ಕುಖ್ಯಾತ ರೌಡಿ ಸೈಕಲ್ ರವಿಗೆ ಗುಂಡೇಟು

0
22

ಬೆಂಗಳೂರು:

ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸ್ ಅಧಿಕಾರಿಗಳಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಖ್ಯಾತ ರವಿಕುಮಾರ್ ಅಲಿಯಾಸ್ ಸೈಕಲ್ ರವಿ ಸ್ಥಿತಿ ಗಂಭೀರವಾಗಿದೆ.
ಆರ್‍.ಆರ್.ನಗರ ಆಸ್ಪತ್ರೆಯಿಂದ ಸೈಕಲ್ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಿಬ್ಬೊಟ್ಟೆಗೆ ಗುಂಡೇಟು ಬಿದ್ದಿರುವುದರಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

      ಕೆಂಗೇರಿ ಬಳಿ ಬುಧವಾರ ಸಂಜೆ ಬೆನ್ನಟ್ಟಿದ ಸಿಸಿಬಿ ಅಧಿಕಾರಿಗಳು ಸೈಕಲ್ ರವಿ ಮೇಲೆ ಎರಡು ಸುತ್ತಿನ ಗುಂಡು ಹಾರಿಸಿದ್ದರು. ಒಂದು ಗುಂಡು ಆತನ ಕಿಬ್ಬೊಟ್ಟೆಗೆ ಬಿದ್ದಿದ್ದರೆ, ಮತ್ತೊಂದು ಗುಂಡು ಬಲಗಾಲಿನ ಮಂಡಿಗೆ ಹೊಕ್ಕಿತ್ತು.

      ಶಸ್ತ್ರ ಚಿಕಿತ್ಸೆ ನಂತರ ದೇಹ ಹೊಕ್ಕಿದ್ದ ಎರಡೂ ಗುಂಡಗಳನ್ನು ಹೊರತೆಗೆಯಲಾಗಿದ್ದು, ತೀವ್ರ ರಕ್ತಸ್ರಾವ ಮತ್ತು ಹೊಟ್ಟೆಯಲ್ಲಿ ಗಂಭೀರವಾದ ಗಾಯಗಳಾಗಿರುವ ಕಾರಣ ಆತನ ಸ್ಥಿತಿ ಚಿಂತಾಜನಕವಾಗಿದೆ. ಸದ್ಯಕ್ಕೆ ಏನನ್ನೂ ಹೇಳಲಾಗದು ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ತಣ್ಣಗಾದ ರವಿ:

ಕಳೆದ 6 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ರೌಡಿ ರವಿಕುಮಾರ್ ಅಲಿಯಾಸ್ ಸೈಕಲ್ ರವಿ ಪೊಲೀಸರ ಗುಂಡೇಟಿಗೆ ಗಾಯಗೊಂಡು ತಣ್ಣಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

      ಸುಮಾರು 20 ವರ್ಷಗಳಿಂದ ರೌಡಿ ಚಟುವಟಿಕೆಗಳಲ್ಲಿ ನಿರತನಾಗಿದ್ದ ರವಿ ಇದುವರೆಗೂ ಒಂದು ಬಾರಿಯೂ ಪೊಲೀಸರ ಬಂಧನಕ್ಕೊಳಗಾಗಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ. ನನ್ನನ್ನು ಬಂಧಿಸುವ  ಪೊಲೀಸ್ ಗಂಡು ಹುಟ್ಟಿಲ್ಲ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದ ಸೈಕಲ್ ರವಿ ಪೊಲೀಸರ ಗುಂಡೇಟಿಗೆ ತಣ್ಣಗಾಗಿ ಹೋಗಿದ್ದಾನೆ.

      ಬರೋಬರಿ 6 ಕೊಲೆ, ನಾಲ್ಕು ಕೊಲೆ ಯತ್ನ, ಹದಿನೈದಕ್ಕೂ ಹೆಚ್ಚು ಅಪಹರಣ, ಸುಲಿಗೆಯಂತಹ ಒಟ್ಟು 32 ಕೇಸ್‍ಗಳು ಈತನ ಮೇಲಿವೆ. 16  ಪೊಲೀಸ್ ಠಾಣೆಗಳಿಗೆ ಈತ ಬೇಕಾಗಿದ್ದ. ಆದರೆ ಒಂದು ಬಾರಿಯೂ ಬಂಧನಕ್ಕೊಳಗಾಗಿ ಜೈಲು ಸೇರಿರಲಿಲ್ಲ. ತಾನೇ ಸ್ವಯಂಪ್ರೇರಿತನಾಗಿ ನ್ಯಾಯಾಲಯಗಳಲ್ಲಿ ಶರಣಾಗಿ ತನ್ನ ವಿರುದ್ಧದ ತನಿಖೆ ಎದರಿಸುತ್ತಿದ್ದ.

      ಸುಬ್ರಹ್ಮಣ್ಯಪುರವನ್ನು ತನ್ನ ರೌಡಿಸಂ ನೆಲೆಯಾಗಿಸಿಕೊಂಡಿದ್ದ ಸೈಕಲ್ ರವಿ, ಬೆಂಗಳೂರು ದಕ್ಷಿಣ ಭಾಗ, ಕೆಂಗೇರಿ, ಜ್ಞಾನಭಾರತಿ, ಮೈಕೋ ಲೇಔಟ್, ಕೆಪಿ ಅಗ್ರಹಾರ, ಯಶವಂತಪುರ, ರಾಮಮೂರ್ತಿನಗರಗಳಲ್ಲಿ ಈತನ ರೌಡಿ ಚಟುವಟಿಕೆಗಳಿದ್ದವು. ಬೆಂಗಳೂರು ಹೊರವಲಯದಲ್ಲೂ ಕ್ರೀಯಾಶೀಲನಾಗಿದ್ದ ಈತ ಎಲ್ಲ ಕಡೆಯಲ್ಲೂ ತನ್ನ ಸಹಚರರ ತಂಡ ಕಟ್ಟಿಕೊಂಡಿದ್ದ.

      ವಿರೋಧಿ ಗ್ಯಾಂಗ್‍ಗಳ ಮಾಹಿತಿ ಕಲೆ ಹಾಕಲು ಮತ್ತು ರೌಡಿ ಚಟುವಟಿಕೆ ನಡೆಸಲು ವ್ಯವಸ್ಥಿತ ಜಾಲ ರೂಪಿಸಿಕೊಂಡಿದ್ದ. ಪೊಲೀಸ್ ಇಲಾಖೆಯಲ್ಲೇ ಮಾಹಿತಿದಾರರನ್ನಿಟ್ಟುಕೊಂಡು ತನ್ನ ವಿರುದ್ಧದ ಕಾರ್ಯಾಚರಣೆಗಳ ಮಾಹಿತಿಯನ್ನು ತಿಳಿದುಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದನು.

ಮುಳ್ಳು ತಂತಿ ಬ್ಯಾಟ್:

      ಆರು ಕೊಲೆ ಮತ್ತು ನಾಲ್ಕು ಕೊಲೆ ಯತ್ನಗಳಲ್ಲಿ ಭಾಗಿಯಾಗಿರೋ ಸೈಕಲ್ ರವಿ ಕುಖ್ಯಾತನಾಗಿರುವುದು ಅಪಹರಣ ಕಿರುಕುಳಗಳಿಂದ. ಈತನ ವಿರುದ್ಧ ಹದಿನೈದು ಅಪಹರಣ ಪ್ರಕರಣಗಳಿವೆ. ಇವು ದಾಖಲಾಗಿರುವ ಕೇವಲ ದಾಖಲಾಗಿರುವ ಕೃತ್ಯಗಳಷ್ಟೇ ಈತನಿಗೆ ಹದರಿ ದೂರು ನೀಡದಿರುವ ಪ್ರಕರಣಗಳು ಸಾಕಷ್ಟಿವೆ.

      ಅಧಿಕಾರಿಗಳು. ಉದ್ಯಮಿಗಳು, ವ್ಯಾಪಾರಸ್ಥರ ಕಿಡ್ನಾಪ್ ಮಾಡಿ ಹಣ ಸುಲಿಯುವುದು ಒಂದು ಕಡೆಗಾದರೆ, ತನ್ನ ವಿರೋಧಿಗಳನ್ನು ಅಪಹರಿಸಿ ಕಿರುಕುಳ ನೀಡುತ್ತಿದ್ದ. ನಗರದ ಹೊರವಲಯದ ನಿರ್ಜನ ಪ್ರದೇಶಗಳು, ಗುಡ್ಡಗಾಡುಗಳಿಗೆ ವಿರೋಧಿಗಳನ್ನು ಕರೆದೊಯ್ದು ಕ್ರಿಕೆಟ್ ಬ್ಯಾಟ್‍ಗೆ ಮುಳ್ಳು ತಂತಿ ಸುತ್ತಿ ಮನಬಂದಂತೆ ಥಳಿಸುತ್ತಿದ್ದ. ಆ ಏಟು ತಿಂದವರು ಮತ್ತೆ ಆತನ ತಂಟೆಗೆ ಹೋಗುತ್ತಲೇ ಇರಲಿಲ್ಲ. ತನ್ನ ಕೊಲೆಗೆ ವಿರೋಧಿ ಗ್ಯಾಂಗ್ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕರೆ ಅಂತವರನ್ನು ಅಪಹರಿಸಿ ಮುಳ್ಳು ತಂತಿಯ ಬೇಸ್ ಬಾಲ್‍ನಲ್ಲಿ ಮನಬಂದಂತೆ ಹೊಡೆದು ಪಾಠ ಕಲಿಸುತ್ತಿದ್ದ.

ಬನಶಂಕರಿ ರೌಡಿ:

      ಕೆಪಿ ಅಗ್ರಹಾರದವನಾದ ಸೈಕಲ್ ರವಿ ಸಣ್ಣಪುಟ್ಟ ಗಲಾಟೆಗಳಲ್ಲಿ ಭಾಗಿಯಾಗುವ ಮೂಲಕ ಪಾತಕಲೋಕಕ್ಕೆ ಕಾಲಿಟ್ಟಿದ್ದ. ಕಳ್ಳತನ, ಸುಲಿಗೆ, ಹಲ್ಲೆ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಸೈಕಲ್ ರವಿ ಮೇಲೆ 1998 ರಲ್ಲಿ ಮೊದಲ ಬಾರಿಗೆ ಬನಶಂಕರಿ  ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು ಹೊರವಲಯವಾಗಿದ್ದ ಸುಬ್ರಹ್ಮಣ್ಯಪುರವನ್ನು ತನ್ನ ಕಾರ್ಯ ಚಟುವಟಿಕೆಗಳಿಗೆ ಅಡ್ಡೆ ಮಾಡಿಕೊಂಡಿದ್ದ. ಕುಖ್ಯಾತ ರೌಡಿ ಲಿಂಗನ ಕೊಲೆ, ಕೆಂಗೇರಿಯಲ್ಲಿ ಜಾನಿ ಮತ್ತು ಟಾಮಿ ಎಂಬ ರೌಡಿಗಳ ಜೋಡಿ ಕೊಲೆ, ಕತ್ತರಿಗುಪ್ಪೆ ಲಿಂಗ, ಬೆಂಕಿ ಅಲಿಯಾಸ್ ವೆಂಕಿ ಕೊಲೆ ಪ್ರಕರಣಗಳಲ್ಲಿ ಈತ ಮೊದಲನೇ ಆರೋಪಿ. ಲಾಲ್‍ಬಾಗ್ ಬಳಿ ನಡೆದಿದ್ದ ಚಂದ್ರು ಎಂಬಾತನ ಕೊಲೆ ಪ್ರಕರಣದಲ್ಲಿಯೂ ಸೈಕಲ್ ರವಿ ಮೊದಲನೇ ಆರೋಪಿಯಾಗಿದ್ದಾನೆ.

ಕೊರಂಗು ಕೊಲೆಗೆ ಸ್ಕೆಚ್:

      ಕುಖ್ಯಾತ ರೌಡಿ ಕೊರಂಗು ಕೃಷ್ಣನ ಹತ್ಯೆಗೆ ಯತ್ಬಿಸಿದ್ದು ಸೈಕಲ್ ರವಿಗೆ ಪಾತಕಲೋಕದಲ್ಲಿ ದೊಡ್ಡ ಹೆಸರು ತಂದುಕೊಟ್ಟಿತ್ತು. 2006 ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕೊರಂಗು ಕೃಷ್ಣನನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಹಿರಿಯೂರು ಬಳಿಯ ಡಾಬಾ ಒಂದರಲ್ಲಿ ಹೆಬ್ಬೆಟ್ ಮಂಜ ಮತ್ತು ಸೈಕಲ್ ರವಿ ತಂಡ ದಾಳಿ ಮಾಡಿತ್ತು. ಪೊಲೀಸರ ಸಮ್ಮುಖದಲ್ಲೇ ಸೈಕಲ್ ರವಿ ಕೊರಂಗು ಮೇಲೆ ದಾಳಿ ಮಾಡಿ ಆತನ ಕೈ ಕತ್ತರಿಸಿದ್ದ. ಕೊರಂಗು ಮೇಲೆ ದಾಳಿ ವೇಳೆ ಕೊರಂಗು ಕೃಷ್ಣನ ಶಿಷ್ಯ ದೀಪುವನ್ನ ಕತ್ತರಿಸಿ ಕೊಂದು ಹಾಕಿದ್ದ. ಇನ್ನು ಮಂಡ್ಯದ ರೌಡಿಶೀಟರ್ ಜಡೇಜಾ ರವಿ ಹತ್ಯೆಯಲ್ಲೂ ಸೈಕಲ್ ರವಿಯ ಕೈವಾಡ ಇತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡಂತಸ್ತಿನ ಮನೆ

      ರಾಜರಾಜೇಶ್ವರಿ ನಗರದಲ್ಲಿ ಎರಡು ಹಂತಸ್ತಿನ ಮನೆ ಮಾಡಿಕೊಂಡಿದ್ದ ಸೈಕಲ್ ರವಿ, ಯಾರಿಗೂ ಆ ಮನೆಯ ಗುಟ್ಟು ಬಿಟ್ಟು ಕೊಡದೇ ರಹಸ್ಯವಾಗಿ ವಾಸ ಮಾಡುತ್ತಿದ್ದ. ರೌಡಿ ಸಹಚರರಿಗೂ ತನ್ನ ಮನೆಯ ವಿಳಾಸ ತಿಳಿಯದಂತೆ ನೋಡಿಕೊಂಡಿದ್ದ. ರಾಜರಾಜೇಶ್ವರಿ ನಗರದಲ್ಲಿ ಯಾವುದೇ ರೌಡಿ ಚಟುವಟಿಕೆ ನಡೆಸದೇ  ಪೊಲೀಸರಿಗೆ ಅನುಮಾನ ಬರದಂತೆ ನೋಡಿಕೊಂಡಿದ್ದ.

      ಅರ್ಧಕ್ಕರ್ಧ ಬೆಂಗಳೂರಿನ ಭೂಗತ ಜಗತ್ತನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಈತ ಸುಶಿಕ್ಷಿತರೇ ಇರುವ, ಶ್ರೀಮಂತರೇ ವಾಸಿಸುವ ರಾಜರಾಜೇಶ್ವರಿ ನಗರವನ್ನು ತನ್ನ ವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದ. ಈತ ರಾಜರಾಜೇಶ್ವರಿ ನಗರದಲ್ಲಿ ಮನೆ ಮಾಡಿಕೊಂಡಿದ್ದಾನೆ ಅನ್ನೋ ಮಾಹಿತಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮತ್ತು ಇನ್‍ಸ್ಪೆಕ್ಟರ್ ಪ್ರಕಾಶ್‍ಗೆ ಸಿಕ್ಕಿತ್ತು. ಅತ್ಯಂತ ರಹಸ್ಯವಾಗಿ ಕಾರ್ಯಾಚರಣೆಗಿಳಿದು ಆತ ಮನೆಗೆ ಬರುವ ಹಾದಿಯಲ್ಲಿ ಸುತ್ತುವರೆದು ಗುಂಡು ಹಾರಿಸಿ ಬಂಧಿಸಿದ್ದಾರೆ.

ಪೊಲೀಸರೇ ಪಾಲುದಾರರು:

      ರೌಡಿ ಶೀಟರ್ ಸೈಕಲ್ ರವಿ ಅಲಿಯಾಸ್ ಎಂ ರವಿಕುಮಾರನ ಕೋಟ್ಯಾಂತರ ಆಸ್ತಿಗೆ ಪೊಲೀಸರೇ ಪಾಲುದಾರರು ಎಂಬ ಅಸಲಿ ಸತ್ಯ ಬಯಲಾಗಿದೆ. ಪೊಲೀಸರು ಪ್ರತಿ ತಿಂಗಳು ಸೈಕಲ್ ರವಿ ಬಳಿ ಹಣ ಹೂಡಿಕೆ ಮಾಡುತ್ತಿದ್ದರು. ಇದೇ ಹಣವನ್ನು ಬಂಡವಾಳವಾಗಿ ರವಿ ಜೂಜಾಟದಲ್ಲಿ ತೊಡಗಿಸುತ್ತಿದ್ದನು. ಹೀಗಾಗಿ ಪೆÇಲೀಸರು ಮತ್ತು ರವಿ ಮಧ್ಯೆ ವ್ಯವಹಾರ ನಡೆಯುತ್ತಿತ್ತು. ಈ ಕಾರಣದಿಂದಲೇ ರವಿ  ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಎಂಬ ಅಚ್ಚರಿಯ ವಿಷಯ ಸಿಸಿಬಿ ಪೊಲೀಸರ ತನಿಖೆಯಲ್ಲಿ ಹೊರ ಬಂದಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here