ಕೇಂದ್ರ ಸರ್ಕಾರದ ಹಿಂದಿ ನೀತಿ ವಿರುದ್ದ ಆಕ್ರೊಶ

0
23

ಚಿತ್ರದುರ್ಗ:
                  ಬಲವಂತವಾಗಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಲಾಯಿತು.
                   ಗಾಂಧಿವೃತ್ತದಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಹಿಂದಿ ನೀತಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.
                   ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಟಿ.ರಮೇಶ್ ಮಾತನಾಡಿ ಕೇಂದ್ರ ಸರ್ಕಾರ ಸೆ.14 ರಂದು ಹಿಂದಿ ದಿವಸ್ ಆಚರಿಸುವ ಮೂಲಕ ಕರ್ನಾಟಕದಲ್ಲಿ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರುತ್ತ ಪ್ರಾದೇಶಿಕ ಭಾಷೆ ಕನ್ನಡಕ್ಕೆ ಅವಮಾನ ಮಾಡುತ್ತಿರುವುದನ್ನು ನೋಡಿಕೊಂಡು ನಾವುಗಳು ಸಹಿಸಿಕೊಂಡಿರುವುದಿಲ್ಲ. 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯೆ ಕರ್ನಾಟಕದಲ್ಲಿ ಪ್ರಥಮ ಭಾಷೆಯಾಗಬೇಕು. ಕನ್ನಡಿಗನೆ ಇಲ್ಲಿ ಸಾರ್ವಭೌಮ. ಹಾಗಾಗಿ ಕನ್ನಡಕ್ಕೆ ಆದ್ಯತೆ ಕೊಡದಿದ್ದರೆ ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
                   ಪ್ರಾದೇಶಿಕ ಭಾಷೆಗಳ ವಿರೋಧಿಯಾಗಿರುವ ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಭಾಷೆಯನ್ನು ಜನರ ಮೇಲೆ ಹೇರಿ ಅಕ್ಷಮ್ಯ ಅಪರಾಧವೆಸಗುತ್ತಿದೆ. ಹಿಂದಿ ದಿವಸ್ ನೆಪದಲ್ಲಿ ವಿವಿಧ ಕಚೇರಿಗಳಲ್ಲಿ ಹಿಂದಿ ಸ್ಪರ್ಧೆ ಏರ್ಪಡಿಸಿರುವುದನ್ನು ಅತ್ಯುಗ್ರವಾಗಿ ಖಂಡಿಸುತ್ತೇವೆ. ಭಾಷಾವಾರು ಪ್ರಾಂತ್ಯಗಳಿಂದ ಭಾರತ ರಚನೆಯಾಗಿದೆ. ದ್ರಾವಿಡ ಭಾಷೆ ಕನ್ನಡಕ್ಕೆ ತನ್ನದೆ ಆದ ಇತಿಹಾಸವಿದೆ. ಆದ್ದರಿಂದ ಕನ್ನಡಕ್ಕೆ ಕುತ್ತು ಬಂದರೆ ಹೋರಾಟದ ಮೂಲಕ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಇನ್ನು ಮುಂದಾದರೂ ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಅನ್ಯ ಭಾಷೆಗಳ ಪ್ರಭಾವ ಹೇರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
                  ಕರವೆ ಚಿತ್ರದುರ್ಗ ತಾಲೂಕು ಅಧ್ಯಕ್ಷ ಜಿ.ರಾಜಪ್ಪ, ನಗರಾಧ್ಯಕ್ಷ ಪಿ.ಟಿ.ರಮೇಶ್, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಲಕ್ಷ್ಮಣ, ತಾಲೂಕು ಮಹಿಳಾ ಅಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ, ಜಾಫರ್, ಸಂಚಾಲಕರುಗಳಾದ ಎಸ್.ಬಿ.ಗಣೇಶ್, ಸಿ.ಎನ್.ಪ್ರಕಾಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಷಂಷೀರ್, ಹೊಸದುರ್ಗ, ಮೊಳಕಾಲ್ಮುರು, ಚಳ್ಳಕೆರೆ, ಹೊಳಲ್ಕೆರೆ ತಾಲೂಕಿನ ಅಧ್ಯಕ್ಷರು ಸೇರಿದಂತೆ ವೇದಿಕೆಯ ನೂರಾರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here