ಏಸುವನ್ನು ದೇವಧೂತನೆನ್ನಲೋ…ಮಹಾಮಾನವನೆನ್ನಲೋ?

0
36

       ಯಾವ ವ್ಯಕ್ತಿಯಾಗಲಿ ಮಹಾ ಪುರುಷನೋ, ಮಹಾವ್ಯಕ್ತಿಯೋ ಮಹಾತ್ಮನೋ ಆಗಿ ಹುಟ್ಟುವುದಿಲ್ಲ. ಪ್ರತಿಯೊಬ್ಬರೂ ಸಾಮಾನ್ಯ ವ್ಯಕ್ತಿಯಾಗೇ ಹುಟ್ಟಿರುತ್ತಾರೆ. ಆ ವ್ಯಕ್ತಿ ಬೆಳೆಯುತ್ತಾ ತನ್ನಲ್ಲಿ ಅಳವಡಿಸಿಕೊಳ್ಳುವ ಮಹಾ ಮಾನವೀಯ ಗುಣಗಳು, ನಡೆಗಳಿಂದ, ರೂಪಿಸಿಕೊಂಡ ಮಹಾನ್ ವ್ಯಕ್ತಿತ್ವದಿಂದ ಮಹಾವ್ಯಕ್ತಿಯಾಗಿಯೋ ಮಹಾಪುರುಷನಾಗಿಯೋ ಮಹಾತ್ಮನಾಗಿಯೋ ಮಾಜದಲ್ಲಿ ಪ್ರಖ್ಯಾತರಾಗುತ್ತಾರೆ.

Related image

      ಏಸುವನ್ನು ದೇವಮಾನವ, ದೇವದೂತ ಅಂತ ಹೇಳುತ್ತೇವೆ. ಹಾಗೆ ಅವನನ್ನು ದೇವದೂತ ಎಂದು ಭಾವಿಸುವುದರಿಂದ ಅವನ ಬೆಲೆ ಕಡಿಮೆಯಾಗುತ್ತದೆ ಹೊರತು ಅವನ ಬೆಲೆ ಹೆಚ್ಚಾಗದು. ಅವನೊಬ್ಬ ಮಾನವ ಎಂದಾಗ ಅವನು ಬೆಳೆದು ಏರಿದ ಎತ್ತರ ಅವನಿಗೆ ಹೆಚ್ಚು ಬೆಲೆ ಬರುವಂತೆ ಮಾಡುತ್ತದೆ! ಅವನು ಒಮ್ಮೆಗೆ ಕ್ಷಮೆಯ, ಮಾನವೀಯ ಗುಣಗಳ ಹಿಮಾಲಯದ ತುತ್ತತುದಿಗೇರಲಿಲ್ಲ! ನಿಧಾನವಾಗಿ ಏರುತ್ತಾ ಹೋಗಿ ಕೊಟ್ಟ ಕೊನೆಗೆ ಕಷ್ಡಪಟ್ಟು ಶಿಖರದ ತುದಿಗೇರಿದ! ಅವನು ದೇವಮಾನವ ಎಂದಾಗ ಮಾನವರ ಮಧ್ಯ ಅವನು ಬೆಳೆದು ನಿಂತ ಎತ್ತರಕ್ಕೆ ಬೆಲೆನೇ ಇರುವುದಿಲ್ಲ! ದೇವದೂತ ಎಂದಾಗ ಅವನು ಏನು ಬೇಕಾದರೂ ಮಾಡುವ ಸಾಮರ್ಥ್ಯ ಹೊಂದಿರುವವ ಎಂದಂತಾಗುವುದರಿಂದ ಅವನ ಸಾಧನೆಗೆ ಬೆಲೆ ಕಡಿಮೆಯಾಗುತ್ತದೆ. ಹೀಗೆ ಏಸು, ಬುದ್ದ, ಬಸವ, ಕನಕ ಇಂತಹವರನ್ನು ಮಾನವರಾಗಿ ನೋಡಿದಾಗ ಅವರ ಬೆಲೆ ಹೆಚ್ಚುತ್ತದೆ. ಹಾಗೆ ನೋಡಿ ಅವರ ಬೆಲೆ ಹೆಚ್ಚಿಸುವ ಅಗತ್ಯವಿದೆ!

      ಏಸು ಗೆಲಿಲಿ ಸಮುದ್ರದ ನೀರಿನ ಮೇಲೆ ನಡೆದುದು, ಆ ಸಮುದ್ರದ ದಂಡೆಯ ಮೇಲೆ ಸಾವಿರಾರು ಜನರಿಗೆ ಉಣಬಡಿಸಿದು, ಅಲ್ಲೇ ಅನೇಕ ಪವಾಡಗಳನ್ನು ಮೆರೆದುದು – ಇಂತಹ ಘಟನೆಗಳು, ಪವಾಡಗಳು ಮಹಾಪುರುಷರ ಜೀವನದಲ್ಲಿ ಸಾಮಾನ್ಯವಾಗಿರುತ್ತವೆ ಅವುಗಳಿಂದ ಏಸುವನ್ನು ದೇವಧೂತ ಎನ್ನುವಂತೆ ಮಾಡುತ್ತವೆ ಅದು ಸೂಕ್ತವೆ?

Related image

      ಅವನು ದೇವಮಾನವನಾಗಿದ್ದರೆ ಆ ಪುಟ್ಟ ತನ್ನದಲ್ಲದ ಕುರಿಗೆ ಆಶ್ರಯವಾದ ಜಾಗದ ಗೋದಲಿಯಲ್ಲಿ ಏಕೆ ಜನಿಸುತ್ತಿದ್ದ? ಹಾಗೇ ಅವನು ದೇವದೂತನಾಗಿದ್ದರೆ ಶಿಲುಬೆಗೆ ಏರಿಸಿ ನೋವು ಕೊಡುತ್ತಿರುವವರನ್ನು ನಿರ್ನಾಮ ಮಾಡದೆ ಏಕೆ ಸಹಿಸುತ್ತಿದ್ದ? ಅವನು ಎಲ್ಲರಂತೆ ಸಮಾಜದ ಕೂಸಾದ ಮಾನವನಾದುದರಿಂದ ಗೋದಲೆಯಲ್ಲಿ ಜನಿಸಿದ. ಜನರು ಕೊಟ್ಟ ಶಿಕ್ಷೆಗಳನ್ನೆಲ್ಲಾ ಸಹಿಸಿ ಶಿಲುಬೆಗೆ ಏರಿದ! ಗಳಿಸಿಕೊಂಡ ಸಹನೆಯಿಂದ ಅವರನ್ನೆಲ್ಲಾ ಕ್ಷಮಿಸಿದ ಮಹಾಗುಣ ಅವನು ಬೆಳೆದ ಎತ್ತರ! ಹಾಗೆ ಯಾರದೋ ಕುರಿಯ ಗೋದಲೆಯಲ್ಲಿ ಜನಿಸಿದವ ಜಗತ್ತಿಗೇ ಬೆಳಕು ಕೊಡುವ ಜಗಜ್ಯೋತಿಯಾದುದು, ಶಾಂತಿದೂತನಾದುದು, ಅಪರಿಮಿತ ಕ್ಷಮೆಯ ಸಾಗರವಾದುದು ಮಾನವನೊಬ್ಬನ ಅಪರಿಮಿತ ಮಾನವತೆಯ ಸಾಧಕ ಎಂದರೆ ಆಚ್ಚರಿ!

Related image

      ಕೆಲವರು ದೌಷ್ಟ್ಯವನ್ನು ನಾಶ ಮಾಡಲು ದುಷ್ಟರ ಸಂಹಾರ ಮಾಡುತ್ತಾರೆ. ಕೆಲವರು ದುಷ್ಟರನ್ನು ಸಂಹರಿಸುವುದರಿಂದ ದೌಷ್ಟ್ಯ ನಾಶವಾಗುವುದಿಲ್ಲ ಎಂದು ಅರಿತ ಪ್ರಯುಕ್ತ ದುಷ್ಟರ ನಾಶಕ್ಕಿಂತ ಅವರನ್ನು ಪರಿವರ್ತಿಸುವುದು ಸಾಧು ಮತ್ತು ಶ್ರೇಷ್ಠ ಎಂದು ತಿಳಿದು ಅನೇಕರು ಈ ಪ್ರಯತ್ನ ಮಾಡಿ ಉತ್ತಮರಲ್ಲಿ ಉತ್ತಮರೆನಿಸಿಕೊಂಡಿದ್ದಾರೆ. ಅಂಥವರಲ್ಲಿ ಬುದ್ದ ಮಹಾ ಕ್ರೂರಿಯಾಗಿದ್ದ ಅಂಗುಲಿಮಾಲನನ್ನು ಸಂಹರಿಸದೆ ಅವನ ಕ್ರೂರತ್ವವನ್ನು ನಾಶ ಮಾಡಿ ಭಿಕ್ಷು ಆಗಿಸಿ ಸಾಧು ಮಾಡುವುದು ನೋಡುತ್ತೇವೆ. ದಾನವತ್ವದಿಂದ ಮಾನವತ್ವದ ಕಡೆಗೆ ಪರಿವರ್ತಿಸುವುದನ್ನು ಮಾಡುತ್ತಾನೆ! ಪರಸ್ಪರ ವಿರುದ್ದ ಸ್ವಭಾವಗಳ ಪರಿವರ್ತನೆ. ರಾಕ್ಷಸತ್ವದಿಂದ ಮಾನವತ್ವಕ್ಕೆ ಅನ್ನುವುದಕ್ಕಿಂತಾ ಮಹಾಮಾನವತ್ವಕ್ಕೆ ಪರಿವರ್ತಿಸುವುದು ನಂಬಲಸಾಧ್ಯವಾದರೂ ಸತ್ಯ. ಇಂತಹ ಮಹಾನ್ ಗುಣಗಳಿಂದಾಗಿಯೇ ಬುದ್ದ ಮಹಾನ್ ಆಗಿರುವುದು.

 

     ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣೆಂಬ ದ್ವೇಷದ ವಾತಾವರಣದಲ್ಲಿ ಏಸು ಒಂದು ಕೆನ್ನೆಗೆ ಒಡೆದವರಿಗೆ ಇನ್ನೊಂದು ಕೆನ್ನೆಗೆ ಒಡೆಯಲು ಕೊಡು ಎಂದು ಹೇಳಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇನ್ನೊಂದು ಕೆನ್ನೆ ಕೊಟ್ಟಾಗ ಇನ್ನೊಂದು ಕೆನ್ನೆಯ ಕೊಟ್ಟವರು ಒಳ್ಳೆಯವರೇ ಇರಬೆಕೆಂದು ಒಡೆಯಲಾರ, ಅವನಿಗೆ ಅವರೆಷ್ಟು ಒಳ್ಳೆಯವರು ಎಂಬುದು ತಿಳಿಯುವುದಲ್ಲದೆ, ತಾನು ಮಾಡಿದ ತಪ್ಪಿನ ಅರಿವಾಗಿ ಒಳ್ಳೆಯವನಾಗಿ ಪರಿವರ್ತನೆ ಹೊಂದಿ ಕ್ಷಮೆಯಾಚಿಸಬಹುದು ಎಂದು ಏಸು ಹಾಗೆ ಹೇಳಿರಬಹುದು. ಇದು ಸಹ ಅಹಿಂಸೆ ಪ್ರತಿಪಾದನೆಯೇ ಆಗಿದೆ ! ಆದರೆ ಇಂದು ಇನ್ನೊಂದು ಕೆನ್ನೆ ಏನಾದರೂ ಕೊಟ್ಟರೆ ಆ ಕೆನ್ನೆಗೂ ಬಾರಿಸಿ ಹೋಗುವ ಜನವೇ ಹೆಚ್ಚು. ಆದ್ದರಿಂದ ಅದನ್ನು ವಿನಯದ ಸನ್ನಡತೆಯ ಸಂಕೇತವಾಗಿ ಪರಿಗಣಿಸಬೇಕು. ಇನ್ನೊಂದು ರೀತಿ ಯೋಚಿಸಿದರೆ ಒಂದು ಸಲ ತಪ್ಪು ತಿಳುವಳಿಕೆಯಿಂದ ಒಡೆದಿರಬಹುದು ಅಂತಹವರನ್ನು ಕ್ಷಮಿಸಿಬಿಡು ಆಗ ಅವರು ಇಂದಲ್ಲ ನಾಳೆ ಅವರು ಅನೇಕಮಾಡಿದ ತಪ್ಪು ಅರ್ಥಮಾಡಿಕೊಂಡು ಕ್ಷಮೆಯಾಚಿಸಬಹುದು, ಪಶ್ಚಾತ್ತಾಪ ಪಡಬಹುದು ಎಂದು ಹಾಗೆ ಹೇಳಿರಬೇಕು. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆಯಿಲ್ಲ! ಕ್ಷಮೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ! ಕ್ಷಮೆಯಾ ಧರಿತ್ರಿ! ಮಾನವ ಭೂಮಿಗೆ ಎಷ್ಟು ಹಿಂಸೆ ಮಾಡಿದರೂ ಅದು ದ್ವೇಷಿಸದೆ ಕ್ಷಮಿಸಿ ಜೀವದ ಸುಖ ಸಂತಸಕ್ಕೆ ಆಧಾರವಾದ ಸರ್ವಸ್ವವನ್ನೂ ಧಾರೆಯೆರೆಯುವ ಗುಣವೇ ಕ್ಷಮಾಗುಣ! ಕ್ಷಮಾಗುಣ ಇರಬೇಕು ಎಂಬುದು ಅದರ ಸಾರ! ಒಡೆಯಿಸಿಕೊಂಡವರು ಕ್ಷಮಿಸುವುದು ಅವರ ದೊಡ್ಡ ಗುಣ! ಹಾಗೆ ಕ್ಷಮಿಸಿದ್ದರಿಂದ ದೊಡ್ಡವರಾಗುವುದು ಒಡೆಯಿಸಿಕೊಂಡವರೇ ಹೊರತು ಒಡೆದವರಲ್ಲ! ಆದರೆ ಒಡೆದವರು ದೊಡ್ಡವರಾಗುತ್ತಾರೆ ಎಂದು ಜನ ಭಾವಿಸುತ್ತಾರೆ. ಒಡೆದವರೆಂದಿಗೂ ದೊಡ್ಡವರಾಗರು ಅದು ತಪ್ಪು!

Related image

      ಕೆಲವೇ ಮಹಾನ್ ವ್ಯಕ್ತಿಗಳಲ್ಲಿ ಏಸು ಸಹ ಒಬ್ಬರು. ಏಸು ಎಂದರೆ ಕ್ಷಮೆಯ ಆಗರ! ಏಸು ಎಂದರೆ ಪ್ರೀತಿ, ಮಮತೆ, ಶಾಂತಿಯ ಸಾಗರ! ಒಬ್ಬ ಹೆಂಗಸನ್ನು ಅನೇಕ ಜನ ಕಲ್ಲುಗಳ ತೆಗೆದುಕೊಂಡು ಒಡೆದು ಕೊಲ್ಲಲು ಅಟ್ಟಿಸಿಕೊಂಡು ಬರುತ್ತಿದ್ದರು. ಆ ಹೆಂಗಸು ಇವನ ಮೊರೆ ಹೋದಾಗ ಏಸು ಒಡೆಯಲು ಬಂದವರನ್ನು ತಡೆಯುತ್ತಾನೆ. ಅಟ್ಟಿಸಿಕೊಂಡು ಬಂದ ಜನ ಇವಳು ವೇಷ್ಯೆ, ಪಾಪ ಮಾಡಿದ್ದಾಳೆ ಇವಳನ್ನು ಶಿಕ್ಷಿಸದೆ ಬಿಡಬೇಕೇ? ಎಂದು ಕೇಳುತ್ತಾರೆ. ನೀನು ಸರಿಯಾಗಿ ಧರ್ಮರೀತಿ ತೀರ್ಮಾನಿಸುತ್ತೀಯ ಎಂದು ಕೇಳಲ್ಪಟ್ಟಿದ್ದೇವೆ. ಇವಳಿಗೆ ಯಾವ ಶಿಕ್ಷೆ ಕೊಡಬೇಕು ತೀರ್ಮಾನಿಸಿ ಎಂದು ಏಸುವನ್ನೇ ಪರೀಕ್ಷಿಸ ಹೊರಡುತ್ತಾರೆ. ಆಗ ಏಸು ಒಂದು ಕ್ಷಣ ಯೋಚಿಸಿ ಆಯ್ತು ನೀವು ಇವಳನ್ನು ಕಲ್ಲುಗಳಿಂದ ಒಡೆದು ಶಿಕ್ಷಿಸಿದರೆ ಇವಳು ಮಾಡಿದ ಪಾಪಕ್ಕೆ ಶಿಕ್ಷೆಯಾಗುತ್ತದೆ ಎಂದು ತಿಳಿದಿರುವಿರಲ್ಲವೇ? ಸರಿ!Related image

ಹಾಗಾದರೆ ಯಾರು ಜೀವನದಲ್ಲಿ ಪಾಪನೇ ಮಾಡಿಲ್ಲವೋ ಅವರು ಮೊದಲು ಇವಳನ್ನು ಕಲ್ಲಿನಿಂದ ಒಡೆಯಲಿ ಎಂದನಂತೆ. ಆಗ ಒಡೆಯಲು ಕೈಯಲ್ಲಿ ಕಲ್ಲು ಹಿಡಿದು ನಾ ಮುಂದು ತಾ ಮುಂದು ಎಂದು ಬಂದವರು ಯಾರಿಂದಲೂ ಕೈ ಮೇಲಕ್ಕೆ ಎತ್ತಲಾಗಲಿಲ್ಲ! ಒಬ್ಬರ ನಂತರ ಒಬ್ಬರ ಕೈಯಲ್ಲಿದ್ದ ಕಲ್ಲಗಳು ತನ್ನಷ್ಟಕ್ಕೆ ತಾನೆ ಕೆಳಗೆ ಒಂದೊಂದಾಗಿ ಸದ್ದಿಲ್ಲದೆ ಬಿದ್ದವಂತೆ! ಹೀಗೆ ಈಗ ಪಶ್ಚಾತ್ತಾಪವಾಗಿರಬಹುದು ತನ್ನ ತಪ್ಪನ್ನು ತಿದ್ದಿಕೊಂಡು ಬದುಕಲಿ ಎಂದು ಅವಳಿಗೆ ಇನ್ನೊಂದು ಬದುಕುವ ಅವಕಾಶ ಕಲ್ಪಿಸಿಕೊಟ್ಟಿರಬಹುದು. ಅದೇ ಸಂದರ್ಭದಲ್ಲಿ ತಪ್ಪು ಮಾಡದಿರುವವರು ಯಾರೂ ಈ ಪ್ರಪಂಚದಲ್ಲಿ ಇರಲು ಸಾಧ್ಯವಿಲ್ಲ, ಎಂಬ ಸತ್ಯ ಅನಾವರಣಗೊಳಿಸಿದ. ತಪ್ಪು ಮಾಡಿದವರನ್ನೆಲ್ಲಾ ಒಡೆದು ಕೊಲ್ಲುತ್ತಾ ಹೋದರೆ ಮಾನವ ಕುಲವೇ ಭೂಮಿಯ ಮೇಲೆ ಉಳಿಯಲಾರದು! ತಪ್ಪುಗಳು ಆಗುವುದು ಸಾಮಾನ್ಯ. ಅವು ಪುನರಾವರ್ತನೆಯಾಗಬಾರದು. ಅವುಗಳ ತಿದ್ದಿ ನಡೆಯಲು ಒಂದು ಅವಕಾಶ ಮಾಡಿಕೊಡಬೇಕು. ಸಿಕ್ಕ ಅವಕಾಶ ಸದುಪಯೋಗವಾಗುವಂತೆ ಮಾಡಿಕೊಂಡು ಆದ ತಪ್ಪ ತಿದ್ದಿ ನಡೆಯುವವನು ಮನುಷ್ಯ. ಶಿಕ್ಷಿಸುವ ಅಧಿಕಾರ ಹೊಂದಿದವರಷ್ಟೇ ದೊಡ್ಡವರಾಗುವುದಿಲ್ಲ! ಕ್ಷಮಿಸಿಬಿಡುವವರು ಎಲ್ಲರಿಗಿಂತ ದೊಡ್ಡವರಾಗುತ್ತಾರೆ! ಏಸು ಅವಳನ್ನು ಒಂದೂ ತಪ್ಪು ಮಾಡದೆ ಇರುವವರು ಒಡೆಯಲಿ ಎಂದಾಗ ಯಾರೂ ಒಡೆಯಲಿಲ್ಲ. ಆಗ ಅವಳು ಶಿಕ್ಷೆಯಿಂದ ಪಾರಾಗುವಂತಾಗಲಿಲ್ಲವೇ? ಹಾಗೆ ಅವಳನ್ನು ಶಿಕ್ಷೆಯಿಂದ ಪಾರು ಮಾಡಿದ್ದು ಏಸುವಿನ ಕ್ಷಮಾಗುಣವಲ್ಲವೆ? ಹಾಗೆ ಯಾರು ನಿಮ್ಮಲ್ಲಿ ಒಂದೂ ತಪ್ಪು ಮಾಡಿಯೇ ಇಲ್ಲವೋ ಅವರು ಮೊದಲು ಒಡೆಯಿರಿ ಎಂದು ಹೇಳುತ್ತಾನೆ. ಆಗ ಆ ಸಂದರ್ಭ ಗಂಭೀರವಾಗುತ್ತದೆ. ಸ್ವಲ್ಪ ಹೊತ್ತು ಯೋಚನೆಯಲ್ಲಿ ಮುಳುಗುತ್ತಾರೆ. ಆ ಸಂದರ್ಭದಲ್ಲಿ ಎಲ್ಲರ ಆತ್ಮ ವಿಮರ್ಶೆಗೊಳಪಡುತ್ತದೆ. ಅದರ ಪರಿಣಾಮವಾಗಿ ಎಲ್ಲರೂ ತಮ್ಮ ತಮ್ಮ ಕೈಯಲ್ಲಿದ್ದ ಕಲ್ಲಗಳ ಕೆಳಗೆ ಬೀಳುವಂತೆ ಆಗುತ್ತದೆ. ಅವರನ್ನು ಆತ್ಮ ವಿಮರ್ಶೆಗೆ ಒಳಗಾಗುವಂತೆ ಮಾಡಿ, ವೇಷ್ಯೆಯಾಗುವಲ್ಲಿ ಪುರುಷನ ಪಾತ್ರವಿಲ್ಲವೇ? ಇವಳಿಗಷ್ಟೇ ಶಿಕ್ಷೆ ಕೊಟ್ಟರೆ ಆ ಪುರಷನಿಗೆ ಯಾರು ಶಿಕ್ಷೆ ಕೊಡಬೇಕು? ಇದರ ಜತೆಗೆ ಒಡೆಯಲು ಬಂದವರು ಮಾಡಿರುವ ತಪ್ಪುಗಳ ಅವರ ಕಣ್ಣ ಮುಂದೆ ಹಾದುಹೋಗುವಂತೆ ಮಾಡಿ ಅವರನ್ನು ಒಡೆಯದಂತೆ ಮಾಡಿ ಅವರಿಗೂ ಸ್ವಲ್ಪ ಕ್ಷಮಾಗುಣ ಬರುವಂತೆ ಮಾಡಿದುದು ಏಸುವಿನ ಶಾಂತಿ, ವಿವೇಕಯುತ, ಅವರನ್ನೂ ಕ್ಷಮಿಸುವಂಥಾ ಕ್ಷಮಾ ಗುಣವಲ್ಲವೇ? ಆದರೂ ಅವರ ಅಜ್ಞಾನ, ಕೆಟ್ಟ ಸಂಪ್ರದಾಯಗಳ ವಿರುದ್ದ ಹೋರಾಡಿ ಆ ಅಜ್ಞಾನಕ್ಕೇ ಬಲಿಯಾದದ್ದು ವಿಪರ್ಯಾಸ!

Related image

      ಶಾಂತಿ, ಪ್ರೀತಿ, ಮಾನವೀಯತೆ, ಕ್ಷಮೆ ಮುಂತಾದ ಮೌಲ್ಯಗಳ ಸಂದೇಶ ಏಸುವಿನ ಜೀವನ! ಶಿಲುಬೆಗೆ ಏರಿಸಿದಾಗಿನ ನೋವಿನಲ್ಲೂ ಬದುಕು ಸಾವಿನ ಹೋರಾಟದಲ್ಲೂ ಶಿಲುಬೆಗೇರಿಸಿದ ಜನರ ಅಪಾರ ಅಜ್ಞಾನವ, ಕ್ರೌರ್ಯವ ಕ್ಷಮಿಸಿ ಕ್ಷಮಾಮೂರ್ತಿಯಾಗಿ ವಿಶ್ವದೆತ್ತರ ನಿಲ್ಲುತ್ತಾನೆ! ಇವ ದೇವಧೂತನೆಂದಾಗ ಇಷ್ಟೆಲ್ಲಾ ಶ್ರಮಿಸಿದುದಕ್ಕೆ ಬೆಲೆನೇ ಇಲ್ಲವಾಗುತ್ತದೆ. ಅವನೊಬ್ಬ ಸಾಮಾನ್ಯ ಮಾನವನಾಗಿ ಇಷ್ಟೆಲ್ಲಾ ಸಾಧಿಸಿದ ಎಂದಾಗ ಅವನು ಮಹಾನಾಗಿ ಕಾಣುವುದರಿಂದ, ಅವನ ಬೆಲೆ ಹೆಚ್ವುತ್ತದೆ. ಆದುದರಿಂದ ಮಾನವನನ್ನಾಗಿ ನೋಡಿ ಅವನ ಬೆಲೆ ಹೆಚ್ಚಿಸಬೇಕಲ್ಲವೆ?

– ಕೆ ಟಿ ಸೋಮಶೇಖರ ಹೊಳಲ್ಕೆರೆ.

 

LEAVE A REPLY

Please enter your comment!
Please enter your name here