ಇಲಾಖೆಗಳ ನಡುವೆ ನಿರ್ಲಕ್ಷ್ಯ : ಕಂದಾಯ ಇಲಾಖೆಯ ವಿಭಿನ್ನ ವರದಿ

0
20

ವಿವಾದದಲ್ಲಿ ಮಂಗಳ ಜಲಾಶಯದ ಐತಿಹಾಸಿಕ ಸ್ಥಳ

 ತುಮಕೂರು:

       ಜಿಲ್ಲೆಯ ಐತಿಹಾಸಿಕ ಸ್ಥಳಗಳಾಗಿ ಗುರುತಿಸಿಕೊಂಡಿರುವ ಮಾರ್ಕೋನಹಳ್ಳಿ, ಮಂಗಳ ಜಲಾಶಯದ ಸ್ಥಳ ವಿವಾದ ಇನ್ನೂ ಬಗೆಹರಿದಂತೆ ಕಂಡುಬರುತ್ತಿಲ್ಲ. 1958 ರಲ್ಲಿಯೇ ಕುಣಿಗಲ್ ತಾಲ್ಲೂಕು ತೂಬಿನಕೆರೆ ಗ್ರಾಮದ ಸ.ನಂ.ಗಳನ್ನು ಮಂಗಳ ಜಲಾಶಯ ನಿರ್ಮಾಣಕ್ಕಾಗಿ ಕಂದಾಯ ಇಲಾಖೆ ಭೂಸ್ವಾಧೀನಪಡಿಸಿಕೊಂಡಿದ್ದರೂ ಸಹ ಸ್ಥಳ ವಿವಾದದ ಬಗ್ಗೆ ತಕರಾರುಗಳು ಮುಂದುವರೆದೇ ಇವೆ. ಇದಕ್ಕೆ ಸಂಬಂಧಪಟ್ಟಂತೆ ವಿವಾದ ತೀವ್ರಗೊಳ್ಳಲು ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಕುಣಿಗಲ್‍ನ ಕಂದಾಯ ಇಲಾಖೆ ನೀಡಿರುವ ವಿಭಿನ್ನ ವರದಿಗಳು ಅಚ್ಛರಿ ಉಂಟು ಮಾಡುತ್ತಿವೆ.

      ಅಮೃತೂರು ಹೋಬಳಿ ತೂಬಿನಕೆರೆ ಗ್ರಾಮದ ಕೆಲವು ಸ.ನಂ.ಗಳನ್ನು 17.11.1958 ರಲ್ಲಿ ಕಂದಾಯ ಇಲಾಖೆಯು ಮಂಗಳ ಜಲಾಶಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿತ್ತು. ಮೂಲ ಖಾತೆದಾರರಾದ ಎಂ.ಎಸ್.ನಾರಾಯಣ ಅಯ್ಯಂಗಾರ್ ಅವರಿಂದ ಸ್ವಾಧೀನಪಡಿಸಿಕೊಂಡ ಜಮೀನುಗಳಲ್ಲಿ ಸ.ನಂ. 41/1 ಹಾಗೂ 69/1 ಸಹ ಸೇರ್ಪಡೆಯಾಗಿತ್ತು.

      ಸದರಿ ಜಮೀನುಗಳನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿ 1970ನೇ ಇಸವಿಯಿಂದ ತೋಟಗಾರಿಕೆ ಇಲಾಖೆಯು ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಕಂದಾಯ ಇಲಾಖೆಯು ಭೂಸ್ವಾಧೀನಪಡಿಸಿಕೊಂಡ ಜಮೀನು ಜಲಾಶಯಗಳ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಯಿತು. ಜಲಾಶಯ ನಿರ್ಮಾಣದ ನಂತರ ಅದರ ಸುತ್ತಲೂ ಇರುವ ನೀರು ಮುಳುಗಡೆ ಜಮೀನು ಎಂದು ನಿರ್ಧರಿಸಿದ್ದ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯು ವಿವಿಧ ಜಾತಿಯ ಮರವಳಿಯನ್ನು ಅಲ್ಲಿ ನಿರ್ಮಾಣ ಮಾಡಿತು. ಈ ಮರವಳಿಯ ಮೂಲ ಉದ್ದೇಶ ಜಲಾಶಯದಲ್ಲಿನ ನೀರು ಶೇಖರಣೆಯು ಉತ್ತಮವಾಗಿರಲಿ ಎಂಬುದು.

      1970 ರಿಂದ ತೋಟಗಾರಿಕೆ ಇಲಾಖೆಯ ಸ್ವಾಧೀನದಲ್ಲಿದ್ದ ಜಮೀನನ್ನು 21.3.1990 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳ ಜೊತೆ ಕಾರ್ಯಪಾಲಕ ಅಭಿಯಂತರರು ಚರ್ಚಿಸಿ ತೋಟಗಾರಿಕೆ ಇಲಾಖೆಯ ಸ್ವಾಧೀನದಲ್ಲಿದ್ದ ಜಮೀನನ್ನು ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಕ್ಷೇತ್ರದ ಸಹಾಯಕ ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿತ್ತು. ಹಸ್ತಾಂತರಿಸುವಾಗ ಒಂದು ಷರತ್ತು ವಿಧಿಸಿತು. ಅದೇನೆಂದರೆ, ತೋಟಗಾರಿಕೆ ಇಲಾಖೆಯು ಯಾವುದೇ ಪರಭಾರೆ ಮಾಡಬಾರದು, ಇಲಾಖೆಯ ಕಾರ್ಯಚಟುವಟಿಕೆಗಳನ್ನು ಮಾತ್ರವೇ ನಡೆಸಬೇಕು ಎಂಬ ನಿಬಂಧನೆಯನ್ನು ಹಸ್ತಾಂತರದ ಸಂದರ್ಭದಲ್ಲಿ ವಿಧಿಸಲಾಗಿತ್ತು.
ಈ ನಡುವೆ 1996 ರಲ್ಲಿ ನರಸಮ್ಮ ಎಂಬುವವರು ಕುಣಿಗಲ್ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಒಂದು ದಾವೆ ಹೂಡಿ ಸದರಿ ಜಮೀನು ತನಗೆ ಸೇರಿದ್ದಾಗಿ ಹಕ್ಕು ದಾವೆ ಮಂಡಿಸುತ್ತಾರೆ. 12.7.2007 ರಲ್ಲಿ ನ್ಯಾಯಾಲಯವು ಈ ಹಕ್ಕು ದಾವೆಯನ್ನು ಇತ್ಯರ್ಥಪಡಿಸಿ ಹೊಸ ದಾವೆ ಹೂಡುವಂತೆ ನಿರ್ದೇಶನ ನೀಡುತ್ತದೆ. ಅಲ್ಲದೆ, ನ್ಯಾಯಾಲಯದ ವೆಚ್ಚವಾಗಿ 3 ಸಾವಿರ ರೂ.ಗಳ ದಂಡವನ್ನೂ ವಿಧಿಸಿರುತ್ತದೆ. ಇದರ ವಿರುದ್ಧ ನರಸಮ್ಮ ಅವರು ಮೇಲ್ಮನವಿ ಸಲ್ಲಿಸಿರುವ ದಾಖಲೆಗಳು ಎಲ್ಲೂ ಕಂಡುಬರುತ್ತಿಲ್ಲ.
ಈ ನಡುವೆ ಮತ್ತೊಂದು ವಿವಾದ ಹುಟ್ಟಿಕೊಳ್ಳುತ್ತದೆ. ತೂಬಿನಕೆರೆ ಗ್ರಾಮದ ಮ್ಯುಟೇಷನ್ ನಂ.2/91 ಕ್ಕೆ ಸಂಬಂಧಿಸಿದಂತೆ ಇಬ್ಬರ ಮ್ಯುಟೇಷನ್‍ಗಳಿದ್ದು, ಈ ಎರಡೂ ಮ್ಯುಟೇಷನ್‍ಗಳು ಒಂದೇ ಆಗಿರುತ್ತವೆ. ಇದರ ಆಧಾರದ ಮೇಲೆ ನರಸಮ್ಮ ಅವರು ಖಾತೆ ಬದಲಾವಣೆ ಮಾಡಿಕೊಂಡಿದ್ದರು. ಇದರ ವಿರುದ್ಧ ತುಮಕೂರು ಉಪ ವಿಭಾಗಾಧಿಕಾರಿಗಳಲ್ಲಿ ದಾವೆ ಹೂಡಿದಾಗ ಕುಣಿಗಲ್ ತಹಸೀಲ್ದಾರರು 2012 ರಲ್ಲಿ ಒಂದು ವರದಿ ನೀಡಿ ಈ ಎರಡೂ ಮ್ಯುಟೇಷನ್‍ಗಳು ಮತ್ತು ಎಂ.ಆರ್. ಬೋಗಸ್ ಆಗಿದ್ದು, ಸದರಿ ಸ.ನಂ.ಗಳಲ್ಲಿ ಸಾಗುವಳಿ ಮಾಡಿರುವುದು ಕಂಡುಬರುವುದಿಲ್ಲ ಎಂಬ ವರದಿಯನ್ನು ನೀಡಿದ್ದರು.

      2012ರ ವರದಿಯಲ್ಲಿ ಅಂದಿನ ತಹಸೀಲ್ದಾರ್ ಅವರು ಬೋಗಸ್ ದಾಖಲೆಯ ಬಗ್ಗೆ ಉಲ್ಲೇಖಿಸಿ ಸ.ನಂ.ಗಳಲ್ಲಿ ಯಾರೂ ಸಾಗುವಳಿ ಮಾಡುತ್ತಿಲ್ಲದರ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಅಲ್ಲದೆ, ಸ.ನಂ.41/1 ಹಾಗೂ 69/1 ರ ಭೂಮಿ ಯಾರಿಗು ಮಂಜೂರಾಗಿರುವ ದಾಖಲೆಗಳು ಇಲ್ಲ ಎಂದು ವರದಿ ನೀಡುತ್ತಾರೆ. ಆದರೆ ಇದೇ ತಹಸೀಲ್ದಾರ್ ಕಛೇರಿಯಿಂದ 2018 ರಲ್ಲಿ ವ್ಯತಿರಿಕ್ತ ವರದಿಯನ್ನು ನೀಡಲಾಗಿದೆ. ಜಮೀನಿನ ಖಾತೆ ಅರ್ಜಿದಾರರ ಹೆಸರಿಗೆ ಇರುತ್ತದೆ, ಜಮೀನಿನ ಸ್ಥಳ ತನಿಖೆ ನಡೆಸಲಾಗಿದೆ. ಎಂಬ ಅಂಶಗಳು ಈ ವರದಿಯಲ್ಲಿ ಇವೆ. ಆದರೆ ಸ್ಥಳ ತನಿಖೆ ನಡೆಸುವಾಗ ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಯಾವ ಸೂಚನೆಯನ್ನೂ ಅಥವಾ ಮಾಹಿತಿ ನೀಡಿರುವುದು ಕಂಡುಬಂದಿರುವುದಿಲ್ಲ.

      ಒಂದು ಸ್ಥಳದ ವಿವಾದದ ಬಗ್ಗೆ ಕುಣಿಗಲ್ ತಹಸೀಲ್ದಾರ್ ಅವರು ಹೀಗೆ ಎರಡು ವಿಭಿನ್ನ ವರದಿಗಳನ್ನು ನೀಡಿರುವುದರಿಂದ ವಿವಾದ ಮತ್ತಷ್ಟು ಕಗ್ಗಂಟಾಗಿದೆ. 1958 ರಲ್ಲೇ ಕಂದಾಯ ಇಲಾಖೆಯು ಭೂಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ದಾಖಲೆಗಳು ಇದ್ದರೂ ಈವರೆವಿಗೂ ರೆವಿನ್ಯೂ ಇಲಾಖಾಧಿಕಾರಿಗಳು ಹಾಗೂ ಸಂಬಂಧಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾನೂನು ರೀತ್ಯಾ ಕ್ರಮ ವಹಿಸದೇ ಇರುವುದು ಎದ್ದುಕಾಣುತ್ತಿದೆ. ಇದೇನು ಸಾಮಾನ್ಯ ವಿಷಯವಲ್ಲ. ಒಂದು ಎಕರೆಯಾಗಲಿ ಅಥವಾ ಗುಂಟೆಗಾಗಲಿ ಸಂಬಂಧಿಸಿದ ವಿಷಯವಲ್ಲ. ಸರ್ಕಾರವೇ ಸ್ವಾದೀನಪಡಿಸಿಕೊಂಡಿರುವ ಭೂಮಿ ಇಂದು ವಿವಾದಕ್ಕೆ ಒಳಗಾಗಿದೆ ಎಂದರೆ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನ ಎಷ್ಟಿದೆ ಎಂಬುದು ಕಂಡುಬರುತ್ತದೆ.

      ನನಗೆ ಹಕ್ಕಿದೆ ಎಂದು ಸಂಬಂಧಿಸಿದವರು ಅಥವಾ ಯಾರೇ ಆದರೂ ನ್ಯಾಯಾಲಯದ ಮೊರೆ ಹೋಗಬಹುದು. ಎಲ್ಲರಿಗೂ ತಮ್ಮ ಹಕ್ಕು ಪ್ರಶ್ನಿಸುವ ಅಧಿಕಾರ ಇದ್ದೇ ಇರುತ್ತದೆ. ಆದರೆ ಮೂಲ ಹಕ್ಕು ಯಾರದ್ದು, ವಿವಾದಿತ ಜಮೀನು ಯಾರಿಗೆ ಸೇರಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಇದು ಅಂತಿಮವಾಗಿ ಉಳಿಯುವ ಪ್ರಶ್ನೆ. ಆದರೆ ಒಂದು ಉತ್ತಮ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಅಷ್ಟೊಂದು ಎಕರೆ ಜಮೀನುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮಾಡಿರುವ ಎಡವಟ್ಟುಗಳು ಮಾತ್ರ ಈಗ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಒಳಗಾಗಿವೆ. ಇದನ್ನು ಸರಿಪಡಿಸಬೇಕಾದವರು ಯಾರು ಎಂಬ ಮೂಲ ಪ್ರಶ್ನೆ ಈಗ ಎದುರಾಗಿದೆ.

 
ಉನ್ನತ ಅಧಿಕಾರಿಗಳು ಗಮನ ಹರಿಸಲಿ:

ತೂಬಿನಕೆರೆ ಗ್ರಾಮದ ಸ.ನಂ.ಗಳನ್ನು ಜಲಾಶಯ ನಿರ್ಮಾಣಕ್ಕಾಗಿ 1958 ರಲ್ಲಿ ಕಂದಾಯ ಇಲಾಖೆ ಭೂಸ್ವಾಧೀನಪಡಿಸಿಕೊಂಡಿದೆ. ಆನಂತರ 1996 ರಲ್ಲಿ 392 ಜನರಿಗೆ ಪರಿಹಾರವನ್ನೂ ನೀಡಲಾಗಿದೆ. ಭೂಸ್ವಾಧೀನದ ನಂತರ ಲೋಕೋಪಯೋಗಿ ಇಲಾಖೆಯು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿದೆ. ಸಮಗ್ರ ರೀತಿಯಲ್ಲಿ ದಾಖಲಾತಿಗಳ ನಿರ್ವಹಣೆ ಮತ್ತು ಕಾನೂನು ಬದ್ಧವಾಗಿ ಜಮೀನಿನ ದಾಖಲಾತಿಗಳ ನಿರ್ವಹಣೆ ಪ್ರಕ್ರಿಯೆಯಲ್ಲಿ ಇಲಾಖೆಗಳು ಎಡವಿದ್ದೆಲ್ಲಿ ಎಂಬ ಪ್ರಶ್ನೆಗಳು ಎದುರಾಗುತ್ತಿವೆ. ಎಲ್ಲವೂ ಕಾನೂನು ಬದ್ಧವಾಗಿಯೇ ಇದ್ದರೂ ವಿವಾದಗಳು ಏಕೆ ಹುಟ್ಟಿಕೊಂಡವು? ಇಷ್ಟು ಸುಧೀರ್ಘ ವರ್ಷಗಳ ನಂತರವೂ ಜಮೀನು ವಿವಾದ ಇನ್ನೂ ಜೀವಂತವಾಗಿದೆಯೆಂದರೆ ನಮ್ಮ ಅಧಿಕಾರಿಗಳ ಹೊಣೆಗಾರಿಕೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ.

(ಲೇಖನ-ಸಾ.ಚಿ.ರಾಜಕುಮಾರ್)

LEAVE A REPLY

Please enter your comment!
Please enter your name here