ಒತ್ತುವರಿ ತೆರವಿಗೆ ಆವರಗೊಳ್ಳ ಗ್ರಾಮಸ್ಥರ ಒತ್ತಾಯ

0
40

 ದಾವಣಗೆರೆ:

      ಆವರಗೊಳ್ಳದ ಹಿರಿಯ ಛೇರ್ಮನ್ ಕೊಟ್ರಯ್ಯನವರು ಸಾರ್ವಜನಿಕರ ಹಾಗೂ ಊರಿನ ಹಿತದೃಷ್ಟಿಯಿಂದ ಶ್ರೀವೀರಭದ್ರೇಶ್ವರಸ್ವಾಮಿ ಸೇವಾ ಸಹಕಾರ ಸಂಘಕ್ಕೆ ದಾನವಾಗಿ ನೀಡಿದ್ದ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಿಕೊಡಬೇಕೆಂದು ಒತ್ತಾಯಿಸಿ ಆವರಗೊಳ್ಳ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

      ಆವರಗೊಳ್ಳ ಗ್ರಾಮದ ಹಿರಿಯ ಛೇರ್ಮನ್ ಕೊಟ್ರಯ್ಯನವರು ಊರಿನ ಹಿತದೃಷ್ಟಿಯಿಂದ ಗ್ರಾಮದ ರಿ.ಸ.ನಂ.1ರ ಜಮೀನಿನಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ ಸೇವಾ ಸಹಕಾರ ಸಂಘಕ್ಕೆ ಜಮೀನು ನೀಡಿದ್ದರು. ಈ ಬಗ್ಗೆ ಗ್ರಾಮ ಪಂಚಾಯತ್‍ನಲ್ಲಿ ದಾಖಲೆ ಸಹ ಇದೆ. ಈ ಜಮೀನಲ್ಲಿ ಸರ್ಕಾರಿ ಉರ್ದು ಶಾಲೆಯನ್ನು ಹಾಗೂ ಗ್ರಾಮ ಪಂಚಾಯತಿ ಕಚೇರಿ ಕಟ್ಟಿಸುವ ಬಗ್ಗೆ ಗ್ರಾಮಸ್ಥರಿಗೆ ತಿಳಿದ ವಿಷಯವಾಗಿದೆ.

ಆದರೆ, ಈ ಜಮೀನಿನ ಪಕ್ಕದಲ್ಲಿರುವ ಮನೆಯ ನಿವಾಸಿ ಬೆಳ್ಳೂಡಿ ಮಠದ ವೀರಯ್ಯ ಎಂಬುವರು ಗ್ರಾಮ ಪಂಚಾಯ್ತಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭವನ್ನು ದುರುಪಯೋಗ ಪಡೆಸಿಕೊಂಡು ಈ ಜಾಗದಲ್ಲಿ ಈ ಸ್ಥಳ ತಮಗೆ ಸೇರಿದೆ, ಈ ಜಾಗದಲ್ಲಿ ಅನುಮತಿ ಇಲ್ಲದೇ ಅತೀಕ್ರಮಣ ಪ್ರವೇಶ ನಿಬರ್ಂಧಿಸಲಾಗಿದೆ ಎಂಬುದಾಗಿ ನಾಮ ಫಲಕ ಹಾಕಿಕೊಂಡಿದ್ದಾರೆ.


ಈ ಬಗ್ಗೆ ಪ್ರಶ್ನಿಸಿದರೆ, ದಾಖಲೆಯೂ ನೀಡದೇ, ಗ್ರಾಮ ಪಂಚಾಯತ್ ಸದಸ್ಯರನ್ನೇ ನಿಂದಿಸುತ್ತಾರೆ. ಅಲ್ಲದೆ, ತಮ್ಮ ಸಾವಿಗೆ ಗ್ರಾಮದ ಎಲ್ಲರೂ ಕಾರಣ ಎಂಬುದಾಗಿ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿದ್ದಾರೆ. ಆದ್ದರಿಂದ ಈ ಜಾಗಕ್ಕೆ ಭೇಟಿ ನೀಡಿ ಸ್ಥಳ ಮತ್ತು ದಾಖಲಾತಿಯನ್ನು ಪರಿಶೀಲಿಸಿ, ತೆರವುಗೊಳಿಸಿ, ಬಡ ಮಕ್ಕಳ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here