ಕೋಟೆನಗರಿಯಲ್ಲಿ ಬಂದ್ ಭಾಗಶಃ ಯಶಸ್ಸಿ

0
7

ಚಿತ್ರದುರ್ಗ:

        ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಬಂದ್ ಭಾಗಶಃ ಯಶಸ್ವಿಯಾಯಿತು.

        ಸರ್ಕಾರಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ದಾವಣಗೆರೆ ರಸ್ತೆಯಲ್ಲಿರುವ ಸರ್ಕಾರಿ ಬಸ್ ನಿಲ್ದಾಣ ಪ್ರಯಾಣಿಕರು ಮತ್ತು ಬಸ್‍ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಮೆದೇಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಸ್‍ನಿಲ್ದಾಣದಲ್ಲಿ ಮಾತ್ರ ಖಾಸಗಿ ಬಸ್‍ಗಳು ಮಾಮೂಲಿನಂತೆ ಸಂಚರಿಸುತ್ತಿದ್ದವು. ಉಳಿದಂತೆ ಆಟೋ ಇನ್ನಿತರೆ ವಾಹನಗಳ ಸಂಚಾರ ಎಂದಿನಂತಿತ್ತು ಬಂದ್ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಗಾಂಧಿವೃತ್ತದಿಂದ ಹಿಡಿದು ಪ್ರವಾಸಿ ಮಂದಿರದವರೆಗೆ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಅಲ್ಲೊಂದು ಇಲ್ಲೊಂದು ಹೋಟಲ್, ಕಿರಾಣಿ ಅಂಗಡಿಗಳು ಬಂದ್ ಲೆಕ್ಕಿಸದೆ ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದವು. ಮೆದೇಹಳ್ಳಿ ರಸ್ತೆ, ಸಂತೆಹೊಂಡದ ರಸ್ತೆಯಲ್ಲಿ ಹೂವು, ಹಣ್ಣು, ತರಕಾರಿ ವ್ಯಾಪಾರಿಗಳು ಬಂದ್‍ಗೂ ನಮಗೂ ಸಂಬಂಧವಿಲ್ಲವೇನೋ ಎನ್ನುವಂತೆ ವ್ಯಾಪರ ವಹಿವಾಟು ನಡೆಸುತ್ತಿದ್ದರು.

         ಔಷಧಿ ಅಂಗಡಿಗಳು ಮಾತ್ರ ತೆರೆದಿದ್ದವು. ಕೆಲವು ಸ್ವೀಟ್‍ಸ್ಟಾಲ್ ಮತ್ತು ಬೇಕರಿಗಳು ಬೆಳಗಿನಿಂದಲೇ ಅರ್ಧ ಬಾಗಿಲು ತೆರೆದುಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದುದು ಕಂಡು ಬಂದಿತು.

         ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು, ಎ.ಐ.ಟಿ.ಯು.ಸಿ., ಸಿಐಟಿಯು, ಐ.ಎನ್.ಟಿ.ಯು.ಸಿ., ಬಿಸಿಯೂಟ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಬೆಳಗಿನಿಂದ ಮಧ್ಯಾಹ್ನದವರೆಗೆ ಗಾಂಧಿವೃತ್ತದಲ್ಲಿ ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

          ಕೆನರಾ ಬ್ಯಾಂಕ್ ಉದ್ಯೋಗಿಗಳು ಬ್ಯಾಂಕಿನ ಎದುರು ಘೋಷಣೆಗಳನ್ನು ಕೂಗುತ್ತ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ದ ಧಿಕ್ಕಾರಗಳನ್ನು ಕೂಗಿ ಬ್ಯಾಂಕ್ ಬಂದ್ ಮಾಡಿದ್ದರು. ಸರ್ಕಾರಿ ಕಚೇರಿಗಳ ಎದುರು ಪೊಲೀಸ್ ಕಾವಲು ಹಾಕಿದ್ದರಿಂದ ಎಂದಿನಂತೆ ಕೆಲಸ ನಿರ್ವಹಿಸಿದವು, ಗಾಂಧಿವೃತ್ತ, ಎಸ್.ಬಿ.ಎಂ.ಸರ್ಕಲ್, ಡಿ.ಸಿ.ಸರ್ಕಲ್‍ನಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತು. ಓಟ್ಟಾರೆ ಈ ಬಂದ್‍ನ ಬಿಸಿ ಜನಸಾಮಾನ್ಯರಿಗೆ ಅಷ್ಟಾಗಿ ತಟ್ಟಲಿಲ್ಲವಾದ್ದರಿಂದ ಕೆಲವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು.

         ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಯನ್ನು ಕೂಡಲೆ ಕೈಬಿಡಬೇಕು. ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಟ ಹದಿನೈದು ಸಾವಿರ ರೂ.ವೇತನ ನಿಗಧಿಪಡಿಸಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಇಳಿಸಿ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆಯನ್ನು ತುರ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

          ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಗೌಸ್‍ಪೀರ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.

         ಎ.ಐ.ಟಿ.ಯು.ಸಿ. ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಪಿ.ಲಕ್ಷ್ಮಿದೇವಿ, ಡಿ.ಲಕ್ಷ್ಮಣ, ಶಿವಣ್ಣ, ಎ.ನಾಗರಾಜ್, ನಾಗೇಶ್, ರಾಜಣ್ಣ, ಜಾವಿದ್‍ಭಾಷ, ಮನ್ಸೂರ್‍ಭಾಷ, ಹುಲಿಗೇಶ್, ಅಂಜಿನಪ್ಪ, ಹನುಮಂತಪ್ಪ, ಮುರುಗೇಶ್, ಎಂ.ತಿಪ್ಪೇಸ್ವಾಮಿ,

         ಐ.ಎನ್.ಟಿ.ಯು.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಮೆಹಬೂಬ್‍ಖಾತೂನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್, ಎ.ಐ.ಟಿ.ಯು.ಸಿ.ಮುಖಂಡರುಗಳಾದ ಟಿ.ಆರ್.ಉಮಾಪತಿ, ಬಸವರಾಜು, ಜಾಫರ್‍ಷರೀಫ್, ಸತ್ಯಕೀರ್ತಿ, ತಿಪ್ಪೇಸ್ವಾಮಿ, ಕರಿಯಪ್ಪ, ಜಮುನಾಬಾಯಿ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರು ಬಂದ್‍ನಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here