ಇಡ್ಲಿ ತಯಾರಿಕೆಗೆ ಮಾರಕ ಪ್ಲಾಸ್ಟಿಕ್ ಬಳಕೆ ಪತ್ತೆ

0
54

 ತುಮಕೂರು:

      ಇಡ್ಲಿ ತಯಾರಿಸಲು ಅದರ ಪಾತ್ರೆಗೆ ಹಾನಿಕಾರಕವಾದ ತೆಳು ಪ್ಲಾಸ್ಟಿಕ್ ಹಾಳೆ ಬಳಸುತ್ತಿದ್ದುದನ್ನು ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಪತ್ತೆ ಮಾಡಿ ವಶಪಡಿಸಿಕೊಂಡು, ಸಂಬಂಧಿಸಿದವರಿಗೆ ದಂಡ ವಿಧಿಸಿದ್ದಾರೆ.

      ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್ಗಳಾದ ಮೃತ್ಯುಂಜಯ, ಮೋಹನ್ಕುಮಾರ್, ಪಿ.ಕೆ. ಕೃಷ್ಣಮೂರ್ತಿ, ಹೆಲ್ತ್ ಇನ್ಸ್ ಪೆಕ್ಟರ್ ಗಳಾದ ರುದ್ರೇಶ್, ಮನೋಹರ್, ಪ್ರಸನ್ನ ಕುಮಾರ್, ಕೃತ್ತಿಕ್ ಮತ್ತು ಸಿಬ್ಬಂದಿ ವರ್ಗದವರು ಈ ದಾಳಿ ನಡೆಸಿ, ಆರೋಗ್ಯಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ನ್ನು ಈ ರೀತಿ ತಿನ್ನುವ ಆಹಾರ ತಯಾರಿಕೆಯಲ್ಲಿ ಬಳಸುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ.
ತುಮಕೂರು ನಗರದ ರೈಲ್ವೆ ಸ್ಟೇಷನ್ ರಸ್ತೆ, ಜೆ.ಸಿ. ರಸ್ತೆ, ಆರ್.ಟಿ.ಒ. ಕಚೇರಿ ಬಳಿ, ಹೊರಪೇಟೆ ಮೊದಲಾದ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ರಸ್ತೆ ಬದಿ ಬೆಳಗಿನ ಉಪಹಾರ ಮಾರಾಟ ಮಾಡುತ್ತಿದ್ದವರನ್ನು ಪರಿಶೀಲನೆ ನಡೆಸಿದ್ದಾರೆ.

      ಆಗ ರೈಲ್ವೆ ಸ್ಟೇಷನ್ ರಸ್ತೆ, ಎಸ್.ಎಸ್.ವೃತ್ತ ಮತ್ತು ಆರ್.ಟಿ.ಓ. ಬಳಿ ಒಟ್ಟು ಮೂವರು ಬೀದಿ ಬದಿಯ ವ್ಯಾಪಾರಿಗಳು ಇಡ್ಲಿ ಪಾತ್ರೆಯೊಳಗೆ ಬಟ್ಟೆಯ ಬದಲು, ತೆಳ್ಳಗಿನ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಇಡ್ಲಿ ತಯಾರಿಸುತ್ತಿದ್ದುದು ಪತ್ತೆಯಾಗಿದೆ. ಈ ರೀತಿ ಪ್ಲಾಸ್ಟಿಕ್ ಬಳಸುವುದು ಆರೋಗ್ಯಕ್ಕೆ ಅತ್ಯಂತ ಹಾನಿಕರವಾದುದೆಂಬುದನ್ನು ತಿಳಿ ಹೇಳಿದ ಪಾಲಿಕೆ ಅಧಿಕಾರಿಗಳು, ಅಲ್ಲಿ ದೊರೆತ ಪ್ಲಾಸ್ಟಿಕ್ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು, ಸಂಬಂಧಿಸಿದ ಬೀದಿಬದಿ ವ್ಯಾಪಾರಿಗಳಿಗೆ ನಿಯಮದ ಪ್ರಕಾರ ದಂಡ ವಿಧಿಸಿದ್ದಾರೆ.

      ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತೀಚೆಗಷ್ಟೇ ನಗರದ ವಿವಿದೆಡೆ ಬೀದಿಬದಿ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿದ್ದರು. ಅದಾದ ಬಳಿಕ ನಗರದ ವಿವಿದೆಡೆ ಅನಿರೀಕ್ಷಿತ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಇಡ್ಲಿ ಮಾರಾಟಗಾರರು ಅಪಾಯಕಾರಿ ಪ್ಲಾಸ್ಟಿಕ್ ಹಾಳೆ ಬಳಸುತ್ತಿದ್ದುದನ್ನು ಪತ್ತೆ ಮಾಡಿ, ಕ್ರಮ ಜರುಗಿಸಿದ್ದಾರೆ.

 
ಜನಪ್ರತಿನಿಧಿಗಳ ಮೌನವೇಕೆ?

      ‘‘ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯದ  ಭಾಗವಾಗಿ ನಗರದ ಬೇಕರಿಯೊಂದಕ್ಕೆ ಅಧಿಕೃತ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದರೂ, ಸದರಿ ಬೇಕರಿಯವರು ಪಾಲಿಕೆ ಅಧಿಕಾರಿಗಳ ವಿರುದ್ದವೇ ಪೊಲೀಸರಿಗೆ ದೂರನ್ನು ಸಲ್ಲಿಸಿದ್ದರೂ, ನಗರದ ಯಾವೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ಚಕಾರವೆತ್ತದಿರುವುದು ಆಕ್ಷೇಪಾರ್ಹವಾಗಿದೆ. ಕಾನೂನಿನಂತೆ ಕೆಲಸ ಮಾಡುವ ಅಧಿಕಾರಿಗಳಿಗೆ ನೈತಿಕ ಬೆಂಬಲ ನೀಡದಿದ್ದರೆ, ಈ ಜನಪ್ರತಿನಿಧಿಗಳ ನಡೆ ಸಂಶಯಾಸ್ಪದವಾಗುತ್ತದೆ’’ ಎಂದು ನಗರದ ಹೋರಾಟಗಾರರು ಹೇಳಿದ್ದಾರೆ. ‘‘ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ಗಳು ಮತ್ತು ಬಿಲ್ ಕಲೆಕ್ಟರ್ಗಳಿಗೂ ಐದಾರು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲವೆಂದು ಮಾ‘್ಯಮಗಳಲ್ಲಿ ಪ್ರಕಟವಾಗಿದ್ದರೂ, ನಗರದ ಜನಪ್ರತಿನಿಧಿಗಳು ತುಟಿಹೊಲಿದುಕೊಂಡಿರುವುದು ಆಶ್ಚರ್ಯಕರವಾಗಿದೆ’’ ಎಂದೂ ಹೋರಾಟಗಾರರು ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here