ಕೆಂಕೆರೆ ಕಂದಾಯ ಪರಿಷ್ಕರಿಸಲು ಸಿಇಓ ಸೂಚನೆ

0
36

 ಹುಳಿಯಾರು:

      ಕಾಡಿನರಾಜ ನಾಗಣ್ಣನ ಆತ್ಮಹತ್ಯೆ ಪ್ರಕರಣದಿಂದಾಗಿ ಕೆಂಕೆರೆ ಗ್ರಾಮ ಪಂಚಾಯ್ತಿಗೆ ಶುಕ್ರವಾರ ಆಗಮಿಸಿದ್ದ ಜಿಪಂ ಸಿಇಓ ಗ್ರಾಪಂನ ಇತರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ಮಾಡಿದರು.

      ಕೆಂಕೆರೆ ಗ್ರಾಮ ಪಂಚಾಯ್ತಿಯಲ್ಲಿ ವಾರ್ಷಿಕ 12 ಲಕ್ಷ ರೂ. ಕಂದಾಯ ವಸೂಲಿಯಾಗಬೇಕಿದ್ದರೂ ಕೇಲವ 4.5 ಲಕ್ಷ ರೂ. ವಸೂಲಿ ಆಗಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಸ್ಥಳೀಯ ಆದಾಯ ಸಂಗ್ರಹಿಸದೆ ಕೇವಲ ಸರ್ಕಾರದ ಹಣದಲ್ಲಿ ಊರಿನ ಅಭಿವೃದ್ಧಿ ಅಸಾಧ್ಯ. ಹಾಗಾಗಿ ಕಟ್ಟುನಿಟ್ಟಿನಿಂದ ಕಂದಾಯ ಸಂಗ್ರಹಿಸುವಂತೆಯೂ ತಕ್ಷಣ ಗ್ರಾಮ ಸಭೆ ಕರೆದು ಕಂದಾಯ ಪರಿಷ್ಕರಿಸುವಂತೆಯೂ ಪಿಡಿಓಗೆ ಸೂಚಿಸಿದರು.

      ಕಳೆದ ಸಾಲಿನ 14 ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಇಲಾಖಾ ತನಿಖೆಯನ್ನು ಈಗಾಗಲೇ ನಡೆಸಲಾಗಿದ್ದು, ಅವ್ಯವಹಾರ ನಡೆದಿರುವ ಬಗ್ಗೆ ದೃಢಪಟ್ಟಿದೆ. ಹಾಗಾಗಿ ಅಂದಿನ ಪಿಡಿಓ ಅವರಿಂದ ಹಣ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಪ್ರಸಕ್ತ ಸಾಲಿನ ಕಾಮಗಾರಿಯನ್ನು ನಿಯವ್ಮದಂತೆ, ಅಕ್ರಮ ಸುಳಿಯದಂತೆ ಮಾಡುವಂತೆ ಸಲಹೆ ನೀಡಿದರು. ಜೊತೆಗೆ ಸದಸ್ಯರ ಮನವಿ ಮೇರೆಗೆ ಎಸ್‍ಸಿ., ಎಸ್‍ಟಿ ಮೀಸಲು ಹಣ 2.58 ಲಕ್ಷ ರೂ.ಗಳನ್ನು ಜನರಲ್ ಕಾಮಗಾರಿಗೆ ಬದಲಾಯಿಸಿ ಕೊಡುವುದಾಗಿ ಭರವಸೆ ನೀಡಿದರು.

      ಕಾರ್ಯದರ್ಶಿ ಹುದ್ದೆ ಖಾಲಿ ಇರುವ ಬಗ್ಗೆ ಗ್ರಾಮಸ್ಥರು ಗಮನ ಸೆಳೆದಾಗ ಹುಳಿಯಾರು ಗ್ರಾಪಂ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ್ದು, ಅಲ್ಲಿನ ಕಾರ್ಯದರ್ಶಿಯನ್ನು ಕೆಂಕೆರೆಗೆ ವರ್ಗಾಯಿಸುವುದಾಗಿ ತಿಳಿಸಿದರು. ವಾಟರ್ ಮ್ಯಾನ್‍ಗಳ ಸಂಬಳ ನೀಡದಿರುವ ಬಗ್ಗೆ ಖುದ್ದು ವಾಟರ್ ಮ್ಯಾನ್ ಆರೋಪ ಮಾಡಿದಾಗ ಕಂದಾಯ ವಸೂಲಿ ಮಾಡಿ ಬಾಕಿ ಉಳಿಸದಂತೆ ಸಂಬಳ ಪಾವತಿ ಮಾಡಿ ಹಾಗೂ ನಿವೃತ್ತ ವಾಟರ್ ಮ್ಯಾನ್‍ಗಳಿಗೆ ಹಾಲಿ ಖಾತೆಯಲ್ಲಿರುವ ಹಣದಲ್ಲೇ ಬಾಕಿ ಪಾವತಿ ಮಾಡಿ ಎಂದು ಅಧ್ಯಕ್ಷರಿಗೆ ಸೂಚಿಸಿದರು. ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಂಟೆಗಳ ತೆರವು ಮಾಡಿ ಸ್ವಚ್ಚತೆ ಕಾಪಾಡುವಂತೆ ನಿವೇಶನ ಮಾಲೀಕರಿಗೆ ನೋಟಿಸ್ ನೀಡುವಂತೆ ಹೇಳಿದರು.

      ಈ ಸಂದರ್ಭದಲ್ಲಿ ತಾಪಂ ಇಓ ಕೃಷ್ಣಾನಾಯ್ಕ, ಎಇಇ ಹೊನ್ನೇಶಪ್ಪ, ಸಹಾಯಕ ನಿರ್ದೇಶಕ ಹರೀಶ್, ಗ್ರಾಪಂ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಎಚ್.ಎಸ್.ಜಯಣ್ಣ, ಪಿಡಿಓ ತೇಜಸ್ವಿ, ಗ್ರಾಮಸ್ಥರಾದ ಕೆ.ಬಿ.ಚಂದ್ರಯ್ಯ, ಮಚ್ಚುಬಸವರಾಜು, ಬೆಂಕಿಬಸವರಾಜು, ಜಗದೀಶ್, ಶಿವಕುಮಾರ್, ದೊರೆಶೇಖರಯ್ಯ ಮತ್ತಿತರರು ಇದ್ದರು.
 

LEAVE A REPLY

Please enter your comment!
Please enter your name here