ಕಾವೇರಿ ವಿವಾದ : ಸರ್ವ ಪಕ್ಷ ಸಭೆಯ ನಿರ್ಣಯಗಳೇನು..?

0
12

ಬೆಂಗಳೂರು:

   ಕೇಂದ್ರ ರಚಿಸಿರುವ ಕಾವೇರಿ ನೀರು ನಿರ್ವಹಣಾ ಮಂಡಳಿ ಕುರಿತು ಸರ್ವಪಕ್ಷ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಒಮ್ಮತದಿಂದ ತೆಗೆದುಕೊಳ್ಳಲಾಗಿದೆ.

      ಸಿಎಂ ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದ ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸದಾನಂದ ಗೌಡ, ಹಲವು ಸಚಿವರು, ಶಾಸಕರು ಮತ್ತು ರಾಜ್ಯದ ಸಂಸದರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

      ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ಜೂನ್ 2ರಂದು ಕೇಂದ್ರದ ಕಾವೇರಿ ನೀರು ನಿರ್ವಹಣಾ ಸಮಿತಿ ಕರೆದಿರುವ ಸಭೆಗೆ ರಾಜ್ಯದ ಪ್ರತಿನಿಧಿಯನ್ನು ಕಳುಹಿಸುವ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು ಎಂದರು.

      ಸಭೆಯಲ್ಲಿ ರಾಜ್ಯದ ಕಷ್ಟಗಳನ್ನು ಹೇಳಲು, ಸಮಿತಿಯ ಚರ್ಚೆಯ ಬಗ್ಗೆ ತಿಳಿಯಲು ರಾಜ್ಯದ ಪ್ರತಿನಿಧಿ ಹಾಜರಿರುವುದು ಅವಶ್ಯಕ. ಅಲ್ಲದೆ ಪ್ರತಿನಿಧಿ ಇಲ್ಲದೆಯೂ ಸ್ವತಂತ್ರ್ಯವಾಗಿ ನಿರ್ಣಯ ತೆಗೆದುಕೊಳ್ಳುವ ಅವಕಾಶ ಸಮಿತಿಗೆ ಇರುವ ಕಾರಣ ಪ್ರತಿನಿಧಿಯನ್ನು ಕಳುಹಿಸಲೇ ಬೇಕಿದೆ ಎಂದು ಅವರು ಹೇಳಿದರು.

      ರಾಜ್ಯದ ಒಟ್ಟು 40 ಸಂಸದರು ಜೂನ್ 18ರಿಂದ ಆಗುವ ಲೋಕಸಭೆ ಅಧಿವೇಶನದಲ್ಲಿ ಕಾವೇರಿ ವಿಷಯದ ಬಗ್ಗೆ ಸದನದಲ್ಲಿ ಹೊರಾಟ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಬಿಜೆಪಿ ಕೇಂದ್ರ ಸಚಿವ ಅನಂತ್‌ಕುಮಾರ್ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ ಎಂದರು.

      ಸಿದ್ದರಾಮಯ್ಯ ಅವರು ಸಭೆಗೆ ಗೈರಾದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಅವರನ್ನು ವೈಯಕ್ತಿಕವಾಗಿ ನಾನೇ ಸಭೆಗೆ ಆಹ್ವಾನಿಸಿದ್ದೆ. ವೈಯಕ್ತಿಕ ಕಾರಣಗಳಿಂದಾಗಿ ಸಭೆಗೆ ಆಗಮಿಸಲು ಆಗದು ಆದರೆ ಸಭೆಯ ನಿರ್ಣಯಗಳಿಗೆ ಸಮ್ಮತಿ ಇದೆಯೆಂದು ಅವರು ನಿನ್ನೆಯೇ ತಿಳಿಸಿದ್ದರು ಎಂದು ಡಿಕೆಶಿ ಸ್ಪಷ್ಟಪಡಿಸಿದರು. 

 

LEAVE A REPLY

Please enter your comment!
Please enter your name here