ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ವಾಪಾಸ್ಸಾತಿಗೆ ಆಗ್ರಹ :ಕೆಜಿಸಿಟಿಎ ಯಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

0
97

ಕೊರಟಗೆರೆ

   ಕೇಂದ್ರ  ಸರ್ಕಾರ ಮಂಡಿಸಲು ಹೊರಟಿರುವ ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ರ ಮಸೂದೆ ಶಿಕ್ಷಣವನ್ನು ಉನ್ನತೀಕರಣಗೊಳಿಸುವ ಸದ್ದುದ್ದೇಶವನ್ನು ಹೊಂದಿರದೆ ಶಿಕ್ಷಣದ ಔದ್ಯಮೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ರೂಪಿಸಿರುವಂತಿದೆ ಎಂದು ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ತುಮಕೂರು ವಿವಿ ವಲಯಾಧ್ಯಕ್ಷ ಡಾ. ಓ.ನಾಗರಾಜು ಆರೋಪಿಸಿದರು. ಅವರು ಭಾನುವಾರ ಪಟ್ಟಣದಲ್ಲಿ ಕೇಂದ್ರ ಸರ್ಕಾರವು ತರಲು ಹೊರಟಿರುವ ಉನ್ನತ ಶಿಕ್ಷಣ ಕಾಯ್ದೆ 2018 ರ ವಾಪಸ್ಸಾತಿಗಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

  ಈ ಕಾಯ್ದೆ ಜಾರಿಯಿಂದ ಈಗಿರುವ ಯುಜಿಸಿಯನ್ನು ದುರ್ಬಲಗೊಳಿಸುವ ಹುನ್ನಾರವೂ ಅಡಗಿದೆ. ಈ ಮಸೂದೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅನನುಕೂಲವಾಗುವ ಸಾಧ್ಯತೆಯೇ ಹೆಚ್ಚಿರುವುದರಿಂದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರುಗಳ ಹಿತದೃಷ್ಟಿಯಿಂದ ಈ ಮಸೂದೆಯನ್ನು ಹಿಂಪಡೆಯಬೇಕು. ನೈತಿಕ ನೆಲೆಗಟ್ಟಿನ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿರುವ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ರಾಜ್ಯ ಸರ್ಕಾರಗಳು ಏಳನೇ ವೇತನ ಆಯೋಗವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಅವೈಜ್ಞಾನಿಕವಾಗಿ ರೂಪಿಸಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸರಿಪಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೊರಟಗೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಾಲಪ್ಪ, ಪ್ರೊ. ಎಂ.ರಾಮಚಂದ್ರಪ್ಪ, ಡಾ.ಡಿ.ಶಿವನಂಜಯ್ಯ, ಅನ್ವರ್‍ಬಾಷಾ, ರಂಜಿತ್, ಶಾಂತಕುಮಾರಿ, ಶಿವರಾಜು, ತಿರುಮಲೇಶ್‍ಬಾಬು ಸೇರಿದಂತೆ ಹಲವಾರು ಅಧ್ಯಾಪಕರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here