ಎಸ್ಸಿ ಪ್ರಮಾಣಪತ್ರಕ್ಕಾಗಿ ಆಗಸ್ಟ್ 10ರ ಗಡುವು

0
139

ದಾವಣಗೆರೆ:

   ಬೇಡ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡಲು ಜಿಲ್ಲಾಡಳಿತಕ್ಕೆ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ್ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಆಗಸ್ಟ್ 10ರ ಗಡುವು ನೀಡಿದೆ. ಅಷ್ಟರೊಳಗೆ ಜಾತಿ ಪ್ರಮಾಣಪತ್ರ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡದಿದ್ದರೆ, ಅವರ ವಿರುದ್ಧ ಕ್ರಮಿನಲ್ ಮೊಕದ್ದಮ್ಮೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದೆ.

    ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಡಾ.ಎಂ.ಪಿ.ದಾರಕೇಶ್ವರಯ್ಯ, ಕರ್ನಾಟಕ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡಬೇಕೆಂದು ಸ್ಪಷ್ಟವಾಗಿ ಸೂಚನೆ ನೀಡಿದರೂ ಸಹ, ಇಲ್ಲಿಯ ಜಿಲ್ಲಾಧಿಕಾರಿಗಳು ಜಾತಿ ಪ್ರಮಾಣಪತ್ರ ನೀಡುವಂತೆ ಸೂಚಿಸುತ್ತಿಲ್ಲ ಎಂದು ಆರೋಪಿಸಿದರು.

    ಈಗಾಗಲೇ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಯಲಹಂಕ, ಬೆಳಗಾವಿ, ಬೈಲುಹೊಂಗಲ, ಅಥಣಿ ಸೇರಿದಂತೆ ವಿವಿಧೆಡೆಗಳಲ್ಲಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡಲಾಗುತ್ತಿದೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ನಮ್ಮ ಸಮುದಾಯದವರನ್ನು ಸುಖಾಸುಮ್ಮನೆ ಅಲೆದಾಡಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ದ್ವೇಷ ಪೂರಕವಾಗಿ ಸುಳ್ಳು ಮಾಹಿತಿ ನೀಡುತ್ತಿರುವುದು ಪ್ರಮುಖ ಕಾರಣವಾಗಿದೆ ಎಂದು ದೂರಿದರು.

    ವೀರಶೈವ-ಲಿಂಗಾಯತ ಪಂಥದ ಅನುಯಾಯಿಗಳಾಗಿರುವ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕೆಂದು ಕರ್ನಾಟಕ ಉಚ್ಛನ್ಯಾಯಾಲಯ ಹಾಗೂ ರಾಜ್ಯ ಸರ್ಕಾರ ಸ್ಪಷ್ಟವಾಗಿ ಆದೇಶ ನೀಡಿದೆ. ಆದರೆ, ಇಲ್ಲಿಯ ಜಿಲ್ಲಾಧಿಕಾರಿಗಳು ದಿನಕ್ಕೊಂದು ಆದೇಶ, ಸೂಚನೆ ನೀಡುವ ಮೂಲಕ ಸಮಾಜವನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ತಕ್ಷಣವೇ ಬೇಡ ಜಂಗಮರ ಬಗ್ಗೆ ಇರುವ ತಾತ್ಸಾರವನ್ನು ಬಿಟ್ಟು, ಎಲ್ಲಾ ತಹಶೀಲ್ದಾರ್‍ಗಳಿಗೆ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡುವಂತೆ ಸೂಚಿಸಬೇಕೆಂದು ಆಗ್ರಹಿಸಿದರು.

     ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಅಲೆಮಾರಿ ಬುಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಜೆ.ಶ್ರೀನಿವಾಸಪ್ಪ ಎಂಬುವರು 2017ರ ನವೆಂಬರ್ 28ರಂದು ಹಿಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರಿಗೆ ಮನವಿ ಸಲ್ಲಿಸಿ, ವೀರಶೈವ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡಲು ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಆದರೆ, ಅಲೆಮಾರಿ ಬುಡ್ಗಜಂಗಮ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರೆಲ್ಲರೂ ಬೇಡ(ಬುಡ್ಗ) ಜಂಗಮ ಜಾತಿಗೆ ಸೇರಿದವರಾಗಿರದೇ, ಭೈರಾಗಿ ಜಾತಿಯವರಿಗೆ ಸೇರಿದವರಾಗಿದ್ದಾರೆ. ಇವರ ಸಮುದಾಯಕ್ಕೆ ಸೇರಿದ ಮಂಜುನಾಥ್ ಅವರು ಸಹ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮುಳಬಾಗಿಲು ಕ್ಷೇತ್ರದಲ್ಲಿ ಬೇಡ(ಬುಡ್ಗ) ಜಂಗಮ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸ್ಪರ್ಧಿಸಿದ್ದರು. ಆದರೆ, ಹೈಕೋರ್ಟ್ ಮಂಜುನಾಥ್ ಅವರ ಜಾತಿಪ್ರಮಾಣಪತ್ರವನ್ನು ರದ್ದು ಮಾಡಿ, ಇವರು ಬೈರಾಗಿ ಜಾತಿಗೆ ಸೇರಿದವರಾಗಿದ್ದಾರೆಂದು ಘೋಷಣೆ ಮಾಡಿತ್ತು. ಆದ್ದರಿಂದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಅಲೆಮಾರಿ ಬುಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘವನ್ನು ಸರ್ಕಾರ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದೀಪಿಕಾ, ಸುಜಾತಾ, ರೇಖಾ ಹಜರಿದ್ದರು.

LEAVE A REPLY

Please enter your comment!
Please enter your name here