ಕೊಟ್ಟೂರು ತಾಲೂಕು ಮತ್ತು ಪೋಲಿಸ್ ಆಡಳಿತದ ಮಧ್ಯ ಪ್ರವೇಶ, ಸಾಣೇಹಳ್ಳಿ ಶ್ರೀಗಳ ಶ್ರಾವಣ ಸಂಜೆ ಕಾರ್ಯಕ್ರಮಕ್ಕೆ ಸಮ್ಮತಿ

0
47

ಕೊಟ್ಟೂರು :

      ತರಳಬಾಳು ಶಾಖಾ ಮಠದ ಸಾಣೇಹಳ್ಳಿ ಶ್ರೀಗಳ ಶ್ರಾವಣ ಸಂಜೆ ಮತ್ತಿತರ ಕಾರ್ಯಕ್ರಮಗಳಿಗೆ ಸಲ್ಲಿಕೆಯಾಗಿದ್ದ ಅಕ್ಷೇಪಣೆ ಮತ್ತು ವಿರೋಧ ಪ್ರಕ್ರಿಯೆಗೆ ತಡೆ ನೀಡುವಲ್ಲಿ ಕೊಟ್ಟೂರು ತಾಲೂಕು ಮತ್ತು ಪೋಲಿಸ್ ಆಡಳಿತ ಯಶಸ್ವಿಯಾಗಿ ಸುಗುಮವಾಗಿ ಕಾರ್ಯಕ್ರಮ ನಡೆಯಲು ಅನುವು ಮಾಡಿಕೊಡುವ ಮೂಲಕ ಸೌಹಾರ್ದತೆ ಮತ್ತು ಸಾಮರಸ್ಯದ ಸಂದೇಶವನ್ನು ಜನತೆಗೆ ಬುಧವಾರ ಸಾರಿದ್ದಾರೆ.

      ಈ ಬೆಳವಣಿಗೆಯಿಂದಾಗಿ ನಿಗದಿಗೊಂಡಿದ್ದ ಶ್ರಾವಣ ಸಂಜೆ, ಪರಿಸರ ಜಾಗೃತಿ ಮತ್ತು ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಯವರ ಪಾದಯಾತ್ರೆ ಮತ್ತಿತರ ಕಾರ್ಯಕ್ರಮಗಳು ನಿಗದಿಗೊಂಡಂತೆ ಆಗಸ್ಟ್ 18ರಂದು ಕೊಟ್ಟೂರು ತಾಲೂಕಿನ ಸುಂಕದಕಲ್ಲು ಗ್ರಾಮದಲ್ಲಿ ನಡೆಯಲಿವೆ.

      ತಾಲೂಕಿನ ಸುಂಕದಕಲ್ಲು ಗ್ರಾಮದಲ್ಲಿ ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ಶ್ರಾವಣ ಸಂಜೆ ಮತ್ತಿತರ  ಕಾರ್ಯಕ್ರಮಗಳನ್ನು ಗ್ರಾಮದ ಸಾದು ಲಿಂಗಾಯತ ಸಮಾಜ ಬಾಂಧವರು ಹಮ್ಮಿಕೊಂಡಿದ್ದರು. ಗ್ರಾಮದಲ್ಲಿನ ಇತರ ಸಮಾಜ ಬಾಂಧವರು ಈ ಕಾರ್ಯಕ್ರಮಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರಲ್ಲದೇ ಆಶಾಂತಿ ವಾತಾವರಣಕ್ಕೆ ಅವಕಾಶ ನೀಡಬಾರದೆಂದು ಕೊಟ್ಟೂರು ಪೋಲಿಸ್ ಮತ್ತು ತಾಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದರು. ಈ ಆಕ್ಷೇಪಣೆಗೆ ಸಾದು ಲಿಂಗಾಯತ ಸಮಾಜ ಬಾಂಧವರು ವಿರೋಧಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ತಾಲೂಕು ಆಡಳಿತಕ್ಕೆ ಮೊರೆಹೋಗಿದ್ದರು.

      ಈ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ಕೊಟ್ಟೂರು ತಹಶೀಲ್ದಾರ್ ಮಂಜುನಾಥ ಕೆ ಸರ್ಕಲ್ ಇನ್ಸ್‍ಪೆಕ್ಟರ್ ರವೀಂದ್ರ ಕುರುಬಗಟ್ಟೆ ಸಬ್ ಇನ್ಸ್‍ಪೆಕ್ಟರ್ ತಿಮ್ಮಣ್ಣ ಎಸ್.ಚಾಮನೂರ್ ಬುಧವಾರ ಸುಂಕದಕಲ್ಲು ಗ್ರಾಮಕ್ಕೆ ಬೇಟಿ ನೀಡಿ ಅಲ್ಲಿನ ಆಂಜಿನೇಯ ದೇವಸ್ಥಾನದಲ್ಲಿ ಶಾಂತಿ ಸಭೆ ಕರೆದು ಗ್ರಾಮದ ಎಲ್ಲಾ ಜಾತಿ ಸಮುದಾಯದವರನ್ನು ಆಹ್ವಾನಿಸಿ ಮಾತುಕತೆ ನಡೆಸಿದರು.

      ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಕೆಲ ಮುಖಂಡರು ಮೊದಲಿನಿಂದಲೂ ಉಜ್ಜಯಿನಿ ಸದ್ದರ್ಮ ಪೀಠದ ಕಾರ್ಯಕ್ರಮಗಳು ಮಾತ್ರ ಸುಂಕದಕಲ್ಲು ಗ್ರಾಮದಲ್ಲಿ ನಡೆಯುವುದು ವಾಡಿಕೆ. ಈ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಜ್ಜಯಿನಿ ಪೀಠದ ಭಕ್ತರು. ಇದೀಗ ಒಮ್ಮೆಲೆ ತರಳಬಾಳು ಪೀಠದ ಸಾಣೇಹಳ್ಳಿ ಶ್ರೀಗಳ ಕಾರ್ಯಕ್ರಮವನ್ನು ಸಾದು ಲಿಂಗಾಯತ ಸಮಾಜದವರು ಹಮ್ಮಿಕೊಂಡಿರುವುದು ಸರಿಯಲ್ಲ. ಮೊದಲಿನಿಂದ ಪಾಲಿಸಿಕೊಂಡು ಬಂದಿರುವಂತೆಯೇ ಉಜ್ಜಯಿನಿ ಜಗದ್ಗುರು ಪೀಠದ ಕಾರ್ಯಕ್ರಮಗಳು ಮಾತ್ರ ನಡೆಯಬೇಕು ಎಂದು ತಮ್ಮ ವಾದವನ್ನು ಮಂಡಿಸಿ ಆಗಸ್ಟ್ 18ರ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು.

      ಗ್ರಾಮದವರ ಅಭಿಪ್ರಾಯವನ್ನಾಲಿಸಿದ ತಹಶೀಲ್ದಾರ್ ಮಂಜುನಾಥ ಕೆ ಯಾವುದೇ ಜಾತಿ ಸಮುದಾಯದವರು ತಮ್ಮ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಧಾರ್ಮಿಕ ಸ್ವಾತಂತ್ರ್ಯವಿದೆ ಈಗಾಗಿ ಸಾದು ಲಿಂಗಾಯತ ಸಮಾಜ ಬಾಂಧವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.

      ಸರ್ಕಲ್ ಇನ್ಸ್‍ಪೆಕ್ಟರ್ ರವೀಂದ್ರ ಕುರುಬಗಟ್ಟೆ ಮಾತನಾಡಿ ಧಾರ್ಮಿಕ ವಿಷಯವನ್ನು ಪದೇ ಪದೇ ಕೆದುಕುವುದು ಸರಿಯಲ್ಲ ಎಲ್ಲಾ ಜನಾಂಗದವರಿಗೆ ಕಾರ್ಯಕ್ರಮ ನಡೆಸಲು ಸರ್ಕಾರದ ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಆಗಸ್ಟ್ 18ರ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲರೂ ಸಹಕರಿಸಬೇಕು ಎಂದು ಮನವೊಲಿಸುವ ಪ್ರಯತ್ನ ಸಾಗಿಸಿದರು.

      ತಹಶೀಲ್ದಾರ್ ಮತ್ತು ಸರ್ಕಲ್ ಇನ್ಸ್‍ಪೆಕ್ಟರ್‍ರವರ ಮಾತಿಗೆ ಸ್ಪಂದಿಸಿದ ಸುಂಕದಕಲ್ಲು ಗ್ರಾಮದ ಇತರ ಸಮಾಜ ಬಾಂದವರು ನಿಮ್ಮ ಸಲಹೆಯಂತೆ ಸಾದು ಲಿಂಗಾಯತ ಜನಾಂಗದವರು ಆಗಸ್ಟ್ 18ರಂದು ಗ್ರಾಮದಲ್ಲಿ ಸಭೆ ನಡೆಸಲಿ ಆದರೆ ಇತರ ಸಮಾಜದವರು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here