ಕಿಂಗ್‍ಪಿನ್‍ಗಳ ಹೆಸರು ಬಹಿರಂಗಪಡಿಸಿ: ಎಂಪಿಆರ್

0
23

ದಾವಣಗೆರೆ:

              ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು, ಶಾಸಕರ ಖರೀದಿಗಾಗಿ ಬಿಜೆಪಿ ಕಿಂಗ್‍ಪಿನ್‍ಗಳು ಹಣ ಸಂಗ್ರಹಿಸುತ್ತಿದ್ದಾರೆಂದು ಹೇಳಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಕ್ಷಣವೇ ಕಿಂಗ್‍ಪಿನ್‍ಗಳ ಹೆಸರು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ, ರಾಜ್ಯದ ಜನತೆಯ ಕ್ಷಮೆಯಾಚಿಸಬೇಕೆಂದು ಮಾಜಿ ಸಚಿವ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಂಗ್‍ಪಿನ್‍ಗಳು ಬಿಜೆಪಿ ಹಣ ಸಂಗ್ರಹಿಸಿ ಕೊಡುತ್ತಿದ್ದಾರೆಂದು ಹೇಳುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ದುರ್ಬಿನ್‍ಗಳಾಗಿವೆ ಎಂದು ಕುಟುಕಿದರು.
               22 ಜನ ಕಾಂಗ್ರೆಸ್ ಶಾಸಕರಿಗೆ ತಲಾ 10 ಕೋಟಿ ರೂ. ಕೊಟ್ಟು ಖರೀದಿಸಲು ಬಿಜೆಪಿಗೆ ಕಿಂಗ್‍ಪಿನ್‍ಗಳು ಹಣ ಸಂಗ್ರಹಿಸಿಕೊಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಹೇಗಿದ್ದರೂ ಕುಮಾರಸ್ವಾಮಿ ಕೈಯಲ್ಲಿ ಅಧಿಕಾರವಿದೆ. ಕಿಂಗ್‍ಪಿನ್‍ಗಳು ಇರುವುದು ನಿಜವೇ ಆಗಿದ್ದರೆ ಅವರನ್ನೇಕೆ ಒಳಗೆ ಹಾಕಬಾರದು ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.
               ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಈಶ್ವರ್ ಖಂಡ್ರೆ ಅವರು ಹತಾಶೆಯ ಮನೋಭಾವದಿಂದ ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆಂಬ ಆರೋಪ ಮಾಡುತ್ತಿದ್ದಾರೆ. ಆದರೆ, ನಮಗೆ ಆಪರೇಷನ್ ಕಮಲ ಮಾಡುವ ಅವಶ್ಯಕತೆಯೇ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ನವ ಆಂತರಿಕ ಕಲಹದಿಂದಲೇ ಸರ್ಕಾರ ಪತನವಾಗಲಿದೆ ಎಂದರು.
              ದೇವೇಗೌಡರು ಯಾರಿಗೆ ತೊಂದರೆ ಕೊಡುವುದನ್ನು ಬಿಟ್ಟಿದ್ದಾರೆ. ರಾಮಕೃಷ್ಣ ಹೆಗಡೆ ಅವರಿಂದ ಹಿಡಿದು ಜೆ.ಹೆಚ್.ಪಟೇಲ್, ಬಚ್ಚೇಗೌಡರು, ಭೈರೇಗೌಡರು ಹೀಗೆ ಎಲ್ಲರಿಗೂ ತೊಂದರೆ ಕೊಡುತ್ತಲೇ ಬಂದಿದ್ದಾರೆ. ಆದರೆ, ಕಲ್ಲು ಬಂಡೆಯಂತಿರುವ ಬಿ.ಎಸ್.ಯಡಿಯೂರಪ್ಪನವರಿಗೆ ಇವರಿಂದ ಏನೂ ಮಾಡಿಕೊಳ್ಳಲಾಗುವುದಿಲ್ಲ. ದೇವೇಗೌಡರು ಮತ್ತು ಅವರ ಮಕ್ಕಳಂತೆ ಬಿ.ಎಸ್.ಯಡಿಯೂರಪ್ಪನವರೇನು ಅವಕಾಶವಾದ ರಾಜಕಾರಣ ನಡೆಸಿಲ್ಲ. ಹೀಗಾಗಿ ಇವರ್ಯಾರಿಗೂ ಯಡಿಯೂರಪ್ಪ ಮತ್ತು ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು.
               ಪದ್ಮನಾಭ ನಗರದಿಂದ ಹೆಚ್.ಡಿ.ರೇವಣ್ಣ ಸರ್ಕಾರದ ಆದೇಶ ಹೊರಡಿಸುತ್ತಿದ್ದಾರೆ. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಸೇರಿದಂತೆ ಎಲ್ಲಾ ಮಾಫಿಯಾಗಳು ನಡೆಯುತ್ತಿವೆ. ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿರುವ ಚಳ್ಳಕೆರೆಯ ಪಪ್ಪಿ ಅವರಿಗೆ ಜೆಡಿಎಸ್ ಟಿಕೇಟ್ ನೀಡಿದ್ದು ಮರೆಯಬಾರದು. ಜೆಡಿಎಸ್-ಕಾಂಗ್ರೆಸ್‍ನಲ್ಲಿ ರೌಡಿಗಳು, ದರೋಡೆಕೋರರು ತುಂಬಿಕೊಂಡಿದ್ದಾರೆಂದು ಟೀಕಿಸಿದರು.
ನಿನ್ನೆಯವರೆಗೂ ಐಸಿಯುನಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇಂದು ಸತ್ತು ಹೋಗಿದೆ. ಈ ಸತ್ತ ಸರ್ಕಾರಕ್ಕೆ ಜೀವ ತುಂಬಲು ಜೆಡಿಎಸ್ ಮತ್ತು ಕಾಂಗ್ರೆಸ್‍ನವರು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹೆಚ್.ಎನ್.ಶಿವಕುಮಾರ್, ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್, ನಾಗರಾಜ, ರಾಜು ವೀರಣ್ಣ, ಧನುಷ್‍ರೆಡ್ಡಿ, ಬಸವರಾಜ್ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here