ಇಂದು ಗದ್ದೆಗಿಳಿದು ಭತ್ತದ ನಾಟಿ ಮಾಡಲಿರುವ ಸಿಎಂ

0
33

ಬೆಂಗಳೂರು:

      ನಾಳೆ ಎಚ್.ಡಿ.ಕುಮಾರಸ್ವಾಮಿಯವರು ರೈತನಾಗಲಿದ್ದಾರೆ. ಹೌದು, ಸುಮಾರು ಎರಡು ಗಂಟೆಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಬದಿಗಿಟ್ಟು ಗದ್ದೆಗಿಳಿದು ಭತ್ತ ನಾಟಿ ಮಾಡಲಿದ್ದಾರೆ.

      ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತೆ ಮರುಕಳಿಸದಂತೆ ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಕುಮಾರಸ್ವಾಮಿಯವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

      ಇನ್ನು ಮಂಡ್ಯ ಜಿಲ್ಲೆಯಲ್ಲಿ ಮಳೆ ಸರಿಯಾಗಿ ಬೀಳದೆ ನಾಲ್ಕು ವರ್ಷಗಳಿಂದಲೂ ಭತ್ತ ನಾಟಿ ಮಾಡಿರಲಿಲ್ಲ. ಈ ಸಲ ಉತ್ತಮ ಮಳೆಯಾಗಿದ್ದು, ರೈತರು ಸಂತಸದಲ್ಲಿದ್ದಾರೆ. ಹೀಗಾಗಿ ರೈತರಿಗೆ ಸ್ಫೂರ್ತಿ ಮೂಡಿಸಲು ಎಚ್‍ಡಿಕೆ ಭತ್ತ ನಾಟಿ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ

      ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ಹೊರವಲಯದಲ್ಲಿರುವ ಮಹದೇವಮ್ಮ ಎಂಬುವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 100 ಮಂದಿ ಮಹಿಳೆಯರು, 50 ಮಂದಿ ಪುರುಷರು ಹಾಗೂ ಸುಮಾರು 25 ಜೋಡಿ ಎತ್ತುಗಳೊಂದಿಗೆ ಕುಮಾರಸ್ವಾಮಿಯವರು ಭತ್ತ ನಾಟಿ ಮಾಡಲಿದ್ದಾರೆ.

      ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿರುವ ಕುಮಾರಸ್ವಾಮಿಯವರು, ನಾಳೆ ಬೆಳಗ್ಗೆ 11 ಗಂಟೆಗೆ ಸೀತಾಪುರ ಗ್ರಾಮಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೂ ರೈತರ ಜೊತೆ ನಾಟಿ ಕೆಲಸದಲ್ಲಿ ನಿರತರಾಗಲಿದ್ದು, ಅಲ್ಲೇ ಊಟ ಸಹ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.

      ಗದ್ದೆಯ ಮಧ್ಯ ಭಾಗದಲ್ಲೇ ಮೂರು ಮಂದಿ ನಿಲ್ಲುವಷ್ಟು ವೇದಿಕೆ ನಿರ್ಮಿಸಲಾಗಿದ್ದು, ಅಲ್ಲಿ ಕುಮಾರಸ್ವಾಮಿಯವರು ರೈತರಿಗೆ ಆತ್ಮವಿಶ್ವಾಸ ಮೂಡಿಸುವ ಕುರಿತು ಮಾತನಾಡಲಿದ್ದಾರೆ. ಜನ ಸೇರಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂಜೆ 4 ಗಂಟೆಗೆ ಕೆಆರ್ ಎಸ್ ಹೋಟೆಲ್ ನಲ್ಲಿ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here