ಕನಿಷ್ಠ ವೇತನಕ್ಕಾಗಿ ಬಿಸಿಯೂಟ ತಯಾರಕರ ಒತ್ತಾಯ

0
21

 ದಾವಣಗೆರೆ:

      ಕನಿಷ್ಟ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

      ಇಲ್ಲಿನ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಬಿಸಿಯೂಟ ತಯಾರಕರು, ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಅರ್ಪಿಸಿದರು.ಇದೇ ವೇಳೆ ಫೆಡರೇಷನ್ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಕಳೆದ 16 ವರ್ಷಗಳಿಂದ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಲ್ಲಿ ಮುಖ್ಯ ಅಡುಗೆಯವರಾಗಿ ಮತ್ತು ಸಹಾಯಕರಾಗಿ ಸುಮಾರು 1.18 ಲಕ್ಷ ಜನ ಮಹಿಳೆಯರು ದುಡಿಯುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಬಿಸಿಯೂಟ ತಯಾರಕರ ಕೆಲಸವನ್ನು ಖಾಯಂಗೊಳಿಸದೆ, ಗೌರವ ಸಂಭಾವನೆ ಹೆಸರಿನಲ್ಲಿ ಸರ್ಕಾರವೇ ದುಡಿಯುವ ವರ್ಗಕ್ಕೆ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

       ಬಿಸಿಯೂಟ ತಯಾರಕರಿಗೆ ಕನಿಷ್ಟ 10,500 ರೂ. ಕನಿಷ್ಟ ವೇತನ ಜಾರಿಗೊಳಿಸಬೇಕು. ತಮಿಳುನಾಡು ಮಾದರಿಯಲ್ಲಿ ಸೌಲಭ್ಯ ಒದಗಿಸಬೇಕು. ಪಿಎಫ್, ಇಎಸ್‍ಐ ಜಾರಿ ಮಾಡಬೇಕು. ಮಾಸಿಕ 3 ಸಾವಿರ ರೂ. ನಿವೃತ್ತಿ ಪಿಂಚಣಿ ಜಾರಿಗೊಳಿಸಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸರ್ಕಾರದ ಕೈಪಿಡಿಯಲ್ಲಿರುವಂತೆ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಿ ಬಡಿಸಬೇಕು. ದಸರಾ ಹಾಗೂ ಬೇಸಿಗೆ ರಜೆಯ ವೇತನ ನೀಡಬೇಕು.

      5 ಲಕ್ಷ ರೂ. ವಿಮಾ ಯೋಜನೆಯನ್ನು ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.ಫೆಡರೇಷನ್ ಮುಖಂಡರಾದ ಆವರೆಗೆರೆ ಚಂದ್ರು, ಐರಣಿ ಚಂದ್ರು ಆವರಗೆರೆ ವಾಸು, ರುದ್ರಮ್ಮ ಬೆಳಲಗೆರೆ, ಜ್ಯೋತಿ ಲಕ್ಷ್ಮಿ, ಜಯಮ್ಮ, ಲಲಿತಮ್ಮ, ಮಹಮದ್ ಬಾಷಾ, ಗುಡಿಹಳ್ಳಿ ಹಾಲೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here