ಎಲ್ಲಾ ರೀತಿಯ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ಆಗ್ರಹ : ಆ.9 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ

0
190

ತುಮಕೂರು:

      ಡಾ.ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಕಾನೂನು, ರೈತರು ಮತ್ತು ಕೃಷಿ ಕಾರ್ಮಿಕರಿಗೆ ವೃದ್ಧಾಪ್ಯ ವೇತನ, ರೈತಸ್ನೇಹಿ ಬೆಳೆ ವಿಮೆ, ಉದ್ಯೋಗ ಖಾತ್ರಿ ಯೋಜನೆ 200 ದಿನಗಳಿಗೆ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘದ ವತಿಯಿಂದ ಆ.9 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

      ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ಆರ್.ಎಸ್. ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕೆಪಿಆರ್‍ಎಸ್ ಸಹ ಸಂಚಾಲಕ ಬಿ.ಉಮೇಶ್ ಮತ್ತಿತರರು ಆತ್ಮಹತ್ಯೆ ಹಾದಿ ಹಿಡಿದಿರುವ ರೈತರು ಮತ್ತು ಕೃಷಿ ಕಾರ್ಮಿಕರ ರಕ್ಷಣೆಗೆ ಸರ್ಕಾರಗಳು ಮುಂದಾಗಬೇಕು.

      ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ಋಣಮುಕ್ತಿ ಕಾನೂನುಗಳನ್ನು ಪಾರ್ಲಿಮೆಂಟ್‍ನ ಮುಂಗಾರು ಅಧಿವೇಶನದಲ್ಲಿ ಅಂತಿಮಗೊಳಿಸಬೇಕು, ಆತಂಕದಲ್ಲಿ ಜೀವನ ಮಾಡುತ್ತಿರುವ ವೃದ್ಧ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 5 ಸಾವಿರ ರೂ. ಸಹಾಯ ಧನ ನೀಡಬೇಕು ಎಂಬುದೂ ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಅಂದು ಒತ್ತಾಯಿಸಲಾಗುವುದು ಎಂದರು.

      ಗೋಮಾಳ, ಅರಣ್ಯ ಇತ್ಯಾದಿ ಹೆಸರಿನ ಎಲ್ಲಾ ರೀತಿಯ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು. ಜೊತೆಗೆ ಎಲ್ಲಾ ಭೂಹೀನ ಕುಟುಂಬಗಳಿಗೆ ತಲಾ 5 ಎಕರೆ ಕೃಷಿ ಭೂಮಿ ನೀಡಬೇಕು. ವಸತಿ ಹೀನರಿಗೆ ವಸತಿ ಸೌಲಭ್ಯ ಒದಗಿಸಬೇಕು, ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯಾದ್ಯಂತ 50 ಸಾವಿರ ರೈತರು ಮತ್ತು ಕೃಷಿ ಕಾರ್ಮಿಕರಿಂದ ಸಹಿ ಸಂಗ್ರಹ ಚಳುವಳಿ ನಡೆಸಲಾಗುತ್ತಿದೆ ಎಂದರು.

      ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಲಾಭಾಂಶವನ್ನು ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಮಾಡುವ ಉದ್ದೇಶಿತ ಕರಡು ಮಸೂದೆ ಹಾಗೂ ಅಗತ್ಯವಿರುವ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಾಲ ನೀಡಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಗುತ್ತಿಗೆ ಪದ್ಧತಿ ನಿಷೇಧಿಸಬೇಕು, ಕಾರ್ಮಿಕರ ಕಾನೂನು ಮಾಲೀಕರ ಪರ ತಿರುಚುವುದನ್ನು ನಿಲ್ಲಿಸಬೇಕು, ಪಡಿತರ ಪದ್ಧತಿಯನ್ನು ಸಾರ್ವತ್ರೀಕರಣಗೊಳಿಸಬೇಕು ಇನ್ನು ಮೊದಲಾದ ಬೇಡಿಕೆಗಳ ಆಧಾರದಲ್ಲಿ ಸಿಐಟಿಯು ಸಂಘಟನೆ ಜೊತೆಯಲ್ಲಿ ಮುತ್ತಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.

      ಹತ್ತಾರು ವರ್ಷಗಳ ರೈತರು ಮತ್ತು ಕೃಷಿ ಕಾರ್ಮಿಕರ ಹೋರಾಟಗಳ ಒತ್ತಡ ಹಾಗೂ ಹಿಂದಿನ ಸರ್ಕಾರದ ಮುತುವರ್ಜಿಯ ಫಲವಾಗಿ ಲಕ್ಷಾಂತರ ಬಗರ್ ಹುಕುಂ ಸಾಗುವಳಿದಾರರ ಬಹುವರ್ಷಗಳ ಬೇಡಿಕೆಯಾದ ಗೋಮಾಳ ಜಮೀನುಗಳನ್ನು ಉಳುಮೆದಾರರಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸುವ ಹಾಗೂ ಫಾರಂ ನಂ.50, 53 ಅರ್ಜಿಗಳನ್ನು ಹಾಕಿದವರಿಗೆ, ತಿರಸ್ಕರಿಸಲ್ಪಟ್ಟಿರುವ ಅರ್ಜಿದಾರರಿಗೆ ಮತ್ತೆ ಹೊಸದಾಗಿ ಅರ್ಜಿ ಹಾಕಲು ಅವಕಾಶ ನೀಡಲು ಕರ್ನಾಟಕ ಕಂದಾಯ ಕಾಯ್ದೆಗೆ ಎರಡು ತಿದ್ದುಪಡಿಗಳನ್ನು ತರಲಾಗಿದೆ. ಇದರಿಂದ ಲಕ್ಷಾಂತರ ಬಡವರಿಗೆ ಒಂದಿಷ್ಟು ಭೂಮಿ ಲಭ್ಯವಾಗಲಿದೆ. ಇದೇ ರೀತಿ ಹತ್ತಾರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರರ ಸ್ವಾಧೀನದಲ್ಲಿರುವ ಅರಣ್ಯ ಭೂಮಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕಿದೆ ಎಂದು ಹೋರಾಟಗಾರರು ಆಗ್ರಹಿಸಿದರು.

LEAVE A REPLY

Please enter your comment!
Please enter your name here