ಕೊನೆ ಭಾಗಕ್ಕೆ ನೀರು ತಲುಪದಿದ್ದರೆ ಅಧಿಕಾರಿಗಳೇ ಹೊಣೆ

0
54

ದಾವಣಗೆರೆ :

      ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪದಿರುವ ಬಗ್ಗೆ ರೈತರಿಂದ ದೂರುಗಳು ಬಂದರೆ, ನೀರಾವರಿ ಇಲಾಖೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಸಣ್ಣ ಕೈಗಾರಿಕೆಗಳ ಸಚಿವ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್(ವಾಸು) ಎಚ್ಚರಿಸಿದರು.

      ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನೀರಾವರಿ ಇಲಾಖೆ ಅಧಿಕಾರಿಗಳು ಭದ್ರಾ ನಾಲೆಯ ಕೊನೆ ಭಾಗಕ್ಕೆ ನೀರು ಹರಿಸಲು ಸೂಕ್ತಕ್ರಮ ಕೈಗೊಳ್ಳಬೇಕು. ಅಕಸ್ಮಾತ್ ಕೊನೆ ಭಾಗಕ್ಕೆ ನೀರು ತಲುಪದಿರುವ ಬಗ್ಗೆ ರೈತರಿಂದ ದೂರು ಬಂದರೆ, ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

      ಭದ್ರಾ ನಾಲೆಯ ಕೊನೆ ಭಾಗದವರೆಗೂ ನೀರು ಸರಾಗವಾಗಿ ಹರಿದು ಹೋಗುವಂತೆ, ನಾಲೆಯನ್ನು ಮುಕ್ತಗೊಳಿಸಬೇಕು. ರೈತರಿಗೆ ಬೆಳೆ ಬೆಳೆಯದಿರಲೂ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

      ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎಸ್ ಎ ರವೀಂದ್ರನಾಥ್, ಭದ್ರಾ ಅಚ್ಚುಕಟ್ಟು ಭಾಗದ ಕೊನೆ ಭಾಗದಲ್ಲಿ ಈವರೆಗೂ ನೀರು ತಲುಪಿಲ್ಲ. ಹೀಗಾಗಿ ಮೆಕ್ಕೆಜೋಳ ಸೇರಿದಂತೆ ಕೆಲ ಬೆಳೆಗಳು ಒಣಗಲು ಆರಂಭಿಸಿವೆ. ಡ್ಯಾಂ ತುಂಬುದಕ್ಕೂ ಮುಂಚೆಯೇ ನಾಲೆಗಳ ದುರಸ್ತಿ ಮಾಡಿ ಕೊನೆ ಭಾಗದವರಿಗೆ ನೀರು ತಲುಪುವಂತೆ ನೋಡಿಕೊಳ್ಳಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ. ಇನ್ನೂ ನೀರು ತಲುಪುವುದು ಯಾವಾಗ ಎಂದು ಪ್ರಶ್ನಿಸಿದರು.

      ಈ ವೇಳೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಭದ್ರಾ ಕಾಲುವೆಯ ಉದ್ದಕ್ಕೂ ಸುಮಾರು 8 ಸಾವಿರಕ್ಕೂ ಹೆಚ್ಚು ಅಕ್ರಮ ಪಂಪ್‍ಸೆಟ್ ಅಳವಡಿಸಲಾಗಿದ್ದು, ಸುಮಾರು 50 ಹೆಚ್‍ಪಿ ಪಂಪ್‍ಸೆಟ್‍ಗಳ ಮೂಲಕ ನೀರು ಎತ್ತಲಾಗುತ್ತಿದೆ. ಕಳೆದ ವರ್ಷ ಕಾರ್ಯಾಚರಣೆ ನಡೆಸಿ, ಸುಮಾರು 2000ಕ್ಕೂ ಹೆಚ್ಚು ಅಕ್ರಮ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿದ್ದೇವೆ. ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ನೀರೆತ್ತುವ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಕೊನೆ ಭಾಗಕ್ಕೆ ಶೀಘ್ರದಲ್ಲಿಯೇ ನೀರು ತಲುಪಲಿದೆ ಎಂದರು.

      ಶಾಸಕ ರವೀಂದ್ರನಾಥ್ ಮಾತನಾಡಿ, ರೂ. 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಾಜಿನಮನೆ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಹೆಚ್ಚುವರಿಯಾಗಿ 5.25 ಕೋಟಿ ಅನುದಾನ ಬೇಕೆಂದು ಕೇಳುತ್ತಿದ್ದಾರೆ. ತಕ್ಷಣ ಸರ್ಕಾರದಿಂದ ಮಂಜೂರು ಮಾಡಿಸಿ ಗಾಜಿನ ಮನೆ ಉಪಯೋಗವಾಗುವಂತೆ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು. ಹಾಗೂ ನದೀಪಾತ್ರದಲ್ಲಿದ್ದರೂ ನಮಗೆ ಮರಳು ದೊರೆಯುತ್ತಿಲ್ಲ. ಆಶ್ರಯ ಮನೆಗಳನ್ನು ನಿರ್ಮಿಸಲು ಬಡವರಿಗೆ ಮರಳು ಸಿಗುತ್ತಿಲ್ಲ. ಎಲ್ಲ ಹೊರ ಜಿಲ್ಲೆಗಳಿಗೆ ಹೋಗುತ್ತಿದೆ ಎಂದು ಆರೋಪಿಸಿದರು.

      ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಹೊನ್ನಾಳಿಯ ಎರಡು ಮರಳಿನ ಬ್ಲಾಕ್‍ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮರಳು ಉಪಯೋಗಿಸಿಕೊಳ್ಳಲು ಮೀಸಲಿಡಲಾಗಿದೆ. ಹಾಗೂ ಎಲ್ಲಾ ಮರಳು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಎಂ-ಸ್ಯಾಂಡ್ ಸಾಕಷ್ಟು ಪ್ರಮಾಣದಲ್ಲಿದ್ದರೂ ಜನರು ಆಸಕ್ತಿ ತೋರುತ್ತಿಲ್ಲ. ಬೆಂಗಳೂರಿನಂತ ಕಡೆ ಬಹು ಮಹಡಿ ಕಟ್ಟಡಗಳನ್ನು ಎಂ-ಸ್ಯಾಂಡ್‍ನಿಂದ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಬೇಕೆಂದು ತಿಳಿಸಿದರು.

      ಸಚಿವ ಶ್ರೀನಿವಾಸ್ ಮಾತನಾಡಿ, ಕೈಗಾರಿಕಾ ಅಭಿವೃದ್ಧಿ ಮಂಡಳಿಯವರು ಸಣ್ಣ ಕೈಗಾರಿಕೆಗಳಿಗೆ ನೀಡುವ ನಿವೇಶನಗಳು ಅತಿ ದುಬಾರಿಯಾಗಿರುತ್ತವೆ. ಒಂದು ಎಕರೆಗೆ ಒಂದರಿಂದ ಎರಡು ಕೋಟಿ ವರೆಗೆ ಬೆಲೆ ನಿಗದಿ ಮಾಡಿರುತ್ತೀರಿ. ಆದರೆ ಅದರ ಪಕ್ಕದ ಜಮೀನುಗಳು ಎಕರೆ ರೂ. 10 ಲಕ್ಷ ಇರುತ್ತವೆ. ಹೀಗಿದ್ದಾಗ ಸಣ್ಣ ಕೈಗಾರಿಕೆ ಆರಂಭಿಸಲು ಉದ್ಯಮಿಗಳು ಹೇಗೆ ಮುಂದೆ ಬರುತ್ತಾರೆ. ತಾವು ನಿರ್ಮಿಸುವ ಒಂದು ಅಡಿ ದಪ್ಪದ ಸಿಮೆಂಟ್ ರಸ್ತೆಗಳು ಅವಶ್ಯವೇ ಇಲ್ಲ. ಹಾಗಾಗಿ ಈ ಬಗೆಗೆ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಮಗ್ರವಾಗಿ ಪರಿಶೀಲಿಸಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚು ಪ್ರೋತ್ಸಾಹ ನೀಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.

      ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್ ಸಭೆಗೆ ಮಾಹಿತಿ ನೀಡಿ ಶೇ. 76 ರಷ್ಟು ಬಿತ್ತನೆ ಇಲ್ಲಿಯವರೆಗೆ ಆಗಿದೆ. 3.24 ಲಕ್ಷ ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳಾದ ಮೆಕ್ಕೆಜೋಳ, ಭತ್ತ ಸೇರಿದಂತೆ ಹಲವು ಬೆಳೆಗಳ ನಾಟಿ ಕಾರ್ಯ ಮುಗಿದಿದೆ. ಜಿಲ್ಲೆಯ 15 ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ ಮಾತನಾಡಿ, ಎರಡು ಜಿಲ್ಲಾ ಮಟ್ಟದ ಆಸ್ಪತ್ರೆ ಐದು ತಾಲ್ಲೂಕು ಆಸ್ಪತ್ರೆಗಳು, 98 ಪಿಹೆಚ್‍ಸಿ ಕಾರ್ಯ ನಿರ್ವಹಿಸುತ್ತಿದ್ದು, ತಜ್ಞ ವೈದ್ಯರ ಕೊರತೆ ಇದೆ. ಈವರೆಗೆ 86 ಡೆಂಗ್ಯು ಪ್ರಕರಣ ಪತ್ತೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದರು.

      ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾತನಾಡಿ, ಜಿಲ್ಲೆ ಪಿಯು ಫಲಿತಾಂಶದಲ್ಲಿ 15 ನೇ ಸ್ಥಾನದಲ್ಲಿದೆ. ಈ ಹಿಂದೆ 19 ನೇ ಸ್ಥಾನದಲ್ಲಿತ್ತು. ಅದನ್ನು 10 ರ ಒಳಗಿನ ಸ್ಥಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.

      ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರಪ್ಪ ಮಾಹಿತಿ ನೀಡಿ, ಪಠ್ಯ ಪುಸ್ತಕಗಳು ಬಂದಿವೆ. ಶೂ ಖರೀದಿಸಲು ರೂ. 4 ಕೋಟಿ ಯನ್ನು ಎಸ್‍ಡಿಎಂಸಿ ಗೆ ಬಿಡುಗಡೆ ಮಾಡಲಾಗಿದೆ ಎಂದರು.

      ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಳ್ಳೆಯ ಬ್ರಾಂಡೆಡ್ ಕಂಪೆನಿಯ ಶೂಗಳನ್ನು ಒದಗಿಸಿ. ಹಾಗೂ ಶಾಲಾ ಕಟ್ಟಡಗಳು ಎಷ್ಟು ಅಗತ್ಯವಿದೆ ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಎಂದರು.

      ಸಭೆಯಲ್ಲಿ ಪ್ರಭಾರ ಜಿ ಪಂ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ, ಜಿ ಪಂ ಸಿಇಓ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 ಅಭಿವೃದ್ಧಿಗೆ ಪ್ರಯತ್ನ

      ತಮ್ಮೆಲ್ಲರ ಸಹಕಾರದೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಅವುಗಳ ಜಾರಿಗೆ ತಮ್ಮೆಲ್ಲರ ಸಹಕಾರ, ಸಲಹೆ-ಸೂಚನೆಗಳ ಅವಶ್ಯಕತೆ ಇದೆ. ಜಿಲ್ಲಾಡಳಿತ ಹಾಗೂ ಇಲಾಖೆಗಳು ಉತ್ತಮವಾಗಿ ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರು ಯಾವುದೇ ಕೆಲಸಕ್ಕೆ ಅಲೆದಾಡುವುದು ಬೇಡ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಬದ್ದತೆಯಾಗಿರಬೇಕು.
                                                                                -ಎಸ್.ಆರ್.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಸಚಿವ.

LEAVE A REPLY

Please enter your comment!
Please enter your name here