ಎಲ್ಲ ಶಿಕ್ಷಕರ ಸಹಯೋಗದಿಂದ ಗುಣಮಟ್ಟದ ಶಿಕ್ಷಣ ಸಾಧ್ಯ : ಶಮೀಮ್ ತಾಜ್

0
12

 ದಾವಣಗೆರೆ :

      ಭಾಷೆ, ವಿಷಯ ಹಾಗೂ ವಿವಿಧ ವೃತ್ತಿ ಕೌಶಲ್ಯ ಕಲಿಸುವ ಸೇರಿದಂತೆ ಎಲ್ಲ ಶಿಕ್ಷಕರ ಸಹಯೋಗದೊಂದಿಗೆ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಉಪನಿರ್ದೇಶಕಿ ಹೆಚ್.ಎ.ಶಮೀಮ್ ತಾಜ್ ತಿಳಿಸಿದರು.

      ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರ ವತಿಯಿಂದ ಇಂದು ಬೆಳಿಗ್ಗೆ ಪಿ.ಬಿ. ರಸ್ತೆಯಲ್ಲಿರುವ ಶ್ರೀಮದ್ ಅಭಿನವ ರೇಣುಕಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಪ್ರೌಢಶಾಲಾ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತುಪ್ರದರ್ಶನ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಇದುವರೆಗೆ ವೃತ್ತಿ, ದೈಹಿಕ ಶಿಕ್ಷಣ, ಚಿತ್ರಕಲೆ, ಸಂಗೀತ ಶಿಕ್ಷಕರನ್ನು ಪಾರ್ಟ್-ಬಿ ಎಂಬ ವರ್ಗೀಕರಣ ಮಾಡಿದ್ದು, ಹೊಸ ಶಿಕ್ಷಣ ನೀತಿಯಿಂದ ಇತರೆ ವಿಷಯ ಮತ್ತು ಭಾಷಾ ಶಿಕ್ಷಕರಂತೆ ಸಮಾನ ಪ್ರಾಮುಖ್ಯತೆ ದೊರಕಲಿದೆ. ಪ್ರಸ್ತುತ 1986 ರ ಶಿಕ್ಷಣ ನೀತಿಯನ್ವಯ ಇಲಾಖೆಯ ಕೆಲಸಗಳು ನಡೆಯುತ್ತಿದ್ದು, ಹೊಸ ಶಿಕ್ಷಣ ನೀತಿ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದರು.

      ಮಹಾತ್ಮಾ ಗಾಂಧಿಯವರಿಂದಲೇ ವೃತ್ತಿಕೌಶಲ್ಯಕ್ಕೆ ಒಂದು ಅರ್ಥ ಬಂದಿದೆ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯ-ಪ್ರತಿಭೆಯನ್ನು ಹೊರಹಾಕುವುದುದೇ ಶಿಕ್ಷಣ ಎಂದಿದ್ದಾರೆ ಗಾಂಧೀಜಿಯವರು. ನಿರುದ್ಯೋಗ ಸಮಸ್ಯೆಯನ್ನು ವೃತ್ತಿಕೌಶಲ್ಯವೆಂಬ ಮೂಲಶಿಕ್ಷಣದಿಂದ ನೀಗಿಸಬಹುದು. ಮಾಡುತ್ತಾ ಕಲಿಯುವುದು, ಕಲಿಯುತ್ತಾ ದುಡಿಯುವುದು ಹೀಗೆ ವೃತ್ತಿಕೌಶಲ್ಯದಿಂದ ಹೇಗೆ ಕಲಿಕೆ ಜೊತೆಗೆ ದುಡಿಮೆಯನ್ನೂ ಮಾಡಬಹುದೆಂದು ಗಾಂಧೀಜಿಯವರ ವೃತ್ತಿಕೌಶಲ್ಯ ಪರಿಕಲ್ಪನೆಯು ತಿಳಿಸುತ್ತದೆ.

      ವೃತ್ತಿಶಿಕ್ಷಕರು ಮಕ್ಕಳ ಜೀವನದ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿದ್ದಾರೆ. ಕೌಶಲ್ಯದಿಂದ ಧನಾತ್ಮಕ ಆಲೋಚನೆಗಳು ಹೆಚ್ಚಿ ವೈಜ್ಞಾನಿಕ ಮನೋಭಾವ ಮೂಡುವಲ್ಲಿ ಸಹಕಾರಿಯಾಗುತ್ತದೆ. ಹಾಗೂ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಮಥ್ರ್ಯವನ್ನು ಇದು ವೃದ್ಧಿಸುತ್ತದೆ, ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.

      ಶಿಕ್ಷಕರೂ ಕೂಡ ಮಕ್ಕಳಲ್ಲಿನ ವಿವಿಧ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವೃತ್ತಿ-ಕೌಶಲ್ಯ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಸಂತೃಪ್ತಿ ಸಂತೊಷ ಮೂಡುತ್ತದೆ ಹಾಗೂ ವೀಕ್ಷಕರಿಗೂ ಇದು ಸಂತಸ ತರುತ್ತದೆ. ಅದಲ್ಲದೇ ಇದರಿಂದ ಆರ್ಥಿಕತೆಗೆ ಪ್ರೇರಣೆಯಾಗುತ್ತದೆ ಎಂದರು.

      2019-20 ನೇ ಸಾಲಿಗೆ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹ್ಯಾಂಡ್‍ಬುಕ್ ಟು ಟೀಚರ್ಸ್ ಎಂಬ ಪುಸ್ತಕವನ್ನು ಈ ಸಾಲಿನ ಜೂನ್ ಹೊತ್ತಿಗೆ ಶಿಕ್ಷಕರಿಗೆ ನೀಡಲಾಗುವುದು. ವೃತ್ತಿಶಿಕ್ಷಕರಿಗೆ ಹೊಸ ಪೇ ಸ್ಕೇಲ್ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವೃತ್ತಿ ಶಿಕ್ಷಕರ ವಿಭಾಗದಲ್ಲಿ ಬಿಇಓ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರ 2 ಹುದ್ದೆಗಳನ್ನು ಶೀಘ್ರದಲ್ಲಿಯೇ ತುಂಬಲಾಗುವುದು ಎಂದ ಅವರು ಎಲ್ಲ ಮಕ್ಕಳಿಗೂ ವೃತ್ತಿಶಿಕ್ಷಣವೆಂದರೆ ಒಲವು ಹೆಚ್ಚಿದ್ದು, ವೃತ್ತಿಶಿಕ್ಷಕರೇ ಇತರೆ ಶಿಕ್ಷಕರಿಗಿಂತ ಒಂದೆಜ್ಜೆ ಮುಂದೆ ಇದ್ದಾರೆಂದು ಹುರಿದುಂಬಿಸಿದರು.

      ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರಾದ ಹೆಚ್.ಕೆ.ಲಿಂಗರಾಜು ಮಾತನಾಡಿ, ವೃತ್ತಿಶಿಕ್ಷಕರು ವೃತ್ತಿಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಶಿಕ್ಷಣ ಎಂದರೆ ಕೇವಲ ಮಕ್ಕಳಲ್ಲಿ ಬುದ್ದಿ ತುಂಬುವುದಲ್ಲ. ಬದಲಾಗಿ ಬುದ್ದಿಯ ಬಾಗಿಲುಗಳನ್ನು ತೆರೆಯುವುದಾಗಿದೆ ಎಂದರು.

      ರಾಜ್ಯ ಮಟ್ಟದ ಈ ಶಿಕ್ಷಣ ಕಲಿಕೋತ್ಸವ ವಸ್ತುಪ್ರದರ್ಶನದಲ್ಲಿ ರಾಜ್ಯಾದ್ಯಂತ ವಿವಿಧ ಶಾಲೆಗಳು ಪಾಲ್ಗೊಂಡು ವಿದ್ಯಾರ್ಥಿಗಳಲ್ಲಿ ಹುದುಗಿರುವ ವೃತ್ತಿನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ. ಸಾಮಾನ್ಯವಾಗಿ ಎಲ್ಲೆಡೆ ವೃತ್ತಿಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಕೀಳರಿಮೆ ಮನೋಭಾವ ಹೊಂದಿದ್ದಾರೆ. ಶೈಕ್ಷಣಿಕ ವಿಷಯಗಳು ಮತ್ತು ಭಾಷೆಗಳಂತೆಯೇ ವೃತ್ತಿ ಶಿಕ್ಷಣವೂ ಮುಖ್ಯ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ವೃತ್ತಿ ಮತ್ತು ದೈಹಿಕ ಶಿಕ್ಷಣ ಅತಿ ಮುಖ್ಯವಾಗಿದೆ. ಶಾಲೆಗಳ ಅಭಿವೃದ್ಧಿಯಲ್ಲಿಯೂ ಈ ವೃತ್ತಿಶಿಕ್ಷಕರ ಪಾತ್ರ ಮುಖ್ಯವಾಗಿದೆ. ಶೈಕ್ಷಣಿಕ ಅಂಕಗಳಲ್ಲಿ ಶೇ. 60 ನ್ನು ವಿಷಯಗಳ ಕಲಿಕೆಗೆ, ಶೇ 15 ದೈಹಿಕ ಶಿಕ್ಷಣ ಶೇ 15 ಸೃಜನಶೀಲ ಚಟುವಟಿಕೆ ಮತ್ತು ಶೇ10 ನ್ನು ಮೌಲ್ಯವರ್ಧನೆಗೆ ಮೀಸಲಿಟ್ಟಿದ್ದು, ಮಕ್ಕಳನ್ನು ಹೀಗೆ ಶೇ.100 ರಷ್ಟು ತಯಾರಿಗೊಳಿಸುವಲ್ಲಿ ಎಲ್ಲ ಶಿಕ್ಷಕರ ಹೊಣೆ ಸಮಾನವಾಗಿದೆ ಎಂದರು.

      ಹಿಂದೆ ದಾವಣಗೆರೆಯಲ್ಲಿ ಅನೇಕ ಹತ್ತಿಗಿರಣಿ ಮತ್ತು ಗುಡಿಕೈಗಾರಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ದಾವಣಗೆರೆಯನ್ನು ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎನ್ನಲಾಗುತ್ತಿತ್ತು. ಅನೇಕ ಕಾರಣಗಳಿಂದ ಕಾಲಕ್ರಮೇಣ ಗಿರಣಿಗಳು ಮುಚ್ಚಿ ಮ್ಯಾಂಚೆಸ್ಟರ್ ಹೆಸರು ಮರೆಯಾಯಿತಾದರೂ ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಆರಂಭವಾಗಿದ್ದು ಈಗ ‘ಕೇಂಬ್ರಿಡ್ಜ್ ಆಫ್ ಕರ್ನಾಟಕ’ ಎನ್ನಬಹುದು ಎಂದರು.

      ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಮಕ್ಕಳು ಕಲಿಯಬೇಕಾಗಿರುವುದು ಬೆಟ್ಟದಷ್ಟಿದೆ. ಕೇವಲ ಪಠ್ಯ ಶಿಕ್ಷಣಕ್ಕಲ್ಲದೇ ವೃತ್ತಿ ಶಿಕ್ಷಣ-ಕೌಶಲ್ಯವನ್ನು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ವೃತ್ತಿಕೌಶಲ್ಯ ಕಲಿಸುವ ಮೂಲಕ ಆರ್ಥಿಕ ಸ್ವಾತಂತ್ರ್ಯ ಪಡೆಯುವ ಗಾಂಧೀಜಿಯವರ ಕನಸನ್ನು ನನಸಾಗಿಸುವಂತಿರುವ ಈ ವೃತ್ತಿ ಶಿಕ್ಷಣ ಕಲಿಕೋತ್ಸವ ಅಭಿನಂದನೀಯವಾಗಿದೆ. ಗ್ರಾಮೋದ್ಯೋಗ, ಕರಕುಶಲತೆ, ವೃತ್ತಿಶಿಕ್ಷಣ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿದ್ದು ಇಂತಹ ಚಟುವಟಿಕೆಗಳು ಮತ್ತು ಪ್ರದರ್ಶನದ ಮೂಲಕ ಜೀವಂತವಾಗಿಡಬೇಕೆಂದರು.

      ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಕರಕುಶಲ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು. ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಚಮನ್ ಸಾಬ್, ಪ್ರಾಥಮಿಕ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಗಿರಿಯಪ್ಪ, ಪ್ರೌಢಶಿಕ್ಷಕ ಸಂಘದ ಶಿವಾನಾಯ್ಕ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ್, ವೃತ್ತಿ ಶಿಕ್ಷಣ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕಿ ಸಿದ್ದಮ್ಮ, ಇತರೆ ಪದಾಧಿಕಾರಿಗಳಾದ ಸಿದ್ದರಾಮಯ್ಯ, ಜಯಶಂಕರ್, ಶಿವಶಂಕರಪ್ಪ, ಮಲ್ಲಯ್ಯ, ಯಲ್ಲಪ್ಪ, ಅಧಿಕಾರಿಗಳು, ಶಿಕ್ಷಕ ವೃಂದದವರು ನೌಕರರು, ಪ್ರಾಥಮಿಕ, ಪ್ರೌಢ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

      ಜಿಲ್ಲೆಯ ವಿವಿಧ 110 ಶಾಲೆಗಳಿಂದ ವಿದ್ಯಾರ್ಥಿಗಳ ತಂಡಗಳು ಪಾಲ್ಗೊಂಡು ಹೊಲಿಗೆ, ರೇಷ್ಮೆ, ಕೃಷಿ, ಕರಕುಶಲ, ತೋಟಗಾರಿಕೆ, ಕಾರ್ಪೆಂಟರಿ, ಸಾಮಾಜಿಕ ಬಳಕೆಯ ವಸ್ತುಗಳಿಂದ ತಯಾರಿಸಲಾದ ವಿವಿಧ ವಸ್ತುಗಳು ಸೇರಿದಂತೆ ವಿವಿಧ ವಿಭಾಗಗಳಿಗೆ ಸಂಬಂಧಿಸಿದ 110 ಮಳಿಗೆ ತೆರೆಯಲಾಗಿದ್ದು, ವಿದ್ಯಾರ್ಥಿಗಳಿಂದ ಹೊರ ಹೊಮ್ಮಿದ ಈ ಕೌಶಲ್ಯ ಅತ್ಯಂತ ಉಪಯುಕ್ತ ಮತ್ತು ಮನ ಮೆಚ್ಚುವಂತಿದ್ದವು.
ಬಹುಮಾನ ವಿಜೇತ ವಿಭಾಗಗಳು : ಹೊಲಿಗೆ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ, ಹೊಸನಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಪ್ರಥಮ ಬಹುಮಾನ. ಸರ್ಕಾರಿ ಉರ್ದು ಪ್ರೌಢಶಾಲೆ, ಮಲೇಬೆನ್ನೂರು ದಾವಣಗೆರೆ ದ್ವಿತೀಯ. ಆರ್‍ಜಿಎಂ ಪ್ರೌಢಶಾಲೆ, ಸಿಂಧನೂರು, ರಾಯಚೂರು ಜಿಲ್ಲೆ ತೃತೀಯ ಬಹುಮಾನ.

     ತೋಟಗಾರಿಕೆ ವಿಭಾಗದಲ್ಲಿ ರೇಣುಕಾ ಪ್ರೌಢಶಾಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಪ್ರಥಮ ಬಹುಮಾನ. ಸರ್ಕಾರಿ ಪದವಿಪೂರ್ವ ಕಾಲೇಜು ಹಿರೇಮೇಗಳಗೆರೆ, ಯಲಬುರ್ಗಾ, ಕೊಪ್ಪಳ ದ್ವಿತೀಯ. ಸರ್ಕಾರಿ ಪಪೂ ಕಾಲೇಜು ಕುಕ್ಕುವಾಡ, ದಾವಣಗೆರೆ ತೃತೀಯ ಬಹುಮಾನ.

      ಕೃಷಿ ವಿಭಾಗದಲ್ಲಿ ಗಾಂಧೀ ಗ್ರಾಮೀಣ ಗುರುಕುಲ ಪ್ರೌಢಶಾಲೆ, ಹೊಸರಿತ್ತಿ ಹಾವೇರಿ ಪ್ರಥಮ ಬಹುಮಾನ, ಸರ್ಕಾರಿ ಪ್ರೌಢಶಾಲೆ, ಆಲಿಬಾಳ, ಬಾಗಲಕೋಟೆ ದ್ವಿತೀಯ, ಸರ್ಕಾರಿ ಪ್ರೌಢಶಾಲೆ, ಕಸಬಾ ಲಿಂಗಸೂರು ರಾಯಚೂರು ತೃತೀಯ ಬಹುಮಾನ ಪಡೆದಿರುತ್ತಾರೆ.
ರೇಷ್ಮೆ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಹೋನೂರು, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಪ್ರಥಮ ಬಹುಮಾನ, ಸರ್ಕಾರಿ ಪ್ರೌಢಶಾಲೆ, ಹರ್ತಿಕೋಟೆ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ದ್ವಿತೀಯ, ಸರ್ಕಾರಿ ಪ್ರೌಢಶಾಲೆ, ಕುಣಿಗಲ್, ತುಮಕೂರು ತೃತೀಯ.
ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಶಿರಮಗೊಂಡನಹಳ್ಳಿ, ದಾವಣಗೆರೆ ಪ್ರಥಮ, ಜಿ.ವಿ.ಹಳ್ಳಿ ಕೆ ಪ್ರೌಢಶಾಲೆ ಹಾವೇರಿ ದ್ವಿತೀಯ, ಸರ್ಕಾರಿ ಪಪೂ ಕಾಲೇಜು ವೇಮಗಲ್, ಕೋಲಾರ ತೃತೀಯ ಬಹುಮಾನ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here