ಕುಡಿಯವ ನೀರಿಗೆ ತೊಂದರೆ ಆಗದಂತೆ ಎಚ್ಚರವಹಿಸಿ :ಕೃಷಿ ಸಚಿವ ಶಿವಶಂಕರರೆಡ್ಡಿ

0
7

 ತುಮಕೂರು:

      ಯಾವುದೇ ಹಳ್ಳಿಯಲ್ಲೂ ಕುಡಿಯುವ ನೀರಿಗೆ ತೊಂದರೆ ಆಗದಂತೆ, ರಾಸುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಶಿವಶಂಕರರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಸಚಿವ ಶಿವಶಂಕರರೆಡ್ಡಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ತಂಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರವಾಸ ನಡೆಸಿ, ನರೇಗಾ ಯೋಜನೆ ಕಾಮಗಾರಿಗಳು ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವ ಕುರಿತು ಅಧ್ಯಯನ ನಡೆಸಿತು. ನಂತರ ನಗರದಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಕಾಮಗಾರಿಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

      ಬೇಡಿಕೆ ಇರುವ ಕಡೆ ಮೇವಿನ ಕಿಟ್ ವಿತರಣೆ, ಎಲ್ಲಾ ಗ್ರಾಮಗಳಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗುತ್ತಿದೆ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ವಿಫಲವಾಗಿದೆ, ಕುಡಿಯುವ ನೀರು, ಜಾನುವಾರುಗಳ ಮೇವಿಗೆ ತೊಂದರೆ ಆಗಿದೆ. ಪರಿಸ್ಥಿತಿಯ ತೀವ್ರತೆ ಅರ್ಥ ಮಾಡಿಕೊಂಡು ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಗಮನಹರಿಸಿ ಎಂದು ಸೂಚಿಸಿದರು.

      ಮಳೆ ಇಲ್ಲದೆ 13 ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ. 16 ಸಾವಿರ ಕೋಟಿ ರೂನಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು 2434 ಕೋಟಿ ರೂ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ, ಹಣ ಬಿಡುಗಡೆಯಾದ ನಂತರ ನಷ್ಟಕ್ಕೊಳಗಾದ ರೈತರ ಬ್ಯಾಂಕ್ ಅಕೌಂಟ್‍ಗಳಿಗೆ ಪರಿಹಾರದ ಮೊತ್ತ ಜಮಾ ಮಾಡಲಾಗುವುದು ಎಂದರು.

      ರಾಜ್ಯ ಸರ್ಕಾರ ಎರಡು ಪ್ರತಿ ತಾಲ್ಲೂಕಿಗೆ ತಲಾ ಒಂದು ಕೋಟಿ ರೂ ಎರಡು ಹಂತದಲ್ಲಿ ಬಿಡುಗಡೆ ಮಾಡಿದೆ, ಹಣವನ್ನು ಪರಿಹಾರ ಕಾರ್ಯಕ್ರಮಗಳಿಗೆ ಸಮರ್ಪಕವಾಗಿ ಖರ್ಚು ಮಾಡುವಂತೆ ಹೇಳಿದರು.

      ಇಂಧನ ಸಚಿವ ಡಿ ಕೆ ಶಿವಕುಮಾರ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 8-10 ಕೃಷಿ ಹೊಂಡ ನಿರ್ಮಾಣ ಮಾಡಿ, ಅಂತರ್ಜಲಮಟ್ಟ ಸುಧಾರಣೆಯಾಗಲಿ, ವರ್ಷಕ್ಕೆ ಗ್ರಾಮಪಂಚಾಯ್ತಿಗೆ 5 ಕೋಟಿ ರೂ ಖರ್ಚು ಮಾಡಿ ಎಂದರು.

      ಬರಗಾಲದ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ತೃಪ್ತಿ ತಂದಿಲ್ಲ, ಪ್ರತಿ ಬಾರಿಯೂ ಜಿಲ್ಲೆ ಬರಗಾಲಕ್ಕೆ ತುತ್ತಾಗುತ್ತಿರುವ್ಯದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿ ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡರು ಸಲಹೆ ಮಾಡಿದರು.

      ಕೃಷಿ ಹೊಂಡ, ಚೆಕ್‍ಡ್ಯಾಂ, ಗೋಕಟ್ಟೆ, ಕೆರೆ ಹೂಳೆತ್ತುವ ಕಾಮಗಾರಿಗಳು, ಕುಡಿಯುವ ನೀರು, ಮೇವು ಪೂರೈಕೆ ಬಗ್ಗೆ ತಾಲ್ಲೂಕು ಪಂಚಾಯ್ತಿ ಇಓ, ಪಿಡಿಓಗಳ ಸಭೆ ನಡೆಸಿ ಇಷ್ಟು ದಿನದಲ್ಲಿ ಇಷ್ಟು ಕೆಲಸ ಆಗಬೇಕು ಎಂದು ನಿಗಧಿ ಮಾಡಬೇಕು ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಜಿಪಂ ಸಿಇಓಗೆ ಸೂಚನೆ ನೀಡಿದರು.

      ಹೊಸದಾಗಿ ಕೊರೆದ ಕೊಳವೆ ಬಾವಿಗಳಿಗೆ ಪಂಪು ಮೋಟಾರ್ ಅಳವಡಿಸುವ ವೇಳೆಗೆ ಅವು ಬತ್ತಿಹೋಗಿರುತ್ತವೆ, ಆಯಾ ಕೆಲಸಗಳನ್ನ ಆಯಾ ಸಮಯದಲ್ಲೇ ಮಾಡಬೇಕು ಎಂದು ಸಂಸದ ಚಂದ್ರಪ್ಪ ಹೇಳಿದರು.

      ಇದಕ್ಕೆ ಧ್ವನಿಗೂಡಿಸಿದ ಸಣ್ಣ ನೀರಾವರಿ ಸಚಿವ ಎಸ್ ಆರ್ ಶ್ರೀನಿವಾಸ್, ಕೊಳವೆ ಬಾವಿ ಬತ್ತಿಹೋದಾಗ ಹೊಸ ಬಾವಿ ಕೊರೆಯಲು ಅವಕಾಶ ಕೊಡಬೇಡಿ, ಹಳೆ ಬಾವಿಯನ್ನ ರೀ ಬೋರ್ ಮಾಡುವುದು ಉತ್ತಮ ಎಂದು ಸಲಹೆ ಮಾಡಿದರು.

      ಕೆರೆಗಳ ಒತ್ತೂವರಿ ತೆರವು ಮಾಡಿ ಬೇಲಿ ಹಾಕಬೇಕು, ಹೂಳು ತೆಗೆದು ಮಳೆ ನೀರು ಹೆಚ್ಚು ಸಂಗ್ರಹವಾಗುವಂತೆ ಅಧಿಕಾರಿಗಳು ಕಾಳಜಿವಹಿಸಬೇಕು ಎಂದು ಸಣ್ಣ ಕೈಗಾರಿಕೆ ಸಚಿವ ವೆಂಕಟರಮಣಪ್ಪ ಹೇಳಿದರು.

      ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಪಂ ಸಿಇಓ ಅನೀಸ್ ಕಣ್ಮಣಿ ಜಾಯ್, ಅಡಿಷನಲ್ ಎಸ್ಪಿ ಶೋಭಾರಾಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

 
ಸ್ಥಳೀಯವಾಗಿ ಮೇವು ಬೆಳೆಸಿ:

      ಹೊರಗಿನಿಂದ ಮೇವು ಖರೀದಿಸಿ ತರುವ ಬದಲು ಸ್ಥಳೀಯ ರೈತರು ಮೇವು ಬೆಳೆದು ನೀಡುವಂತೆ ಪ್ರೋತ್ಸಾಹಿಸಿ, ರೈತರಿಗೂ ನಷ್ಟವಾಗದಂತೆ ಮೇವಿಗೆ ಬೆಲೆ ನಿಗದಿ ಮಾಡಿ ಖರೀದಿಮಾಡಿ ಎಂದು ಸಚಿವ ಡಿ ಕೆ ಶಿವಕುಮಾರ್ ಸಲಹೆ ಮಾಡಿದರು.

      ನೀರಿನ ಅನುಕೂಲವಿದ್ದು ಜಮೀನು ಇರುವ ರೈತರು, ಸ್ಥಳವನ್ನು ಗುರುತಿಸಿ, ರೈತರು ಮೇವು ಬೆಳೆಯಲು ಪ್ರೋತ್ಸಾಹಿಸಿ, ಸ್ಥಳೀಯ ಅಧಿಕಾರಿಗಳು ಇದರ ಉಸ್ತುವಾರಿ ನಿರ್ವಹಿಸಲಿ ಎಂದರು.

      ಗೋಶಾಲೆ ತೆರೆಯುವ ಮೊದಲು ಬೇಡಿಕೆಯ ಮೇವು ಸಂಗ್ರಹಿಸಿಕೊಳ್ಳಿ, ಆಮೇಲೆ ಪರದಾಡುವುದು ಬೇಡ ಎಂದು ಸಚಿವ ವೆಂಕಟರಮಣಪ್ಪ ಅಧಿಕಾರಿಗಳಿಗೆ ಹೇಳಿದರು.

      ವಿದ್ಯುತ್ ಕೊರತೆ ಹೆಚ್ಚಾಗಿದೆ, ಬೆಳೆಗೆ ನೀರು ಹಾಯಿಸಲು ರಾತ್ರಿ ವೇಳೆ ಕರೆಂಟ್ ಕೊಡ್ತೀರಿ, ಕತ್ತಲಲ್ಲಿ ಕಾಡು ಪ್ರಾಣಿ, ವಿಷಜಂತುಗಳ ಕಾಟ, ಹಗಲು ವೇಳೆ ಕರೆಂಟ್ ನೀಡಿ ಎಂದು ಮಧುಗಿರಿ ತಾಲ್ಲೂಕಿನ ರೈತರೊಬ್ಬರು ಕೇಳಿದರು.

      ಬೆಳಿಗ್ಗೆ 7 ಗಂಟೆಗೇ ಕರೆಂಟ್ ಕೊಡಲು ಸಿದ್ದ, ನಿಮ್ಮ ಶಾಸಕರು, ಅಧಿಕಾರಿಗಳು ತೀಮಾನ ಮಾಡಿ ತಿಳಿಸಲಿ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here