ಕೊನೆ ಭಾಗಕ್ಕೆ ಇನ್ನೂ 15 ದಿನಗಳಲ್ಲಿ ನೀರು ಹರಿಸಿ : ಶಾಸಕ ತಾಕೀತು

0
7

ದಾವಣಗೆರೆ :

      ತಕ್ಷಣವೇ ನಾಲೆಯಲ್ಲಿನ ಹೂಳು ಎತ್ತಿಸಿ, ಇನ್ನೂ ಹದಿನೈದು ದಿನಗಳಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ತಲುಪಿಸಬೇಕೆಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

      ತಾಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಗ್ರಾಮಗಳಾದ ಮಾಗಾನಹಳ್ಳಿ, ಕಡ್ಲೇಬಾಳು, ಅರಸಾಪುರ ಸೇರಿದಂತೆ ವಿವಿಧ ಗ್ರಾಮಗಳ ನಾಲೆಗಳಿಗೆ ಸೋಮವಾರ ಭೇಟಿ ನೀಡಿದ ರವೀಂದ್ರನಾಥ್ ರೈತರ ಸಮಸ್ಯೆಯನ್ನು ಆಲಿಸಿ, ನಾಲೆಯಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ನಾಲೆಯಲ್ಲಿನ ಹೂಳು ತೆಗಿಸದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.

      ನಾಲೆಯ ಕಾಲುವೆಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವುದಿಲ್ಲ. ಈ ಕೊನೆ ಭಾಗದಲ್ಲಿ ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಬೆಳೆ ಬೆಳೆಯಲು ನೀರು ಸಿಗದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ದೇವರ ಕೃಪೆಯಿಂದ ಈಗ ಭದ್ರಾ ಜಲಾಶಯ ಭರ್ತಿಗೊಂಡಿದ್ದು, ರೈತರು ಈ ಬಾರಿ ನಿರಂತರವಾಗಿ ನೀರು ಹರಿದು ಬರಲಿದ್ದು, ಉತ್ತಮ ಬೆಳೆ ಬೆಳೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ನಾಲೆಯಲ್ಲಿ ನೀರು ಹರಿಸುವ ಮುನ್ನವೇ ಹೂಳು ಎತ್ತಿಸುವುದನ್ನು ಬಿಟ್ಟು, ನೀವು ಈಗ ಹೂಳು ತೆಗೆಸಲು ಮುಂದಾಗಿದ್ದೀರಿ. ಇದನ್ನು ಮುಗಿಸುವುದು ಯಾವಾಗ ಎಂದು ರವೀಂದ್ರನಾಥ್ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.

      ಇದಕ್ಕೆ ಉತ್ತರಿಸಿದ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ವಿಕಾಸ್, ಕೊನೆ ಭಾಗದ ಕಾಲುವೆಯಲ್ಲಿನ ಹೂಳು ತೆಗೆಸಲು ಸರಕಾರದಿಂದ 16 ಲಕ್ಷ ಹಣ ಬಂದಿದೆ, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿಸಿ ಆದಷ್ಟು ಬೇಗ ಹೂಳು ಎತ್ತಿಸಿ, ಈ ಬಾರಿ ರೈತರು ಭತ್ತ ಬೆಳೆಯಲು ನೀರು ಹರಿಸುತ್ತೇವೆ. ಅಲ್ಲದೆ, ಅಕ್ರಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಲು ಹಗಲು-ರಾತ್ರಿ ಎನ್ನದೇ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಕೊನೆ ಭಾಗದ ರೈತರಾದ ಹಾಲೇಶಪ್ಪ, ಭೀಮಾ ನಾಯ್ಕ ಮತ್ತಿತರರು ಮಾತನಾಡಿ, ಭದ್ರಾ ಜಲಾಶಯ ತುಂಬಿ ನೀರು ಹರಿಯುತ್ತಿದೆ. ನಾಲೆಗೆ ಈಗಾಗಲೇ ನೀರು ಬಿಡಲಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದ ರೈತರಿಗೆ ಸಂತಸವಾಗಿದೆ. ಆದರೆ, ಕೊನೆಭಾಗಕ್ಕೆ ಇನ್ನೂ ನೀರು ತಲುಪಿಲ್ಲ. ಹೀಗಾಗಿ ನಮ್ಮ ಕಣ್ಣೀರು ಕಪಾಳಕ್ಕೆ ಬರುತ್ತಿದೆ. ನಾಲೆಗೆ ನೀರು ಹರಿಸುವ ಮುಂಚೆ ಹೂಳು ತೆಗೆಯಬಹುದಿತ್ತು. ಆದರೆ, ಆ ಕೆಲಸವನ್ನು ನೀರಾವರಿ ಅಧಿಕಾರಿಗಳು ಮಾಡಲಿಲ್ಲ. ಈಗ ಅವರು ಟೆಂಡರ್ ಕರೆದು, ಹೂಳು ತೆಗೆದು, ನಮಗೆ ನೀರು ಕೊಡುವುದು ಯಾವಾಗ ಎಂದು ಶಾಸಕರ ಎದುರು ಅಳಲು ತೋಡಿಕೊಂಡರು.

      ಜುಲೈ 12ರಿಂದಲೇ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡಲಾಗಿದೆ. ಭದ್ರಾ ಕಾಲುವೆಗೆ ನೀರು ಬಂದು 18 ದಿನ ಕಳೆದಿದೆ. ಆದರೆ ಕಾಲುವೆಯಲ್ಲಿ ಹೂಳು, ಅಕ್ರಮ ಪಂಪ್‍ಸೆಟ್ ಹಾವಳಿಯಿಂದ ಇನ್ನೂ ನೀರು ತಲುಪಿಲ್ಲ. ಮಾಗನಹಳ್ಳಿ, ಅರಸಾಪುರ, ಕಕ್ಕರಗೊಳ್ಳ, ಆವರಗೊಳ್ಳ, ಕಡ್ಲೆಬಾಳು, ಕೊಂಡಜ್ಜಿ, ಗಂಗನರಸಿ, ಕೆಂಚನಹಳ್ಳಿ, ಬುಳ್ಳಾಪುರ, ಮೇಗಳಗೆರೆ, ಮಾಗಾನಹಳ್ಳಿಗೆ ಇನ್ನೂ ನೀರು ತಲುಪಿಲ್ಲ. ಆದ್ದರಿಂದ ಈ ಬಾರಿಯೂ ಕೊನೆ ಭಾಗದ ರೈತರು ಭತ್ತ ಬೆಳೆಯಲಾಗುತ್ತಿಲ್ಲ. ಕೆಲ ರೈತರು ಮಾತ್ರ ಭತ್ತ ನಾಟಿ ಮಾಡಿದ್ದು, ಅವರು ಸಹ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಕೆಲವರು ಬೋರ್‍ವೆಲ್ ಮೂಲಕ ಭತ್ತಕ್ಕೆ ನೀರು ಹಾಯಿಸುತ್ತಿದ್ದರೇ, ಹಲವರು ಭತ್ತದ ಜಾಗದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಕಳೆದ 4 ವರ್ಷಗಳಿಂದ ಭತ್ತ ಬೆಳೆದಿಲ್ಲ. ಹೀಗಾಗಿ ಬದುಕುವುದೇ ಕಷ್ಟಕರವಾಗಿದೆ ಎಂದು ತಮ್ಮ ಆಕ್ರೋಶಭರಿತ ನುಡಿಗಳ ಮೂಲಕ ತಮ್ಮ ಸಮಸ್ಯೆಯನ್ನು ಶಾಸಕರ ಎದುರು ಅನಾವರಣಗೊಳಿಸಿದರು. 

      ರೈತರ ಸಮಸ್ಯೆ ಆಲಿಸಿದ ಶಾಸಕ ಎಸ್.ಎ.ರವೀಂದ್ರನಾಥ್, ತಕ್ಷಣವೇ ಟೆಂಡರ್ ಕರೆದು ಹೂಳು ತಗೆಸಿ, ಇನ್ನೂ 15 ದಿನಗಳಲ್ಲಿ ಕೊನೆ ಭಾಗದ ರೈತರಿಗೆ ನೀರು ತಲುಪಿಸಬೇಕೆಂದು ಸೂಚಿಸಿದರು.

     ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಧನಂಜಯ್ ಕಡ್ಲೇಬಾಳು, ಬಿ.ಎಸ್.ಜಗದೀಶ್, ಶಿವರಾಜ್ ಪಾಟೀಲ್, ಪ್ರಸನ್ನಕುಮಾರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು

ಕೊನೆ ಭಾಗಕ್ಕೆ ಇನ್ನೂ 15 ದಿನಗಳಲ್ಲಿ ನೀರು ಹರಿಸಿ
ಬಾಕ್ಸ್: ಕೇವಲ 7000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲು ನಿರ್ದೇಶನ ಇರುವ ಕಾರಣದಿಂದ ಜಲಸಂಪನ್ಮೂಲ ಸಚಿವರು ಭತ್ತ ಬೆಳೆಯದಂತೆ ರೈತರಿಗೆ ಸೂಚನೆ ನೀಡಿದ್ದಾರೆ. ಆದರೆ, ಈ ವರ್ಷ ಭದ್ರಾ ಜಲಾಶಯ ಭರ್ತಿಯಾಗುತ್ತಿದೆ. ಹೀಗಾಗಿ ಭತ್ತ ಬೆಳೆಯಲು ನೀರು ಸಿಗಲಿದೆ. ಆದ್ದರಿಂದ ತಲೆ ಕೆಡಸಿಕೊಳ್ಳಬೇಡಿ ನಿಮ್ಮ ಪಾಡಿಗೆ ನೀವು ಭತ್ತ ಬೆಳೆಯಿರಿ.

-ಎಸ್.ರವೀಂದ್ರನಾಥ್,
ಉತ್ತರ ಕ್ಷೇತ್ರದ ಶಾಸಕರು.

LEAVE A REPLY

Please enter your comment!
Please enter your name here