ಕೇರಳ ಸಮಾಜಂನಿಂದ ಓಣಂ ಆಚರಣೆ

0
34

ತುಮಕೂರು
              ತುಮಕೂರು ನಗರದಲ್ಲಿರುವ ಕೇರಳ ಸಮಾಜಂ ವತಿಯಿಂದ ಓಣಂ ಆಚರಣೆ ಹಾಗೂ ಕೇರಳದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವು ನೀಡಿದವರನ್ನು ಸ್ಮರಿಸುವ ಕೃತಜ್ಞತಾ ಕಾರ್ಯಕ್ರಮವನ್ನು ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅವರು, ಇಲ್ಲಿನ ಕೇರಳಂ ಸಮಾಜದ ಸದಸ್ಯರು ಅಲ್ಲಿ ಉಂಟಾಗಿರುವ ಜಲಪ್ರಳಯದ ಗಂಭೀರತೆಯನ್ನು ಅರಿತು ಹಗಲು ರಾತ್ರಿ ಶ್ರಮಿಸಿದ್ದಾರೆ. ಇಲ್ಲಿಂದ ನಿರಾಶ್ರಿತರಿಗೆ ಬೇಕಾದ ಅಗತ್ಯ ಪರಿಕರಗಳನ್ನು ಪೂರೈಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಆಹಾರ, ಬಟ್ಟೆ ದಿನನಿತ್ಯದ ವಸ್ತುಗಳನ್ನು ಕ್ರೂಢೀಕರಿಸಿ ಅಲ್ಲಿನ ನಿರಾಶ್ರಿತರಿಗೆ ನೆರವಾಗಿದ್ದಾರೆ. ಕೇರಳಿಗರು ಸ್ವಾಭಿಮಾನಿಗಳು, ಸಾಹಸಿಗಳು, ವಿದ್ಯಾವಂತರೂ ಆಗಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಇವರು ಛಾಪು ಮೂಡಿಸಿದ್ದಾರೆ. ಎಲ್ಲಾ ರಂಗಗಳಲ್ಲಿಯೂ ಯಶಸ್ವಿ ಸಾಧನೆ ಮಾಡುವ ಉತ್ತಮ ಕಾರ್ಯನಿರ್ವಹಣೆಯ ಉದ್ಯೋಗಿಗಳಾಗಿ ರಾಷ್ಟ್ರದಲ್ಲಿ ಕೇರಳ ರಾಜ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶ್ಲಾಘಿಸಿದರು. ವಿದ್ಯಾವಂತರೇ ಹೆಚ್ಚು ಇರುವ ಕೇರಳ ರಾಜ್ಯದತ್ತ ಅನೇಕ ರಾಜ್ಯಗಳು ಮಾನವೀಯ ಸಹಾಯಹಸ್ತ ನೀಡಿವೆ. ಮುಂದಿನ ದಿನಗಳಲ್ಲಿ ಅವರು ಚೇತರಿಸಿಕೊಂಡು ಮುಂದೆ ಬರಲಿ. ಮತ್ತೆ ಆ ರಾಜ್ಯ ಹಿಂದಿನ ಸ್ಥಿತಿಯನ್ನು ಕಾಣುವಂತಾಗಲಿ ಎಂದು ಆಶಿಸಿದರು. ಕೇರಳದ ಜನ ರಾಷ್ಟ್ರದ ಯಾವುದೇ ಭಾಗಗಳಲ್ಲಿ ಪ್ರಕೃತಿ ವಿಕೋಪ ಎದುರಾದಾಗಲೂ ಸಹಾಯಹಸ್ತ ನೀಡಿರುವ ಉದಾಹರಣೆಗಳಿವೆ. ಮತ್ತೆ ಪ್ರಕೃತಿ ವಿಕೋಪದ ಪರಿಸ್ಥಿತಿಗಳು ಅವರನ್ನು ಕಾಡದಿರಲಿ ಎಂದರು.
                 ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜಾತ್ಯತೀತ, ಧರ್ಮಾತೀತ ವ್ಯಕ್ತಿಗಳಾಗಿ ಕೇರಳಿಗರು ಸಾಹಸಿಗರಾಗಿದ್ದಾರೆ. ಯಾವುದೇ ಭಾಗದಲ್ಲಿದ್ದರೂ ಅವರಿಗೆ ಸ್ಪಂದಿಸುವ ಮನೋಭಾವ ಅವರಲ್ಲಿದೆ. ನಮ್ಮ ದೇಶದಲ್ಲಿ ನೂರಕ್ಕೆ ನೂರರಷ್ಟು ವಿದ್ಯಾವಂತರಿರುವ ರಾಜ್ಯ ಕೇರಳ ರಾಜ್ಯ. ಆಗಸ್ಟ್ ಕೊನೆಯಲ್ಲಿ ಸಂಭವಿಸಿದ ಜಲಪ್ರಳಯದಿಂದ 4 ಜಿಲ್ಲೆಗಳು ತಲ್ಲಣಿಸಿ ಹೋದವು. ಇದಕ್ಕೆ ಸ್ಪಂದಿಸಿ ಅನೇಕರು ಸಹಾಯ ಹಸ್ತ ಚಾಚಿದ್ದಾರೆ. ಎಲ್ಲಾ ರಾಜ್ಯ ಮತ್ತು ರಾಷ್ಟ್ರಗಳ ಸಹಕಾರದಿಂದ ಅಲ್ಲಿ ಆಗಿರುವ ಹಾನಿ ನಿವಾರಣೆಯಾಗಿ ಬೇಗನೆ ಆ ರಾಜ್ಯ ಹಿಂದಿನ ದಿನಗಳನ್ನು ಕಾಣುವಂತಾಗಲಿ ಎಂದು ಆಶಿಸಿದರು.
                 ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕೇರಳ ಸಮಾಜಂನ ಅಧ್ಯಕ್ಷ ಒರಿಕ್ ಚಾಕೋ, ಉಪಾಧ್ಯಕ್ಷ ಶಿವರಾಜನ್ ಸೇರಿದಂತೆ ಸಮಾಜಂನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಹಿಂದೆಯೇ ಓಣಂ ಆಚರಿಸಬೇಕಿತ್ತು, ಆದರೆ ಕೇರಳದಲ್ಲಿ ಎದುರಾದ ಪ್ರವಾಹದ ಪರಿಸ್ಥಿತಿಯಿಂದಾಗಿ ಮುಂದೂಡಲಾಗಿದ್ದ ಕಾರ್ಯಕ್ರಮವನ್ನು ಈಗ ನಡೆಸಲಾಗುತ್ತಿದೆ. ನಿರಾಶ್ರಿತರಿಗೆ ನೆರವಾಗಲು ತುಮಕೂರಿನಲ್ಲಿ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕ ಎಸ್.ನಾಗಣ್ಣ, ಎನ್.ಎಸ್.ಜಯಕುಮಾರ್ ಸೇರಿದಂತೆ ಇತರೆ ಅನೇಕ ಮಹನೀಯರು ಕಾರಣೀಭೂತರಾಗಿದ್ದಾರೆ. ಅಂತಹವರೆಲ್ಲರನ್ನೂ ಸ್ಮರಿಸುವ ಕಾರ್ಯ ಇದಾಗಿದೆ ಎಂದು ಕೇರಳ ಸಮಾಜಂನ ಪದಾಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here