ಚುನಾವಣೆಗೂ ಮುನ್ನವೇ ಬಿಜೆಪಿಗೆ ‘ಕೈ’ ಕೊಟ್ಟ ರಾಮನಗರ ಅಭ್ಯರ್ಥಿ..!!!

0
597

ಬೆಂಗಳೂರು

     ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಲ್. ಚಂದ್ರಶೇಖರ್ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದು, ಇದು ಬಿಜೆಪಿಗೆ ತೀವ್ರ ಮುಖಭಂಗವುಂಟು ಮಾಡಿದೆ.

     ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ತವರು ನೆಲದಲ್ಲಿ ಸೆಡ್ಡು ಹೊಡೆಯಲು ಹೊರಟ ಬಿಜೆಪಿ ನಾಯಕರಿಗೆ ಈ ಬೆಳವಣಿಗೆಯಿಂದ ಮುಜುಗರ ಎದುರಿಸುವಂತಾಗಿದೆ. ಈ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

        ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರ ಪುತ್ರರಾದ ಎಲ್. ಚಂದ್ರಶೇಖರ್ ಅವರನ್ನು ಕಣದಿಂದ ನಿವೃತ್ತಿಗೊಳಿಸುವಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮಹತ್ವದ ಪಾತ್ರ ವಹಿಸಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿದು, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರ ಸ್ವಾಮಿ ಅವರಿಗೆ ಬೆಂಬಲ ನೀಡಿರುವುದರ ಹಿಂದೆ ಭಾರೀ ಲೆಕ್ಕಚಾರವಿದೆ ಎಂದು ಹೇಳಲಾಗುತ್ತಿದೆ.

      ಬಿಜೆಪಿ ಸೇರಿ, ಟಿಕೆಟ್ ಪಡೆದಿದ್ದ ಚಂದ್ರಶೇಖರ್, ಬಿಜೆಪಿಯಿಂದ ಚುನಾವಣೆಗೆ ಕೋಟ್ಯಂತರ ರೂಪಾಯಿ ಹಣ ನೀಡುತ್ತಾರೆಂದು ನಂಬಿದ್ದರು. ಹಣದ ಆಸೆಗೆ ಬಿಜೆಪಿ ಸೇರಿ ಅಭ್ಯರ್ಥಿಯೂ ಆಗಿದ್ದರು. ಆದರೆ, ಕೊನೆಗೆ ಕೈಗೆ ಹಣ ಸಿಗದೇ ನಿರಾಶೆಗೊಂಡಿದ್ದರು. ರಾಮನಗರ ಹಣದ ಜಬಾಬ್ದಾರಿ ಸಿ.ಪಿ. ಯೋಗೇಶ್ವರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ಯುವ ಮುಖಂಡ ತುಳಸಿ ಮುನಿರಾಜು, ರಾಮನಗರ ಬಿಜೆಪಿ ಮುಖಂಡ ರುದ್ರೇಶ್‍ಗೆ ಪಕ್ಷದ ವರಿಷ್ಠರು ಜಬಾಬ್ದಾರಿ ನೀಡಿದ್ದರು. ಆದರೆ ಯಾರೊಬ್ಬರು ಹಣ ಬಿಚ್ಚಲಿಲ್ಲ. ಅಲ್ಲದೇ, ಪ್ರಚಾರಕ್ಕೂ ಸಾಥ್ ನೀಡಲಿಲ್ಲ.

      ಈ ಬೆಳವಣಿಗೆಯಿಂದ ಹತಾಶರಾದ ಬೆನ್ನಲ್ಲೆ ಕಾಂಗ್ರೆಸ್ ನಾಯಕರ ಸಂಪರ್ಕ ಸಾಧಿಸಿದ ಚಂದ್ರಶೇಖರ್ ರಹಸ್ಯವಾಗಿ ಡಿ.ಕೆ.ಶಿವಕುಮಾರ್ ಸಂಬಂಧಿ ಎಂಎಲ್‍ಸಿ ರವಿ ಭೇಟಿ ಮಾಡಿ, ಕಣದಿಂದ ಹಿಂದೆ ಸರಿಯುವ ಬಗ್ಗೆ ಅವರೊಂದಿಗೆ ಪ್ರಸ್ತಾಪ ಮಾಡಿದರು. ಕಣದಿಂದ ಹಿಂದೆ ಸರಿಯಲು ನಾಲ್ಕು ಬೇಡಿಕೆಗಳನ್ನು ಚಂದ್ರಶೇಖರ್ ಮುಂದಿಟ್ಟಿದ್ದರು. ಮೊದಲನೆಯದು, 3 ಕೋಟಿ ಹಣಕ್ಕೆ ಬೇಡಿಕೆ. ಎರಡನೆಯದು, ತಂದೆ ಸಿಎಂ ಲಿಂಗಪ್ಪನವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ, ತನಗೊಂದು ಆಯಾಕಟ್ಟಿನ ನಿಗಮ, ಮಂಡಳಿ ಹುದ್ದೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ ನಂತರ ಚಂದ್ರಶೇಖರ್ ಪಕ್ಷ ಸೇರಿದರು ಎನ್ನಲಾಗಿದೆ.

ಈ ಮಿಂಚಿನ ಬೆಳವಣಿಗೆಯಿಂದ ಉಪಚುನಾವಣೆಯಲ್ಲಿ ನಡೆಯುತ್ತಿರುವ ತಂತ್ರಗಾರಿಕೆ, ಪರಸ್ಪರ ಏಟು-ಎದಿರೇಟಿನ ರಾಜಕಾರಣ ಮೇರೆ ಮೀರಿದೆ. ಆಪರೇಷನ್ ಕಮಲದ ಮೂಲಕ ದೋಸ್ತಿ ಸರ್ಕಾರ ಉರುಳಿಸುವ ಮಾತನಾಡುತ್ತಿರುವ ಬಿಜೆಪಿ ನಾಯಕರಿಗೆ ಮರ್ಮಾಘಾತವಾಗಿದೆ. ಬಿಜೆಪಿಯಲ್ಲಿನ ಮಸುಕಿನ ಗುದ್ದಾಟ, ಒಗ್ಗಟ್ಟಿನ ಕೊರತೆಯನ್ನು ಈ ಪ್ರಕರಣ ಬಟಾಬಯಲು ಮಾಡಿದ್ದು ಮುಖ್ಯಮಂತ್ರಿಗಳ ತವರು ಕ್ಷೇತ್ರ ರಾಮನಗರದಲ್ಲಿ ಬಿಜೆಪಿ ಶರಣಾಗತಿಯಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಮತ್ತಷ್ಟು ಸುಲಭವಾಗಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಚಂದ್ರಶೇಖರ್ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಯಡಿಯೂರಪ್ಪ ಸೇರಿದಂತೆ ಯಾರೂ ಸಹ ತಮ್ಮ ಪರ ಪ್ರಚಾರಕ್ಕೆ ಬರಲಿಲ್ಲ. ಬಿಜೆಪಿ ಮುಖಂಡರಲ್ಲಿ ಒಗ್ಗಟ್ಟಿಲ್ಲ. ಇದೇ ದಾರಿಯಲ್ಲಿ ಮಂಡ್ಯಕ್ಕೆ ತೆರಳುವ ಆರ್.ಅಶೋಕ್ ಇಲ್ಲಿ ಗಾಡಿ ನಿಲ್ಲಿಸಿ ತಮ್ಮನ್ನು ಮಾತನಾಡಿಸುವ ಸೌಜನ್ಯವನ್ನು ತೋರಿಸಿಲ್ಲ ಎಂದು ಅಸಮಧಾನ ತೋಡಿಕೊಂಡಿದ್ದಾರೆ.

ಆಯಾರಾಂ ಗಯಾರಾಂ ಆಟದಲ್ಲಿ ಬಿಜೆಪಿಗೆ ಆಗಿರುವ ಮುಖಭಂಗ ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಪಾಠವಾಗಿದೆ. ಯುದ್ಧ ಸಂದರ್ಭದಲ್ಲಿ ತಮ್ಮ ಪಡೆಯನ್ನು ದುರ್ಬಲಗೊಳಿಸಲು ಯತ್ನಿಸಿದ ಬಿಜೆಪಿಗೆ ಕಾಂಗ್ರೆಸ್ ಮುಖಂಡರು ಸರಿಯಾದ ತಿರುಗೇಟು ನೀಡಿದ್ದು, ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಚಂದ್ರಶೇಖರ್, ಕೇವಲ 15 ದಿನಗಳಲ್ಲಿ ಬಿಜೆಪಿ ನಾಯಕರ ಗುಣ ಗೊತ್ತಾಯಿತು. ಸದಾನಂದಗೌಡರನ್ನು ಕಂಡರೆ ಸಿ ಪಿ ಯೋಗೇಶ್ವರ್‍ಗೆ ಆಗುವುದಿಲ್ಲ. ಯಡಿಯೂರಪ್ಪ ಅವರನ್ನು ನೋಡಿದರೆ ಬಿಜೆಪಿ ನಾಯಕರಿಗೆ ಆಗುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಬಿಜೆಪಿಯ ಕೆಲವರಿಗೆ ಇಷ್ಟ ಇಲ್ಲ. ಬಿಜೆಪಿಯಲ್ಲಿ ಹಲವಾರು ಗುಂಪುಗಳಿವೆ ಎಂದು ಆಪಾದಿಸಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here