ಕಾರ್ಮಿಕ ಕಾನೂನುಗಳ ತಿದ್ದುಪಡಿ; ಕೇಂದ್ರ ಸರ್ಕಾರದ ನೀತಿ ವಿರುದ್ದ ಪ್ರತಿಭಟನೆ

0
48

ಚಿತ್ರದುರ್ಗ:

    ಉದ್ಯಮಿಗಳು, ಬಂಡವಾಳ ಶಾಹಿಗಳ ಪರವಾಗಿ ಕೇಂದ್ರ ಸರ್ಕಾರದ ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ ಸಿ.ಐ.ಟಿ.ಯು.ಸಿ.ಜಿಲ್ಲಾ ಸಮಿತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಯೂನಿಯನ್ ಪಾರ್ಕ್‍ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಬಂಡವಾಳಶಾಹಿಗಳು, ಸಿರಿವಂತರು ಹಾಗೂ ಉದ್ಯಮಿಗಳಿಗೆ ರತ್ನಗಂಬಳಿ ಹಾಸಲು ಹೊರಟಿರುವ ದೇಶದ ಪ್ರಧಾನಿ ನರೇಂದ್ರಮೋದಿ ಅನ್ನದಾತ ರೈತ, ಕಾರ್ಮಿಕ, ಕೂಲಿಕಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದಿದ್ದಾರೆ. ಇದರಿಂದ ಅಸಂಘಟಿತ ಕಟ್ಟಡ ಕಾರ್ಮಿಕರು, ಮೆಕ್ಯಾನಿಕ್‍ಗಳು, ಹಮಾಲಿ ಕಾರ್ಮಿಕರು, ಕೃಷಿ ಕಾರ್ಮಿಕರ ಜೀವನ ಕಷ್ಟಕರವಾಗಿರುವುದರಿಂದ ಸಾಮಾಜಿಕ ಭದ್ರತೆ, ಭವಿಷ್ಯ ನಿಧಿ, ಪಿಂಚಣಿ ಹಾಗೂ ವಸತಿ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

   ಎಲ್ಲಾ ಕಾರ್ಮಿಕರಿಗೂ ಮಾಸಿಕ ಕನಿಷ್ಟ ವೇತನ ಹದಿನೆಂಟು ಸಾವಿರ ರೂ. ನೀಡಬೇಕು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಬೆಸ್ಕಾಂ, ಹಾಸ್ಟೆಲ್‍ನ ಹೊರಗುತ್ತಿಗೆ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು.
ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ನಿರುದ್ಯೋಗ ನಿವಾರಿಸಲು ಉದ್ಯೋಗ ಸೃಷ್ಟಿಸಬೇಕು. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವಜನಿಕ ಪಡಿತರ ವ್ಯವಸ್ಥೆ ಸಾರ್ವತ್ರಿಕರಣಗೊಳ್ಳಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸಿ ರೈತರ ಆತ್ಮಹತ್ಯೆಯನ್ನು ತಡೆಯಬೇಕು.ಕೃಷಿ ಕೂಲಿ ಕಾರ್ಮಿಕರ ಸೇವಾ ಸೌಲಭ್ಯಗಳ ಶಾಸನಕ್ಕಾಗಿ ಹಾಗೂ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಶಿಕ್ಷಣದ ಹಕ್ಕು ಮತ್ತು ಆರೋಗ್ಯ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

   ಸಿ.ಐ.ಟಿ.ಯು.ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಲಿಯಪ್ಪ, ಖಜಾಂಚಿ ಸಿ.ಕೆ.ಗೌಸ್‍ಪೀರ್, ಉಪಾಧ್ಯಕ್ಷ ಟಿ.ನಿಂಗಣ್ಣ, ತಾಲೂಕು ಅಧ್ಯಕ್ಷೆ ನಿಂಗಮ್ಮ, ಮಂಜುನಾಥ್, ಮಹಮದ್ ಜಿಕ್ರಿಯಾಉಲ್ಲಾ, ನಾಗರಾಜಾಚಾರಿ, ಶೇಖ್‍ಕಲೀಂವುಲ್ಲಾ, ಹೆಚ್.ಓ.ನಾಗರಾಜ, ಕೆ.ತಿಪ್ಪೇಸ್ವಾಮಿ, ಬಿ.ಬೋರಮ್ಮ, ಸುಧಾ, ಮಾರಪ್ಪ, ಅಲ್ತಾಫ್‍ಹುಸೇನ್, ತಾಜ್‍ವುಲ್ಲಾ ರಫಿ, ಪಿ.ಗಿರೀಶ್‍ಮೂರ್ತಿ, ವಿಜಯಮ್ಮ, ಬಾಲಮ್ಮ, ಸೈಯದ್ ಜಬ್ಬಾರ್, ಮುಕುಂದ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here