ಕೋಳಿಸಾಕಾಣಿಕೆಯಿಂದ ಮಹಿಳೆಯರು ಸಬಲರಾಗುತ್ತಾರೆ

0
68

ಹಗರಿಬೊಮ್ಮನಹಳ್ಳಿ:

      ಗ್ರಾಮೀಣ ಮಹಿಳೆಯರು ಮನೆಯಲ್ಲಿ ಕೋಳಿಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಹಂಪಾಪಟ್ಟಣ ಜಿ.ಪಂ ಸದಸ್ಯ ಕೆ.ಹೆಚ್.ಮಲ್ಲಿಕಾರ್ಜುನನಾಯ್ಕ ಹೇಳಿದರು.

ಪಟ್ಟಣದ ಹರದೇವಸ್ಥಾನದ ಬಳಿ ಇರುವ ಪಶು ಆಸ್ಪತ್ರೆಯ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ಗಿರಿರಾಜ ಕೋಳಿ ವಿತರಣೆ ಮಾಡಿ ಅವರು ಮಾತನಾಡಿ ರಾಜ್ಯ ಸರ್ಕಾರ ಕುಕ್ಕಟ ಉಧ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕುಕ್ಕಟ ಅಭಿವೃದ್ಧಿ ನಿಗಮದಿಂದ ಗ್ರಾಮೀಣ ಭಾಗದ ಮಹಿಳೆಯರು ಕೋಳಿ ಸಾಕಾಣಿಕೆ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. 2016-17 ಹಾಗೂ 2017-18 ರ ಸಾಲಿನ ಹಂಪಾಪಟ್ಟಣ ಜಿ.ಪಂ ವ್ಯಾಪ್ತಿಯ ಅರ್ಹ 110 ಫಲಾನುಭವಿಗಳನ್ನು ಆಯ್ಕೆಮಾಡಲಾಗಿದ್ದು ಎಲ್ಲರಿಗೂ ತಲಾ 10 ಗಿರಿರಾಜ ಕೋಳಿಗಳನ್ನು ವಿತರಿಸಲಾಗಿದೆ. ಫಲಾನುಭವಿಗಳು ಕೋಳಿ ಸಾಕಾಣಿಕೆ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲಿ ಎಂದರು.

ಪ್ರಭಾರಿ ಸಹಾಯಕ ನಿರ್ದೇಶಕ ಡಾ|| ಸೂರಪ್ಪ ಮಾತನಾಡಿ ಬಾಯ್ಲರ್ ಕೋಳಿಗಿಂತಲೂ ಗಿರಿರಾಜ ಕೋಳಿ ತೂಕ ಹೆಚ್ಚಾಗಿರುತ್ತದೆ. ಓಡಾಡಿಕೊಂಡು ಮೇಯುವುದರಿಂದ ಗಿರಿರಾಜ ಕೋಳಿಗಳಲ್ಲಿ ನ್ಯೂಟ್ರಿಷನ್ ಹೆಚ್ಚಾಗಿರುತ್ತದೆ. ಒಂದು ವರ್ಷ ಸಾಕಿದರೆ ಈ ತಳಿಯ ಕೋಳಿಗಳು 4 ರಿಂದ 5 ಕೆಜಿ ತೂಗುತ್ತವೆ. ಮಾರುಕಟ್ಟೆಯಲ್ಲಿ ಈ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಒಳ್ಳೆಯ ದುಬಾರಿ ಧರಕ್ಕೆ ಮಾರಾಟ ಮಾಡಬಹುದಾಗಿದೆ. ಕುಕ್ಕಟ ಅಭಿವೃದ್ಧಿ ನಿಗಮವು ಗಿರಿರಾಜ ತಳಿ ಪ್ರಚಾರಕ್ಕಾಗಿ ಪ್ರತೀ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಒಬ್ಬ ಫಲಾನುಭವಿಗೆ 10 ಕೋಳಿಗಳನ್ನು ವಿತರಿಸಲಾಗುತ್ತದೆ. ಅದೇರೀತಿ ಹಂಪಾಪಟ್ಟಣ ಜಿ.ಪಂ ವ್ಯಾಪ್ತಿಯ 110 ಅರ್ಹ ಫಲಾನುಭವಿಗಳಿಗೆ 1100 ಕೋಳಿಗಳನ್ನು ನೀಡುತ್ತಿದ್ದೇವೆ. ಅದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ನೀಡಲಾಗುವುದು. ಸಾಮಾನ್ಯವರ್ಗದ ಫಲಾನುಭವಿಗಳಿಗೆ 10 ಕೋಳಿಗೆ 175 ರೂ ಶುಲ್ಕ ಪಾವತಿಸಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೋರಿಗೇರಿ ಪಶು ವೈದ್ಯಾಧಿಕಾರಿ ಡಾ|| ಅಜಯ್ ಕುಮಾರ್ ನವೀನ್ ಕುಮಾರ್, ಟಿ.ಮಹೇಂದ್ರ, ನಾಗರಾಜ, ಫಲಾನುಭವಿಗಳಾದ ಲಲಿತಾ, ಮರಿಯಮ್ಮ, ಚನ್ನಬಸಮ್ಮ, ಹನುಮಕ್ಕ, ಇಂದಿರಾಬಾಯಿ, ಪುಷ್ಪಾವತಿ, ಶರಣಮ್ಮ, ಲಕ್ಷ್ಮಮ್ಮ, ನಂದಿನಿ, ಮಂಜುಳ, ಮತ್ತು ಪಶು ಆಸ್ಪತ್ರೆಯ ಸಿಬ್ಬಂದಿಗಳಾದ ಜಿ.ವೈ ರಾಜಶೇಖರ, ರಾಘವೇಂದ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here