ಕೃಷಿಕರ ಜೀವನಕ್ಕೆ ಲವಲವಿಕೆ ನೀಡುವ “ ಹೊರಬೀಡು”

0
32

 ತೋವಿನಕೆರೆ:

      ಮುಂಗಾರು ಪ್ರಾರಂಭವಾದ ನಂತರ ಎರಡು ತಿಂಗಳು ಕೃಷಿಯ ಚಟುವಟಿಕೆಗೆ ತೊಡಗಿಸಿಕೊಳ್ಳುವ ರೈತರು “ಹೊರಬೀಡು” ಕಾರ್ಯಕ್ರಮವನ್ನು ನಡೆಸಿ ದಿನ ಪೂರ್ತಿ ತಮ್ಮ ಕುಟುಂಬಗಳ ಜೊತೆ ಜಮೀನುಗಳಲ್ಲಿ ಕಾಲ ಕಳೆಯುವ ಸಂಪ್ರದಾಯ ಅನೇಕ ಶತಮಾನಗಳಿಂದ ತೋವಿನಕೆರೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆದು ಕೊಂಡು ಬಂದಿದೆ.

      ತುಮಕೂರು ತಾಲ್ಲೂಕು ಕೋರಾ ಹೋಬಳಿ ನಂದಿಹಳ್ಳಿ ರೈತರು ಮಂಗಳವಾರ ಹೊರಬೀಡು ಕಾರ್ಯಕ್ರಮವನ್ನು ಸಂಪ್ರದಾಯ ಬದ್ಧವಾಗಿ ನಡೆಸಿದರು.

      ಅಂದು ಬೆಳಗ್ಗೆ ಜನರು ಅಡುಗೆ ಮಾಡಲು ಬೇಕಾದ ವಸ್ತುಗಳು, ಸಾಕು ಪ್ರಾಣಿಗಳು ಸಮೇತ ಮನೆಗಳನ್ನು ತೊರೆದು ತಮ್ಮ ಜಮೀನುಗಳಲ್ಲಿ, ಕೆಲವರು ತಮಗ ಇಷ್ಟವಾದ ಮಾವು, ಹಲಸಿನ ಮರಗಳ ಕೆಳಗೆ, ತಾತ್ಕಲಿಕವಾಗಿ ನೆರಳು ನಿರ್ಮಿಸಿಕೊಂಡು ವಾಸ್ತವ್ಯ ಮಾಡಿದರು. ದಿನಪೂರ್ತಿ ಅಡುಗೆಯನ್ನು ತಯಾರಿಸಿಕೊಂಡು ಊಟ ಮಾಡಿದರು. ಗ್ರಾಮದ ಹೆಚ್ಚಿನ ರೈತರು ಮಾಂಸಹಾರಿಗಳು ಆಗಿರುವುದರಿಂದ ತಯಾರಿಯು ಬಿರುಸಿನಿಂದ ನಡೆದಿತ್ತು. ರೈತರು ಕುಟುಂಬದವರ ಉತ್ಸಾಹದಿಂದ ಆಹಾರ ಸೇವಿಸಿದ್ದು ಎಲ್ಲಾ ಕಡೆಯು ಕಂಡು ಬಂತು.

      ಗ್ರಾಮಸ್ಥರು ಗ್ರಾಮ ತೊರೆಯುವ ಮುನ್ನ ತಮ್ಮ ಮನೆಗಳಿಗೆ ಬೀಗ ಹಾಕಿ, ಮುಳ್ಳುಗಳ ಕೊಂಬೆಗಳನ್ನು ತಂದು ಬಾಗಿಲಿಗೆ ಅಡ್ಡವಾಗಿ ಇಡುತ್ತಾರೆ. ರಸ್ತೆಗಳಿಗೆ ಅಡ್ಡವಾಗಿ ಮುಳ್ಳಿನ ಬೇಲಿಯನ್ನು ನಿರ್ಮಿಸುತ್ತಾರೆ. ಗ್ರಾಮವನ್ನು ಕಾವಲು ಕಾಯಲು ವ್ಯಕ್ತ್ತಿಗಳನ್ನು ನೇಮಿಸಿರುತ್ತಾರೆ. ಪಕ್ಕದ ಹಾಲದೊಡ್ಡೇರಿಯ ಪುಟ್ಟರಾಮನಾಯ್ಕ ಮತ್ತು ಕೆಂಪಯ್ಯ ಗ್ರಾಮದ ಒಳಕ್ಕೆ ಯಾರೂ ಬರದಂತೆ ಕಾಯುತ್ತಿರುವುದು ಕಂಡು ಬಂದಿತು.
ಸಂಜೆ ಗ್ರಾಮದ ಕಡೆ ಬರುವಾಗ ಮೂರು ದಾರಿ ಕೂಡುವ ಜಾಗದಲ್ಲಿ ಮನೆಯಲ್ಲಿ ಹೆಚ್ಚು ಬಳಕೆ ಮಾಡಿರುವ ವಸ್ತುಗಳನ್ನು ಬೆಂಕಿಯಲ್ಲಿ ಹಾಕಿ ಸುಡುತ್ತಾರೆ. ದೇವಾಲಯದಲ್ಲಿ ಪೂಜೆ ನಡೆಸಿ ತೀರ್ಥವನ್ನು ಮನೆಗಳಿಗೆ ತೆಗೆದುಕೊಂಡು ಹೋಗಿ ಎಲ್ಲಾ ಕಡೆ ಚಿಮುಕಿಸುತ್ತಾರೆ. ಹೊಸ ವಸ್ತುಗಳೊಂದಿಗೆ ಹೊಸ ಜೀವನ ಪ್ರಾರಂಭಿಸುತ್ತಾರೆ.

      ಮಳೆ ಇಲ್ಲದೆ ಬೆಳೆ ಒಣಗುತ್ತಿರುವುದನ್ನು ನೋಡಲಾಗದೆ ರೈತರು ಸಭೆ ಸೇರಿ ಹೊರಬೀಡು ಮಾಡಲು ತೀರ್ಮಾನ ಮಾಡಿದರು. ಕೃಷಿಕರು ಕಷ್ಟ ದಿನಗಳು ಬಂದಾಗ, ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳು ಕಂಡು ಬಂದಾಗ, ಕಹಿ ಘಟನೆಗಳು ನಡೆದಾಗ ದೇವರ ಮೊರೆ ಹೋಗಿ ಹೊರಬೀಡು ಮಾಡುತ್ತೇವೆ. ಇದು ನಮ್ಮ ಮುತ್ತಾತಂದಿರ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿಯಾಗಿದೆ ಎಂದು ಗ್ರಾಮವಾಸಿ ಕಾಮರಾಜು ತಿಳಿಸಿದರು.

LEAVE A REPLY

Please enter your comment!
Please enter your name here