ಕೈ ಕತ್ತರಿಸಲು ಸುಪಾರಿ ಕೊಟ್ಟ ಪ್ರಿಯತಮೆ

0
38

ಬೆಂಗಳೂರು: 

              ಬನ್ನೇರುಘಟ್ಟ ಸಮೀಪದ ಬೆಟ್ಟದಲ್ಲಿ ಯುವಕನ ಕೈ ಕತ್ತರಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಕೈ ಕತ್ತರಿಸಲು ಪ್ರೇಯಸಿಯೇ ಸುಪಾರಿ ಕೊಟ್ಟಿರುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.

               ಪ್ರೇಯಸಿ ಜತೆ ಬನ್ನೇರುಘಟ್ಟಕ್ಕೆ ತೆರಳಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಸುಲಿಗೆ ನೆಪದಲ್ಲಿ ಬಂದ ಕೆಲವರು ಆತನ ಕೈ ಕಟ್​ ಮಾಡಿ, ಅನುಮಾನ ಬರದೆ ಇರಲಿ ಎಂದು ಮೊಬೈಲ್ ಹಾಗೂ ಪರ್ಸ್ ಕಸಿದುಕೊಂಡು ಹೋಗಿದ್ದರು. ಘಟನೆ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು.

             ಇದಾದ ನಂತರ ರವೀಶ್​ ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ನಂಬಲಾರದ ಸತ್ಯವೊಂದು ತಿಳಿದುಬಂದಿದೆ. ವಿಚಾರಣೆ ವೇಳೆ ತಾನು ತಪ್ಪು ಮಾಡಿರುವುದಾಗಿ ರವೀಶ್​ ಪ್ರೇಯಸಿ ಜಯಲಕ್ಷ್ಮಿ ತಪ್ಪೊಪ್ಪಿಕೊಂಡಿದ್ದಾರೆ.ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸರು ಜಯಲಕ್ಷ್ಮಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಿನ್ನಲೆ:
              ಮಧುಗಿರಿಯವರಾಗಿದ್ದ ಗಾಯಾಳು ರವೀಶ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ. 9 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರವೀಶ್​ ತನ್ನ ಅಣ್ಣ ಶಿವಕುಮಾರ್ ಜತೆ ಅನೇಕಲ್​ನ ಎರಂಡಹಳ್ಳಿಯಲ್ಲಿ ವಾಸವಾಗಿದ್ದ.

               ರವೀಶ್​ಗೆ ಜಯಲಕ್ಷ್ಮಿ ಎಂಬ ಮಹಿಳೆ ಪರಿಚಯವಾಗಿತ್ತು. ವೃತ್ತಿಯಲ್ಲಿ  ಪೊಲೀಸ್ ಪೇದೆ ಯಾಗಿರುವ ಜಯಲಕ್ಷ್ಮಿ ಹಾಗೂ ರವೀಶ್​ ನಡುವೆ ಪ್ರೀತಿ ಮೂಡಿತ್ತು. ಆದರೆ, ಪಾಲಕರು ಒಪ್ಪದ ಕಾರಣ ಇಬ್ಬರೂ ದೂರವಾಗಿದ್ದರು. ಈ ನಡುವೆ ಆಕೆಗೆ ಮತ್ತೊಬ್ಬನ ಜತೆ ವಿವಾಹವಾಗಿತ್ತು. ಸಾಂಸಾರಿಕ ಕಲಹದ ಕಾರಣ ಜಯಲಕ್ಷ್ಮಿ ಗಂಡನಿಂದಲೂ ದೂರಾಗಿ, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.

             ಈ ನಡುವೆ ಮತ್ತೆ ಹಳೆಯ ಪ್ರಿಯಕರ ರವೀಶ್​ನೊಂದಿಗೆ ಗೆಳೆತನ ಮುಂದುವರಿದಿತ್ತು. ಈ ವೇಳೆ ಜಯಲಕ್ಷ್ಮಿ ತನ್ನನ್ನು ಮದುವೆಯಾಗು ಎಂದು ರವೀಶ್​ ಅನ್ನು ಕೇಳಿದ್ದಾಳೆ. ಆದರೆ, ಆಕೆಗೆ ಮೊದಲೆ ಮದುವೆ ಆಗಿದ್ದರಿಂದ ರವೀಶ್​ ಮದುವೆ ಮಾತು ತರದಂತೆ ಸೂಚಿಸಿದ್ದಾನೆ.

              ಇದಕ್ಕೆ ಕೋಪಗೊಂಡ ಜಯಲಕ್ಷ್ಮಿ ರವೀಶ್​ಗೆ ಸುಪಾರಿ ಕೊಟ್ಟು ಕೈ ಅಥವಾ ಕಾಲು ತೆಗೆಸಲು ನಿರ್ಧರಿಸಿದ್ದಳು. ಅಂಗವಿಕಲನಾದರೆ  ಆತನನ್ನು ಯಾರು ಮದುವೆ ಆಗುವುದಿಲ್ಲ. ಆಗ ಬೇರೆ ದಾರಿಯಿಲ್ಲದೆ ತನ್ನ ಬಳಿ ಬರುತ್ತಾನೆ ಎಂದು ಊಹೆ​ ಮಾಡಿದ್ದಾರೆ.  ಈ ಕೃತ್ಯ ಎಸಗಲು  ಕೆಲವು ಯುವಕರಿಗೆ ಸುಪಾರಿ ನೀಡಿದ್ದಾರೆ.  ಕೈ ಕತ್ತರಿಸಿದ ನಂತರ ಅಲ್ಲೆ ಬಿಡಬೇಡಿ ನೀವೆ ತೆಗೆದುಕೊಂಡು ಹೋಗಿ, ಇಲ್ಲದಿದ್ದರೆ ಚಿಕಿತ್ಸೆ ನೀಡಿ ಸರಿಪಡಿಸಬಹುದು ಎಂದು ಸೂಚಿಸಿದ್ದಾಳೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾಳೆ. 

LEAVE A REPLY

Please enter your comment!
Please enter your name here