ಎನ್ಆರ್ ಸಿ ಗೆ ಭಾರತೀಯರನ್ನು ಸೇರಿಸಿ

0
35

ಬಳ್ಳಾರಿ:

      ಅಸ್ಸಾಂನಲ್ಲಿ ಕರಡು ಎನ್.ಆರ್.ಸಿ (ರಾಷ್ಟ್ರೀಯ ಪೌರತ್ವ ನೋಂದಣಿ)ಯಿಂದ 40 ಲಕ್ಷ ಭಾರತೀಯ ಪ್ರಜೆಗಳನ್ನು ದುರುದ್ದೇಶಪೂರಿತವಾಗಿ ಕೈಬಿಟ್ಟಿರುವ ಖಂಡಿಸಿ ಹಾಗೂ ಈ ನೈಜ ಭಾರತೀಯ ಪ್ರಜೆಗಳನ್ನು ಎನ್.ಆರ್.ಸಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ನಗರದ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

      ಈ ಸಂದರ್ಭದಲ್ಲಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾ.ರಾಧಾಕೃಷ್ಣ ಉಪಾಧ್ಯ ಅವರು ಮಾತನಾಡಿ, ಮಾಧ್ಯಮಗಳಲ್ಲಿ ಪ್ರಕಟವಾದಂತೆ ಇತ್ತೀಚಿಗೆ ಬಿಡುಗಡೆಯಾದ ಪರಿಷ್ಕೃತ ಕರಡು ಎನ್.ಆರ್.ಸಿಯಿಂದ ಸುಮಾರು 40 ಲಕ್ಷ ಭಾರತೀಯ ಪ್ರಜೆಗಳನ್ನು ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರನ್ನು ಕೈಬಿಟ್ಟಿರುವುದು, ಆಘಾತಕಾರಿಯಾಗಿದೆ.

      ವಿಪರ್ಯಾಸವೆಂದರೆ, 1985ರಿಂದ ಈ ಹಿಂದಿನ ಅಸ್ಸಾಂ ಗಣ ಪರಿಷತ್ ರಾಜ್ಯ ಸರ್ಕಾರ ನಡೆಸಿದ ಎಲ್ಲಾ ಸಮೀಕ್ಷೆಗಳು ಜನಾಂಗ-ಧರ್ಮ-ಭಾಷೆಯ ಪೂರ್ವಗ್ರಹಗಳಿಂದ ಸಾಕಷ್ಟು ಕೂಡಿದ್ದಾಗಿದ್ದರೂ, ಈ ಸಮೀಕ್ಷೆಯ ಪ್ರಕಾರ ಸಂಖ್ಯೆ 3.7ಲಕ್ಷ ಕೂಡ ದಾಟಿಯಿರಲಿಲ್ಲ. ಅಲ್ಲದೆ ಈ 3.7ಲಕ್ಷದಲ್ಲೂ ಬಹಳಷ್ಟು ಜನ ನೈಜ ಭಾರತೀಯ ಪ್ರಜೆಗಳಾಗಿದ್ದರೂ, ಅವರನ್ನು ಡಿ-ವೋಟರ್ಸ್ (ಡೌಟ್ಫುಲ್) ಎಂದು ನಾಮಕರಣ ಮಾಡಿ, ಎಲ್ಲ ಮೂಲಭೂತ ಹಕ್ಕುಗಳಿಂದ ಅವರನ್ನು ವಂಚಿತರನ್ನಾಗಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪರಿಷ್ಕøತ ಕರಡು ಎನ್.ಆರ್.ಸಿಯಿಂದ 40ಲಕ್ಷ ಭಾರತೀಯ ಪ್ರಜೆಗಳನ್ನು ಹೊರಗಿಟ್ಟಿರುವುದು ಖಂಡಿತವಾಗಿ ನಂಬಲರ್ಹವಾದದ್ದಲ್ಲ. ಹಿಂದೆಂದೂ ಯಾವ ರಾಜ್ಯದಲ್ಲೇ ಆಗಲಿ ಅಥವಾ ಯಾವ ದೇಶದಲ್ಲೇ ಆಗಲಿ, ಸರ್ಕಾರವೊಂದು ತನ್ನ ಸ್ವಂತ ಪ್ರಜೆಗಳ ಪೌರತ್ವವನ್ನು ಕಿತ್ತುಕೊಳ್ಳುವ ಇಂತಹ ಫ್ಯಾಸಿಸ್ಟ್ ಕ್ರಮ ಕೈಗೊಂಡಿದ್ದನ್ನು ನಾವು ಕೇಳಿಲ್ಲ. ಇಂತಹ ಕ್ರಮದಿಂದ ಉಂಟಾಗುವ ಮಾನವತೆಯ ಬಿಕ್ಕಟ್ಟಿನ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಂತೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಅಸ್ಸಾಂನ ರಾಜ್ಯ ಸರ್ಕಾರ ವರ್ತಿಸಿದೆ. ಲೋಕಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಮತ ಬ್ಯಾಂಕ್ ಸೃಷ್ಟಿಸುವ ಕುತ್ಸಿತ ಉದ್ದೇಶ ಇದರಲ್ಲಡಗಿದೆ. ನಿರುದ್ಯೋಗ, ಬೆಲೆ ಏರಿಕೆ, ಬಡತನ ಮುಂತಾದ ಸಮಸ್ಯೆಗಳನ್ನು ಪರಿಹರಿಸಲಾರದ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಜನಾಂಗ-ಧರ್ಮ-ಭಾಷೆ ಆಧಾರದ ಮೇಲೆ ಜನರಲ್ಲಿ ದ್ವೇಷದ ಬೀಜಗಳನ್ನು ಬಿತ್ತಲಾಗುತ್ತಿದೆ. ಬೆಳೆಯುತ್ತಿರುವ ಜನರ ಐಕ್ಯ ಹೋರಾಟಗಳನ್ನು ದಿಕ್ಕುತಪ್ಪಿಸುವುದು, ಕೇಂದ್ರ ಬಿಜೆಪಿ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪ್ರತ್ಯೇಕವಾದಿ ಶಕ್ತಿಗಳ ಹೀನ ಪಿತೂರಿಯ ಭಾಗವಾಗಿದೆ. ಈ ಪಿತೂರಿಯನ್ನು ಸೋಲಿಸಲು ದೇಶದ ಪ್ರಜಾತಾಂತ್ರಿಕ ಮನಸ್ಸುಳ್ಳ ಎಲ್ಲರೂ, ಬಲಿಷ್ಠ ಜನಹೋರಾಟಗಳನ್ನು ಕಟ್ಟಬೇಕು. ಹಾಗೂ ಕೈಬಿಡಲಾಗಿರುವ ಭಾರತೀಯ ಪ್ರಜೆಗಳ ಹೆಸರನ್ನು ಎನ್.ಆರ್.ಸಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ನಾವು ಆಗ್ರಹಿಸಬೇಕು ಎಂದು ತಿಳಿಸಿದರು.

      ಜಿಲ್ಲಾ ಸಮಿತಿ ಸದಸ್ಯ ಡಾ.ಪ್ರಮೋದ್.ಎನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಮಂಜುಳಾ, ದೇವದಾಸ್, ಸೋಮಶೇಖರ ಗೌಡ, ನಾಗಲಕ್ಷ್ಮಿ, ಶಾಂತಾ, ಹನುಮಂತಪ್ಪ, ಗೋವಿಂದ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here