಭಜನೆಯನ್ನು ಬಿಜೆಪಿ ಬೆಂಬಲಿಸುವುದಿಲ್ಲ,ಅಖಂಡ ಕರ್ನಾಟಕದ ಪರವಾಗಿಯೇ ಬಿಜೆಪಿ ನಿಲುವು ಹೊಂದಿದೆ ಎಂದರು.

      ವಿಧಾನಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ವಿಧಿಸಿರುವುದನ್ನು ತೆರವು ಮಾಡದಿದ್ದಲ್ಲಿ ಮಾಧ್ಯಮಗಳ ಪರವಾಗಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತೇನೆ. ಮಾಧ್ಯಮಗಳ ನಿರ್ಬಂಧ ಅಕ್ಷಮ್ಯ ಅಪರಾದ. ಸರ್ವಾಧಿಕಾರಿ ವರ್ತನೆ ಸರಿಯಲ್ಲ, ದೇಶದ ಯಾವುದೇ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲ, ಇದು ನಿಮಗೆ ಶೋಭೆ ತರಲ್ಲ, ಇವರ ಹಗರಣಗಳು, ದಂಧೆಗಳು ಹೊರಬರುತ್ತವೆ ಎನ್ನುವ ಕಾರಣಕ್ಕೆ ವಿಧಾನಸೌಧದಿಂದ ಮಾಧ್ಯಮದವರನ್ನು ಹೊರಗಿಡುತ್ತಿದ್ದಾರೆ, ಜನಕ್ಕೆ ಇದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾರೆ.

-ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕರು, ವಿಧಾನಸಭೆ.

LEAVE A REPLY

Please enter your comment!
Please enter your name here