ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ಜೈಲ್ ಭರೋ

0
33

ದಾವಣಗೆರೆ:

      ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಹಾಗೂ ಜನಪರ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು, ಕೂಲಿಕಾರರು, ಕಾರ್ಮಿಕರು ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಜೈಲ್ ಭರೋ ಚಳವಳಿ ನಡೆಸಿದರು.

      ಇಲ್ಲಿನ ಪಾಲಿಕೆ ಆವರಣದಿಂದ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ, ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಡಿಸಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ, ಮುಖ್ಯದ್ವಾರಕ್ಕೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡ್‍ಗಳನ್ನು ಹತ್ತಿ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರಯ ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ಸಹ ನಡೆಯಿತು. ಬಳಿಕ ಪೊಲೀಸರು ಸುಮಾರು 120ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಭಟ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನತೆಗೆ ನೀಡಿದ ನಾನಾ ಭರವಸೆಗಳ ಪೈಕಿ ಒಂದೂ ಈಡೇರಿಸದೇ ನಂಬಿಕೆ, ವಿಶ್ವಾಸ ದ್ರೋಹ ಬಗೆದಿದೆ. ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ದೊಡ್ಡ ಭೂ ಮಾಲೀಕ ಬಂಡವಾಳ ಶಾಹಿಗಳ ಪರವಾದ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿರುವ ಜಾಗತೀಕರಣದ ನೀತಿಗಳನ್ನು ಮತ್ತಷ್ಟು ರಭಸದಿಂದ ಜಾರಿಗೊಳಿಸುತ್ತಿದ್ದು, ಇವು ಜನವಿರೋಧಿ ನೀತಿಗಳಾಗಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

      ಸಾಲ ಬಾಧಿತ ರೈತರ, ಕೂಲಿಕಾರರ, ದಲಿತರ, ಆದಿವಾಸಿಗಳ ಮತ್ತು ಸ್ತ್ರೀಶಕ್ತಿ ಸಂಘಗಳ ಎಲ್ಲಾ ಸಾಲಮನ್ನಾ ಮಾಡಬೇಕು. ಎಲ್ಲಾ ಕೂಲಿಕಾರರು, ಕಸುಬುದಾರರು, ದೇವದಾಸಿಯರು ಮತ್ತು ರೈತರಿಗೆ ಅಗತ್ಯದಷ್ಟು ಸಾಂಸ್ಥಿಕ ಸಾಲ ದೊರೆಯುವಂತೆ ಮತ್ತು ನಷ್ಟ ಅನುಭವಿಸಿ ಸಾಲಗಾರರಾದಾಗ ಸಾಲಬಾಧೆ ನಿವಾರಣೆಗಾಗಿ ಖಾಸಗಿ ಮತ್ತು ಸಾಂಸ್ಥಿಕ ಸಾಲವು ಸೇರಿದಂತೆ ಸಾಲಮನ್ನಾ ಅಥವಾ ಅಗತ್ಯ ನೆರವು ನೀಡುವ ಖುಣಮುಕ್ತ ಕಾಯ್ದೆಯನ್ನು ದೇಶವ್ಯಾಪ್ತಿಯಾಗಿ ಜಾರಿಗೆ ಬರುವಂತೆ ಅಂಗೀಕರಿಸಬೇಕು. ರೈತರ ಬೆಳೆಗೆ ವೈಜಾನಿಕವಾಗಿ ಲೆಕ್ಕಿಸಲಾದ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟು ಲಾಭಾಂಶ ಸೇರಿಸಿ, ನಿಗದಿಗೊಳಿಸಿದ ಕನಿಷ್ಠ ಬೆಂಬಲ ಬೆಲೆಯು ಖಾತ್ರಿಯಾಗಿ ಸಿಗುವಂತೆ ಕಾಯ್ದೆ ತರಬೇಕು. ಬೆಳೆ ವಿಮೆಯನ್ನು ರೈತ ಸ್ನೇಹಿಯಾಗಿಸಬೇಕು ಎಂದು ಒತ್ತಾಯಿಸಿದರು.

      ಎಲ್ಲಾ ನಿವೇಶನ ಹಾಗೂ ವಸತಿ ರಹಿತರಿಗೆ ಹಿತ್ತಲು ಸಹಿತ ಉಚಿತ ಮನೆಯನ್ನು ಕಟ್ಟಿಕೊಡಬೇಕು. ತರಕಾರಿ, ಹಣ್ಣು, ಹೈನುಗಾರಿಕೆ ಮತ್ತು ಪಶುಪಾಲನೆ ನಡೆಸಲು ಅಗತ್ಯ ನೆರವಿನ ಯೋಜನೆಯನ್ನು ರೂಪಿಸಬೇಕು. ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಅರ್ಹರಿಗೆ ತಲಾ 5 ಎಕರೆ ಜಮೀನನ್ನು ನೀಡಬೇಕು. ಇದಕ್ಕಾಗಿ ಪರಿಶಿಷ್ಟರ ಮತ್ತು ಇತರರ ಜನಸಂಖ್ಯೆ ಅನುಗುಣವಾಗಿ ಅನುದಾನದಲ್ಲಿ ಶೇ. 30ರಷ್ಟು ಅನುದಾನ ನೀಡಬೇಕು. ಈ ಹಿಂದೆ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲಾದ ಜಮೀನುಗಳನ್ನು ವಾಪಸ್ಸು ಪಡೆದು ಬಡವರಿಗೆ ಹಂಚಬೇಕು. ಬಗರ್‍ಹುಕುಂ ಬಡ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ರೈತರು, ಕೂಲಿಕಾರರು, ಕಾರ್ಮಿಕರು ಮತ್ತು ಕಸಬುದಾರರಿಗೆ ತಲಾ 5 ಸಾವಿರ ರೂ. ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸಮಾನ ಕನಿಷ್ಟ ವೇತನ 18 ಸಾವಿರ ನಿಗದಿಪಡಿಸಬೇಕು. ಗುತ್ತಿಗೆ-ಹೊರಗುತ್ತಿಗೆ ಮತ್ತಿತರ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಇ. ಶ್ರೀನಿವಾಸ್, ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ವಿ. ರೇಣುಕಮ್ಮ, ಸಿಐಟಿಯು ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹೆಚ್. ಆನಂದರಾಜು, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಭರಮಪ್ಪ, ಎಸ್‍ಎಫ್‍ಐ ಮಹಾಲಿಂಗಪ್ಪ, ನೀರತಡಿ ಬಸವರಾಜಪ್ಪ, ನಲ್ಕುಂದ ರಂಗಸ್ವಾಮಿ, ರಾಜಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here