ಕಾಯ್ದೆ ಇದ್ದರೂ ನಿಲ್ಲದ ವರದಕ್ಷಿಣೆ ಪಿಡುಗು: ಕೆಂಗಬಾಲಯ್ಯ

0
17

  ದಾವಣಗೆರೆ:

      ವರದಕ್ಷಿಣೆ ಪಿಡುಗು ಕಡಿವಾಣಕ್ಕಾಗಿ ಹಲವು ಕಾನೂನು, ಕಾಯ್ದೆಗಳಿದ್ದರೂ, ಇನ್ನೂ ವರದಕ್ಷಿಣೆ ಕಿರಕುಳ ತಡೆಯಲು ಸಾಧ್ಯವಾಗಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ ವಿಷಾಧ ವ್ಯಕ್ತಪಡಿಸಿದರು.

      ನಗರದ ಎಂ.ಸಿ.ಸಿ. ಬಿ ಬ್ಲಾಕ್‍ನಲ್ಲಿ ಜಾಗೃತ ಮಹಿಳಾ ಸಂಘದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿ, ಜಿಲ್ಲಾ ವಕೀಲರ ಸಂಘ, ಜಾಗೃತ ಮಹಿಳಾ ಸಂಘದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರದಕ್ಷಿಣೆ ಎಂಬುದು ಒಂದು ಪಿಡುಗಾಗಿದ್ದು, ಅದನ್ನು ಕೊಡುವುದು ಹಾಗೂ ತೆಗೆದುಕೊಳ್ಳುವುದು ಎರಡೂ ತಪ್ಪು. ಅಲ್ಲದೆ, 1961ರಲ್ಲಿ ವರದಕ್ಷಿಣೆ ಕಿರುಕುಳ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿದ್ದರೂ ಇನ್ನೂ ವರದಕ್ಷಿಣೆ ಕಿರುಕುಳ ತಡೆಯಲು ಸಾಧ್ಯವಾಗಿಲ್ಲ. ವರದಕ್ಷಿಣೆ ಕಿರುಕುಳ ತಡೆಯಲು ಬರೀ ಕಾಯ್ದೆಯಿಂದ ಸಾಧ್ಯವಾಗದು. ಅದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯವಶ್ಯವಾಗಿದೆ ಎಂದು ಹೇಳಿದರು.

      ಮಹಿಳೆಯರ ಮೇಲಿನ ಶೋಷಣೆ ಮತ್ತು ಅನ್ಯಾಯ ತಡೆಗಟ್ಟಲು ಮಹಿಳೆಯರು ಕನಿಷ್ಠ ಕಾನೂನಿನ ಜ್ಞಾನ ಹೊಂದಿರಬೇಕು. ಆದರೆ, ಕಾನೂನನ್ನು ಅನಾವಶ್ಯಕವಾಗಿ ದುರ್ಬಳಕೆ ಮಾಡಿಕೊಳ್ಳಬಾರದು. ಮಹಿಳೆಯರು ಮದುವೆ ನಂತರ ತನ್ನ ಪತಿಯ ಮನೆಗೆ ಹೋದಾಗ, ಅಲ್ಲಿ ಉತ್ತಮವಾಗಿದ್ದರೂ ಕೂಡಾ ಆಸ್ತಿ ಕೇಳವುದು ತಪ್ಪು. ಆದರೆ ಪತಿಯ ಮನೆಯವರು ಕಷ್ಟ ಪರಿಸ್ಥಿತಿಯಲ್ಲಿದ್ದಾಗ ಆಸ್ತಿ ಕೇಳವುದರಲ್ಲಿ ತಪ್ಪೇನು ಇಲ್ಲ ಎಂದರು.

      ವೃತ್ತಿಗಾಗಿ ವಿದ್ಯಾಭ್ಯಾಸ ಆಲ್ಲ. ಜ್ಞಾನಾರ್ಜನೆ ಮತ್ತು ಬದುಕುವ ರೀತಿ ನೀತಿ ತಿಳಿಯಲು ಇದು ಅವಶ್ಯಕವಾಗಿಬೇಕು. ಮಕ್ಕಳಿಗೆ ಮಾನವೀಯ ಗುಣಗಳನ್ನು ಕಲಿಸಬೇಕು. ಪತಿಯ ಮನೆಯಲ್ಲಿ ಉತ್ತಮವಾಗಿ ಬೆರೆತು ಕುಟುಂಬವನ್ನು ಸರಿಯಾಗಿ ನಿರ್ವಹಿಸಿ, ಸ್ವಾಸ್ಥ್ಯ ಬದುಕಿನಲ್ಲಿ ಸಾಗುವಂತೆ ತಾಯಂದಿರು ಮಗಳಿಗೆ ತಿಳಿಹೇಳಬೇಕು. ಪಾಲಕರೂ ತಮ್ಮ ಮಗಳು ಗಂಡನ ಮನೆಯಲ್ಲಿ ಚೆನ್ನಾಗಿ ಬರಬೇಕೆಂದು ವಿಭಕ್ತ ಕುಟುಂಬವನ್ನು ಹುಡುಕುತ್ತಾರೆ. ಉತ್ತಮವಾದ ಆಸ್ತಿ, ಒಬ್ಬನೇ ಮಗ, ಹೆಣ್ಣು ಮಕ್ಕಳು ಇರದಂತಹ ಮನೆಯನ್ನು ನೋಡಿ ಮಗಳನ್ನು ಕೊಡುವುದು ಹೆಚ್ಚಾಗುತ್ತಿದೆ ಎಂದು ಹೇಳಿದರು.

      ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ಕಾನೂನು ಅರಿವು ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶದಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳಾ ಸಂಘದವರಿಗೆ ಕಾನೂನಿನ ಬಗ್ಗೆ ತಿಳಿಸಲಾಗುತ್ತಿದೆ. ಕಾನೂನಿನ ಬಗ್ಗೆ ತಿಳುವಳಿಕೆ ಹೊಂದಿ ಅದನ್ನು ಅವಶ್ಯಕತೆಗೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು, ದುರುಪಯೋಗ ಪಡೆಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

      ಅಪ್ಪನ ಆಸ್ತಿಯಲ್ಲಿ ತಮಗೂ ಪಾಲು ಇದೆ ಎಂದು ಇತ್ತಿಚೆಗೆ ಕೆಲವು ಮಹಿಳೆಯರ ತಿಳಿದುಕೊಂಡು, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ತಂದೆ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ, ಒಳ್ಳೆ ಕುಟುಂಬದೊಂದಿಗೆ ಮದುವೆ ಮಾಡಿರುತ್ತಾರೆ. ಆದರೂ ಸ್ವಂತ ಬುದ್ದಿ ಇಲ್ಲದೆ ಕೆಲವರು ತನ್ನ ತಂದೆಯ ವಿರುದ್ಧವೇ ಪ್ರಕರಣವನ್ನು ದಾಖಲು ಮಾಡಿದ್ದು, ಇದು ಸರಿಯಲ್ಲ ಎಂದರು.

      ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, 21ನೇ ಶತಮಾನದಲ್ಲೂ ಕೂಡಾ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಇದಕ್ಕೆ ಸಾಮಾಜಿಕ ಮತ್ತು ಕಾನೂನಿನ ರಕ್ಷಣೆ ದೊರಕದೆ ಇರುವುದೇ ಕಾರಣವಾಗಿದೆ. ತಾಯಿಯಾಗಿ, ಹೆಂಡತಿಯಾಗಿ ಇಂದು ಹೆಣ್ಣು ಮಕ್ಕಳು ಬೇಕು. ಆದರೆ, ಮಗಳಾಗಿ ಹೆಣ್ಣು ಬೇಡ ಎಂಬ ಮನಸ್ಥಿತಿಯಿಂದಾಗಿ, ಇಂದು ಹೆಚ್ಚಾಗಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಜಗತ್ತು ಮುಂದುವರಿದರೂ ಕೂಡ, ನೈತಿಕತೆ ಇಲ್ಲದ ಕಾರಣ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಶೋಷಣೆ ಹೆಚ್ಚಾಗಿ ನಡೆಯುತ್ತಿದೆ ಎಂದು ಕಳವಳಪಟ್ಟರು.

      ಕಾರ್ಯಕ್ರಮದಲ್ಲಿ ವಕೀಲರಾದ ಸಿ.ಪಿ. ಅನಿತಾ ಉಪನ್ಯಾಸ ನೀಡಿದರು.ಜಾಗೃತ ಮಹಿಳಾ ಸಂಘದ ಕಾರ್ಯದರ್ಶಿ ಉಮಾ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಶೃತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here