ಕಾಂಗ್ರೆಸ್ ಕೋಟೆ ಉರುಳಿಸಿ ಅರಳಿದ ಕಮಲ

0
37

 ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು * ಕಾಂಗ್ರೆಸ್‍ನ ಮಾನ ಉಳಿಸಿದ ರಘುಮೂರ್ತಿ
ಚಿತ್ರದುರ್ಗ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಿರೀಕ್ಷೆಯಂತೆಯೇ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಕೋಟೆಯನ್ನು ಉರುಳಿಸಿದೆ. ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ತನ್ನ ಆಧಿಪತ್ಯವನ್ನು ಸ್ಥಾಪಿಸಿದೆ.

ಮೊನ್ನೆ ನಡೆದ ವಿಧಾನಸಭೆ ಚನಾವಣೆಯ ಮತ ಎಣಿಕೆ ಮಂಗಳವಾರ ನಡೆದು ಮದ್ಯಾಹ್ನದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ಪ್ರಕಟವಾಗಿದೆ. ಈ ಚುನಾವಣೆಯ ಫಲಿತಾಂಶ ಒಂದು ರೀತಿಯಲ್ಲಿ ಅಚ್ಚರಿ ಮೂಡಿಸಿದೆ. ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೊಳಲ್ಕೆರೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ.

ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವು ದಾಖಲಿಸಿದ್ದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್‍ನ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್ ಅವರೂ ಸೋಲು ಕಂಡಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಆರನೇ ಬಾರಿಗೂ ಗೆಲುವು ಸಾಧಿಸಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಳ್ಳಾರಿಯ ಸಂಸದ ಶ್ರೀರಾಮುಲು ಗೆಲುವು ಸಾಧಿಸಿದ್ದರೆ, ಅವರ ವಿರುದ್ದ ರಾಜಕೀಯ ಜಿದ್ದಿಗೆ ಬಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಹಾಲಿ ಶಾಸಕ ಎಸ್.ತಿಪ್ಪೇಸ್ವಾಮಿ ಅವರೂ ಸೋತಿದ್ದಾರೆ.

ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಅವರು ಬಿ.ಜಿ.ಗೋವಿಂದಪ್ಪ ಅವರ ವಿರುದ್ದ ಗೆಲುವು ಸಾಧಿಸಿದ್ದು, ಈ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾ ದಳದಿಂದ ಸ್ಪರ್ದಿಸಿದ್ದ ಚಿತ್ರನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ಭಾರೀ ಮುಖಭಂಗ ಅನುಭವಿಸಿದ್ದಾರೆ.

ಚಿತ್ರದುರ್ಗ ಕ್ಷೇತ್ರ;
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ 81632 ಮತಗಳನ್ನು ಪಡೆದು ಗೆದಿದ್ದಾರೆ.

ಪ್ರತಿಸ್ಪರ್ಧಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಕೆ.ಸಿ.ವೀರೇಂದ್ರ (ಪಪ್ಪಿ) ಕೆ.ಸಿ.ವೀರೇಂದ್ರ ಅವರು 49406 ಮತಗಳನ್ನು ಪಡೆದು ಸೊತಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಎಸ್.ಷಣ್ಮುಖಪ್ಪ (ಹನುಮಲಿ) 48638 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಹೊಳಲ್ಕೆರೆ ಕ್ಷೇತ್ರ;
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂ.ಚಂದ್ರಪ್ಪ ಇವರು 107976 ಮತಗಳನ್ನು ಪಡೆದು ಜಯಗಳಿಸಿದ್ದರೆ, ಅವರ ಪ್ರತಿ ಸ್ಪರ್ದಿ ಸಮಾಜ ಕಲ್ಯಾಣ ಸಚಿವ ಹೆಚ್.ಅಂಜನೇಯ ಅವರು 69036 ಮತಗಳನ್ನು ಸೋತಿದ್ದಾರೆ.

ಇಲ್ಲಿ ಚಂದ್ರಪ್ಪ ಅವರು 38940 ಮತಗಳ ಅಂತರದಿಂದ ಗೆದ್ದಿದ್ದಾರೆ. ಜಾತ್ಯಾತೀತ ಜನತಾ ದಳವೂ ಸೇರಿದಂತೆ ಇತರೆ ಎಲ್ಲಾ ಅಭ್ಯರ್ಥೀಗಳು ಠೇವಣಿ ಕಳೆದುಕೊಂಡಿದ್ದಾರೆ.

ಹಿರಿಯೂರು ಕ್ಷೇತ್ರ;
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಪೂರ್ಣಿಮಾ 77733 ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಅವರ ಪ್ರತಿಸ್ಪರ್ಧಿ ಹಾಲಿ ಶಾಸಕ ಡಿ.ಸುಧಾಕರ್ ಅವರು 64858 ಮತಗಳನ್ನು ಪಡೆದು ಸೋತಿದ್ದಾರೆ.

ಬಿಜೆಪಿ ಇಲ್ಲಿ 12875 ಮತಗಳ ಅಂತರದಿಂದ ಗೆದಿದ್ದೆ. ಜನತಾದಳ ಜಾತ್ಯಾತೀತ ಪಕ್ಷದ ಅಭ್ಯರ್ಥಿ ಡಿ.ಯಶೋಧರ 42044 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಚಳ್ಳಕೆರೆ ಕ್ಷೇತ್ರ;
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ರಘುಮೂರ್ತಿ 72874 ಮತಗಳನ್ನು ಪಡೆದು ಮರು ಆಯ್ಕೆಯಾಗಿದ್ದಾರೆ. ರಘುಮೂರ್ತಿ ಅವರು 13539 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಜಾತ್ಯಾತೀತ ಜನತಾದಳ ಪಕ್ಷದ ಎಂ.ರವೀಶ್‍ಕುಮಾರ್ 59335 ಮತಗಳನ್ನು ಪಡೆದು ಸೋತಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಟಿ..ಕುಮಾರಸ್ವಾಮಿ 33471 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಹೊಸದುರ್ಗ ಕ್ಷೇತ್ರ;
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್ 90562 ಮತಗಳನ್ನು ಪಡೆದು ಹಾಲಿ ಶಾಸಕ ಕಾಂಗ್ರೆಸ್‍ನ ಬಿ.ಜಿ.ಗೋವಿಂದಪ್ಪ ಅವರನ್ನು ಸೋಲಿಸಿದ್ದಾರೆ. ಗೂಳಿಹಟ್ಟಿ ಶೇಖರ್ 25992 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಬಿ.ಜಿ.ಗೋವಿಂದಪ್ಪ 64,570 ಮತಗಳನ್ನು ಪಡೆದು ಸೋಲುಕಂಡಿದ್ದಾರೆ. ಜನತಾದಳ ಜಾತ್ಯಾತೀತ ಪಕ್ಷದ ಅಭ್ಯರ್ಥಿ ಶಶಿಕುಮಾರ್ 1575 ಮತಗಳನ್ನು ಪಡೆದು ಭಾರೀ ಮುಖಭಂಗ ಅನುಭವಿಸಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರ;
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ದಾಖಲೆಯ ಗೆಲುವು ಸಾಧಿಸಿದ್ದಾರೆ. ಅವರು 84018 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಡಾ: ಬಿ.ಯೋಗೀಶ್‍ಬಾಬು ಅವರಿಗಿಂತ 42045 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.

ಡಾ: ಯೋಗೀಶ್‍ಬಾಬು ಅವರು 41973 ಮತಗಳನ್ನು ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಹಾಲಿ ಶಾಸಕ ಎಸ್.ತಿಪ್ಪೇಸ್ವಾಮಿ ಅವರು 41152 ಮತಗಳನ್ನು ಪಡೆದು ಭಾರೀ ಮುಖಭಂಗ ಅನುಭವಿಸಿದ್ದಾರೆ. ಜನತಾದಳ(ಜಾತ್ಯಾತೀತ) ಪಕ್ಷದ ಅಭ್ಯರ್ಥಿ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ 15262 ಮತಗಳನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here