ಕೊನೆ ಭಾಗಕ್ಕೆ ನೀರು ತಲುಪಿಸಲು ರೈತರ ಒತ್ತಾಯ

0
26

 ದಾವಣಗೆರೆ :

      ಅಕ್ರಮ ಪಂಪ್‍ಸೆಟ್ ತೆರವುಗೊಳಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪಿಸಬೇಕೆಂದು ಒತ್ತಾಯಿಸಿ, ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಕೊನೆ ಭಾಗದ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

      ನಗರದ ಹದಡಿ ರಸ್ತೆಯಲ್ಲಿರುವ ನೀರಾವರಿ ಇಲಾಖೆಯ ಕಚೇರಿ ಎದುರು ಜಮಾಯಿಸಿದ ರೈತರು, ಭದ್ರಾ ನಾಲೆಗೆ ನೀರು ಹರಿಸಿ ತಿಂಗಳೂ ಸಮೀಪಿಸುತ್ತಾ ಬಂದಿದ್ದರೂ, ಕೊನೆ ಭಾಗಕ್ಕೆ ನೀರು ತಲುಪಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಶಾಬನೂರು ಲಿಂಗರಾಜ್, ಭದ್ರಾ ನಾಲೆಯ ಮೇಲ್ಭಾಗದ ರೈತರು ಅಕ್ರಮವಾಗಿ ನಾಲೆಯಲ್ಲಿ ಪಂಪ್‍ಸೆಟ್‍ಗಳನ್ನು ಅಳವಡಿಸಿ, ನೀರು ಕದಿಯುತ್ತಿರುವುದರಿಂದ ನಾಲೆಯಲ್ಲಿ ನೀರು ಹರಿಸಿ, ಸುಮಾರು 25 ದಿನ ಕಳೆದರೂ ಇನ್ನೂ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಅರಸಾಪುರ, ಸಾರಥಿ, ಕೆಂಚವ್ವನಹಳ್ಳಿ, ಬುಳ್ಳಾಪುರ, ಸಿಂಗ್ರಿಹಳ್ಳಿ, ಕೊಂಡಜ್ಜಿ, ವೊಡ್ಡಿನಹಳ್ಳಿ, ಕುರುಬರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನಾಲೆಯಲ್ಲಿ ಇನ್ನೂ ನೀರು ಬಂದಿಲ್ಲ ಎಂದು ಆರೋಪಿಸಿದರು.

      ಜವಾಬ್ಧಾರಿಯುತ ನೀರಾವರಿ ಇಲಾಖೆಯ ಅಧಿಕಾರಿಗಳು ಅಕ್ರಮ ಪಂಪ್‍ಸೆಟ್‍ಗಳನ್ನು ತೆರವು ಮಾಡಿಸುವ ಬದಲಿಗೆ, ಅವುಗಳಿಗೆ ಆಸರೆಯಾಗಿರುವುದೇ ಇನ್ನೂ ಕೊನೆ ಭಾಗಕ್ಕೆ ನೀರು ತಲುಪದಿರಲು ಕಾರಣವಾಗಿದೆ. ಕೊನೆ ಭಾಗಕ್ಕೆ ಇನ್ನೂ ನೀರು ತಲುಪದ ಕಾರಣಕ್ಕೆ ಇಂದಿಗೂ ಸಹ ನಾಟಿ ಮಾಡಲು ಸಾಧ್ಯವಾಗಿಲ್ಲ. ಇನ್ನು ಕೇವಲ 75 ದಿನ ಮಾತ್ರ ನಾಲೆಯಲ್ಲಿ ನೀರು ಹರಿಯಲಿದ್ದು, ಈ ಬಾರಿಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಈಗಾಗಲೇ ನಾಲ್ಕು ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ, ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

      ಅಧಿಕೃತ ಅಚ್ಚುಕಟ್ಟು ರೈತರ ಹಿತ ಕಾಯಬೇಕಾದ ನೀರಾವರಿ ಇಲಾಖೆ ಅಧಿಕಾರಿಗಳು ಅನಧಿಕೃತ ಪಂಪ್‍ಸೆಟ್‍ಗಳನ್ನು ಅಳವಡಿಸಿದವರ ಪರ ನಿಂತಿದ್ದಾರೆ. ಭದ್ರಾ ಅಚ್ಚುಕಟ್ಟು ಕಡೆಯ ಭಾಗಕ್ಕೆ ನೀರು ತಲುಪದಿದ್ದರೆ ನಾಲೆ ಕೊನೆಯ ಭಾಗದ ರೈತರು ಯಾವುದೇ ಕಾರಣಕ್ಕೂ ಬತ್ತ ನಾಟಿ ಮಾಡುವುದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ. ಆದ್ದರಿಂದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಅಕ್ರಮ ಪಂಪ್‍ಸೆಟ್‍ಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಕೊನೆ ಭಾಗಕ್ಕೆ ನೀರು ತಲುಪಿಸಬೇಕೆಂದು ಒತ್ತಾಯಿಸಿದ ಪ್ರತಿಭಟನಾನಿರತ ರೈತರು, ಆ.10ರೊಳಗೆ ಕೊನೆ ಭಾಗಕ್ಕೆ ನೀರು ತಲುಪಿಸದಿದ್ದರೆ, ನೀರಾವರಿ ಇಲಾಖೆಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

      ಪ್ರತಿಭಟನೆಯಲ್ಲಿ ರೈತರಾದ ಕೊಂಡಜ್ಜಿ ಮುನಿಯಪ್ಪ, ತಿಪ್ಪಣ್ಣ, ಹನುಮಂತಪ್ಪ, ಶೇಖರಪ್ಪ, ಅಶೋಕಪ್ಪ, ಜಗದೀಶಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here