ಕೆಂಕೆರೆ ಅನೈರ್ಮಲ್ಯ ತಾಣ ವೀಕ್ಷಿಸಿ ನೈರ್ಮಲ್ಯಕ್ಕೆ ಸೂಚಿಸಿದ ಸಿಇಓ

0
19

 ಹುಳಿಯಾರು:

      ಉದ್ಯೋಖಾತ್ರಿ ಹಣಕ್ಕಾಗಿ ಗ್ರಾಪಂ ಸದಸ್ಯ ನಾಗಣ್ಣ ಆತ್ಮಹತ್ಯೆಗೆ ಯತ್ನಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಂಶ ಅರಿಯಲು ಶುಕ್ರವಾರ ಕೆಂಕೆರೆ ಗ್ರಾಮಕ್ಕೆ ಬಂದಿದ್ದ ಜಿಪಂ ಸಿಇಓ ಅವರು ನಾಗಣ್ಣನ ಕಾಮಗಾರಿ ವೀಕ್ಷಿಸದೆ ಊರಿನ ಚರಂಡಿ, ನೀರು, ಬೀದಿದೀಪದ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಿ ನಿರ್ಗಮಿಸಿದರು.

      ನಾಗಣ್ಣ ಅವರು ಮಾಡಿದ್ದಾರೆ ಎನ್ನಲಾದ ಕಾಮಗಾರಿ ದಾಖಲಾತಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲೇ ಊರಿನ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಗ್ರಾಮಸ್ಥರು ಎಳೆಎಳೆಯಾಗಿ ಬಿಚ್ಚಿಟ್ಟರು. ಶುದ್ಧ ನೀರಿನ ಘಟಕವಿದ್ದರೂ ಶುದ್ಧ ನೀರು ಸಿಗುತ್ತಿಲ್ಲ. ಚರಂಡಿಗಳಲ್ಲಿ ಕೊಳಚೆ ತುಂಬಿ ಸೊಳ್ಳೆಗಳ ಆಶ್ರಯತಾಣವಾಗಿವೆ ಹೀಗೆ ಅನೇಕ ಸಮಸ್ಯೆಗಳನ್ನು ವಿವರಿಸಿದರು. ಅಲ್ಲದೆ ಖುದ್ದು ವೀಕ್ಷಿಸುವಂತೆ ಪಟ್ಟು ಹಿಡಿದರು.

      ತಕ್ಷಣ ಗ್ರಾಮ ಪ್ರದಕ್ಷಿಣೆಗೆ ಹೊರಟ ಸಿಇಓಗೆ ಗ್ರಾಪಂ ಕಚೇರಿ ಹಿಂಭಾಗದಲ್ಲೇ ಗಿಡಗಂಟೆಗಳು ಬೆಳೆದಿದ್ದರೂ ಕ್ಲೀನ್ ಮಾಡದ ಬಗ್ಗೆ ಗ್ರಾಮಸ್ಥರು ದೂರು ನೀಡಿದರು. ತಕ್ಷಣ ಪಿಡಿಓಗೆ ಇದೇನ್ರೀ ಇದು? ಕಚೇರಿ ಬಳಿಯೇ ಹೀಗಾದರೆ ಇನ್ನು ಊರಿನ ಗತಿ ಏನ್ರಿ? ಮೊದಲು ಕ್ಲೀನ್ ಮಾಡಿಸಿ ಎಂದರು. ನಂತರ ಶುದ್ಧ ನೀರಿನ ಘಟಕದ ವೀಕ್ಷಣೆಗೆ ಹೊಗುತ್ತಿರುವಾಗಲೇ ಮನೆಯಿಂದ ಹೊರ ಬಂದ ಗೃಹಿಣಿಯರು ಚರಂಡಿ ನೋಡಿ ಮೇಡಂ ಕ್ಲೀನ್ ಇಲ್ಲದೆ ಕೊಳಚೆಯಿಂದ ತುಂಬಿ ಹೋಗಿದೆ. ಸೊಳ್ಳೆಗಳು ಹೆಚ್ಚಾಗಿ ಮನೆಯಲ್ಲಿ ಇರಲಾಗದಷ್ಟು ಸೊಳ್ಳೆಗಳ ಕಾಟವಾಗಿದೆ. ಮೊದಲು ಚರಂಡಿ ಕ್ಲೀನ್ ಮಾಡಿಸಿ ಎಂದು ಮನವಿ ಮಾಡಿದರು.

      ನಂತರ ಪುರಾತನ ಕಲ್ಯಾಣಿ ಬಳಿ ಕರೆದೊಯ್ದ ಗ್ರಾಮಸ್ಥರು, ಸೂಕ್ತ ನಿರ್ವಹಣೆ ಇಲ್ಲದೆ ಕಲ್ಯಾಣಿ ಕಲ್ಲುಗಳು ಕುಸಿಯುತ್ತಿದೆ. ಮೊದಲೇ ಜನನಿಬಿಡ ಪ್ರದೇಶದಲ್ಲಿ ಕಲ್ಯಾಣಿ ಇರುವುದರಿಂದ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಬೀಳುವ, ಕತ್ತಲಲ್ಲಿ ಓಡಾಡುವಾಗ ಬೀಳುವ ಭಯ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಹಾಗಾಗಿ ಕಲ್ಯಾಣಿಗೆ ಕಾಯಕಲ್ಪ ಕಲ್ಪಿಸಿ ಎಂದು ಮನವಿ ಮಾಡಿದರು. ತಕ್ಷಣ ಉದ್ಯೋಗಖಾತ್ರಿಯಲ್ಲಿ ಕಲ್ಯಾಣಿ ದುರಸ್ಥಿಗೆ ಅವಕಾಶವಿದೆ ಮಾಡಿಕೊಳ್ಳಿ ಎಂದರು. ಇದಕ್ಕೆ ಕೆಲವರು ಖಾತ್ರಿಯಲ್ಲಿ ಹಣ ಬರುವ ಖಾತ್ರಿನೇ ಇಲ್ಲವಾಗಿದ್ದು, ಬೇರೆಯಾವುದಾದರೂ ಯೋಜನೆಯಲ್ಲಿ ಮಾಡಿಕೊಡಿ ಎಂದರು. ಉದ್ಯೋಗಖಾತ್ರಿಯಲ್ಲಿ ಹಣ ಕೊಡಿಸುವ ಜವಾಬ್ದಾರಿ ನನ್ನದಾಗಿದ್ದು ಧೈರ್ಯವಾಗಿ ಮಾಡಿ ಎಂದರು.

      ನಂತರ ಶುದ್ಧ ನೀರಿನ ಘಟಕಗಳನ್ನು ವೀಕ್ಷಿಸಿದ ಸಿಇಓ ಎರಡು ಘಟಕಗಳಿದ್ದರೂ ಇಲ್ಲಿನ ಜನ ನೀರಿನ ಸಮಸ್ಯೆ ಎನ್ನುತ್ತಿದ್ದು, ಮುಂದಿನ ದಿನಗಳಲ್ಲಿ ದೂರು ಬಾರದಂತೆ ನಿರ್ವಹಣೆ ಮಾಡುವಂತೆ ಎಂಜಿನಿಯರ್ ಅವರಿಗೆ ಸೂಚಿಸಿದರು. ಅಲ್ಲದೆ ಗ್ರಾಮದ ರಸ್ತೆಗಳನ್ನು ವೀಕ್ಷಿಸಿದ ಅವರು ಉದ್ಯೋಗಖಾತ್ರಿಯಲ್ಲಿ ಗ್ರಾಮದ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆ ಮಾಡುವುದಾದರೆ ತುರ್ತಾಗಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here