ಉತ್ತಮ ಮಾರ್ಗದರ್ಶನಗಳಡಿ ಪಡೆದ ಶಿಕ್ಷಣ ಪರಿಪಕ್ವವಾಗಿರುತ್ತದೆ

0
12

ಹೊನ್ನಾಳಿ:

      ಗುರುಗಳ ಸಾತ್ವಿಕ ಶಿಕ್ಷೆ, ಉತ್ತಮ ಮಾರ್ಗದರ್ಶನಗಳಡಿ ಪಡೆದ ಶಿಕ್ಷಣ ಪರಿಪಕ್ವವಾಗಿರುತ್ತದೆ. ಹಿಂದಿನ ಗುರುಕುಲ ಶಿಕ್ಷಣ ವ್ಯವಸ್ಥೆ ಒಂದು ಉತ್ತಮ ಶಿಕ್ಷಣ ಪದ್ಧತಿಯಾಗಿತ್ತು. ಅಂದಿನ ಗುರು-ಶಿಷ್ಯರ ಬಾಂಧವ್ಯ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಾಣಲಾಗುತ್ತಿಲ್ಲ ಎಂದು ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

      ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ಜನವರಿ 10ರಿಂದ 12ರವರೆಗೆ ಪವಿತ್ರ ಕ್ಷೇತ್ರ ತೀರ್ಥರಾಮೇಶ್ವದಲ್ಲಿ ಹಮ್ಮಿಕೊಂಡಿರುವ ಇಷ್ಟಲಿಂಗ ಮೌನ ಶಿವಯೋಗಾನುಷ್ಠಾನ ಹಾಗೂ ಹೊನ್ನಾಳಿ ಹಿರೇಕಲ್ಮಠದ ಎಸ್‍ಜೆವಿಪಿ ಶಿಕ್ಷಣ ಮಹಾವಿದ್ಯಾಲಯದ ಪೌರತ್ವ ತರಬೇತಿ ಶಿಬಿರ ಕಾರ್ಯಕ್ರಮಕ್ಕೆ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಗುರುವಾರ ರಾತ್ರಿ ಚಾಲನೆ ನೀಡಿ ಅವರು ಮಾತನಾಡಿದರು.

      ಇಡೀ ದೇಶಕ್ಕೆ ಸೈನಿಕ ಮತ್ತು ರೈತ ಬಹು ಮುಖ್ಯವಾಗುತ್ತಾರೆ. ಇವರ ಸೇವೆ ಅನನ್ಯವಾಗಿದ್ದು, ದೇಶದ ಪ್ರಜೆಗಳು ಇವರ ಸೇವೆಗಳನ್ನು ಗೌರವಿಸುವ, ಸ್ಮರಿಸುವ ಕೆಲಸ ಮಾಡಬೇಕು. ಪ್ರಸ್ತುತ ದಿಗಳಲ್ಲಿ ರೈತರ ಜೀವನಾಡಿಗಳಾದ ಕೆರೆಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿವೆ. ರೈತರ ಜೀವನ ದುಸ್ತರವಾಗುವುದಕ್ಕೆ ಕೆರೆಗಳು ಕಣ್ಮರೆಯಾಗುತ್ತಿರುವುದು ಕೂಡ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು. ರೈತರ ಬದುಕು ಹಸನಾಗಬೇಕಾದರೆ ಕೆರೆಗಳ ಸಂರಕ್ಷಣೆ ಜೊತೆಗೆ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

      ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯರ ಮಧ್ಯೆ ನಂಬಿಕೆ, ಮನುಷ್ಯತ್ವಗಳೇ ಕ್ಷೀಣಿಸುತ್ತಿವೆ ಎನ್ನುವುದಕ್ಕೆ ಚಾಮರಾಜನಗರ ಜಿಲ್ಲೆಯ ದೇವರ ಪ್ರಸಾದಕ್ಕೆ ವಿಷ ಬೆರೆಸಿ ಸಾಕಷ್ಟು ಸಾವು-ನೋವಿಗೆ ಕಾರಣವಾದ ಘಟನೆ ಸಾಕ್ಷಿಯಾಗಿದೆ. ಇದೇ ರೀತಿ ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಘಟನೆಗಳು ಮನುಷ್ಯತ್ವವನ್ನು ಅಣಕಿಸುವಂತಿವೆ ಎಂದು ಹೇಳಿದರು. ಮನುಷ್ಯ ಮನುಷ್ಯತ್ವವನ್ನು ಕಾಪಾಡಿಕೊಂಡು ಹೋಗಲು ದೇವರು, ಗುರುಗಳು, ಧಾರ್ಮಿಕ ಸಭೆಗಳು ಪೂರಕವಾಗುತ್ತವೆ ಎಂದು ವಿವರಿಸಿದರು.

      ಶಿಕ್ಷಣ ಮತ್ತು ಧರ್ಮ ಕುರಿತು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಸ್. ಉಮಾಶಂಕರ್ ಉಪನ್ಯಾಸ ನೀಡಿ, ಶಿಕ್ಷಣ ಮತ್ತು ಧರ್ಮ ನಾಣ್ಯದ ಮುಖಗಳಿದ್ದಂತೆ. ಧರ್ಮ ಎಂದರೆ ಉದ್ಧರಿಸು ಎನ್ನುವ ಅರ್ಥ ಇದೆ. ನಮ್ಮ ಧಾರ್ಮಿಕ ಗುರುಗಳು, ಮಠ-ಮಾನ್ಯಗಳು ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ, ಜನರನ್ನು ಉದ್ಧರಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here